Select Your Language

Notifications

webdunia
webdunia
webdunia
webdunia

ಸುದೀಪ್‌ರ ಫೂಂಕ್ 2 ಚಿತ್ರ ನೋಡಿ, ಐದು ಲಕ್ಷ ಗೆಲ್ಲಿ!

ಸುದೀಪ್‌ರ ಫೂಂಕ್ 2 ಚಿತ್ರ ನೋಡಿ, ಐದು ಲಕ್ಷ ಗೆಲ್ಲಿ!
IFM
ಸುದೀಪ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಹಿಂದಿ ಚಿತ್ರ ಫೂಂಕ್ 2 ವೀಕ್ಷಿಸಿ 5 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅದ್ಭುತ ಅವಕಾಶ ನಿಮ್ಮ ಪಾಲಿಗಿದೆ. ಆದರೆ ಅದಕ್ಕೆ ಮಾಡಬೇಕಾದ ಏಕೈಕ ಕೆಲಸವೆಂದರೆ ನೀವೊಬ್ಬರೇ ಇಡೀ ಥಿಯೇಟರಿನಲ್ಲಿ ಕೂತು ಈ ಸಿನಿಮಾ ನೋಡಬೇಕು. ಧೈರ್ಯವಾಗಿ ನೋಡಿ ಹೊರಬಂದರೆ ನಿಮಗೆ ಐದು ಲಕ್ಷ ರೂಪಾಯಿ ಗ್ಯಾರೆಂಟಿ.

webdunia
IFM
ಹೌದು. ಫೂಂಕ್ 2 ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಕಾಣಲಿದೆ. ಕನ್ನಡದ ನಮ್ಮ ಸುದೀಪ್ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೆದರಿಸುವ ನಿರ್ದೇಶಕ, ನಿರ್ಮಾಪಕರೆಂದೇ ಖ್ಯಾತಿವೆತ್ತ ರಾಮ್ ಗೋಪಾಲ್ ವರ್ಮಾರ ನಿರ್ಮಾಣದಲ್ಲಿ ಈ ಚಿತ್ರ ಹೊರಬಂದಿದೆ.

ಖಂಡಿತವಾಗಿಯೂ ಈ ಚಿತ್ರ ನೋಡುವವರು ಚಿತ್ರಮಂದಿರದಲ್ಲಿ 30 ನಿಮಿಷಕ್ಕಿಂತ ಹೆಚ್ಚು ಕಾಲ ಒಬ್ಬರೇ ಕೂರುವ ಧೈರ್ಯ ಮಾಡುವುದಿಲ್ಲ ಎಂದು ವರ್ಮಾ ಚಾಲೆಂಜ್ ಮಾಡಿದ್ದಾರೆ, ಅಷ್ಟೊಂದು ಭಯಾನಕತೆಯಿಂದ ಕೂಡಿದೆಯಂತೆ ಈ ಚಿತ್ರ. ಹಾಗಾಗಿ ಈ ಚಿತ್ರವನ್ನು ಥಿಯೇಟರಿನ ಕತ್ತಲೆಯಲ್ಲಿ ಒಬ್ಬರೇ ಕೂತು ಇಡಿಯಾಗಿ ನೋಡಿದರೆ ಖಂಡಿತವಾಗಿಯೂ ಆ ವ್ಯಕ್ತಿಗೆ ಐದು ಲಕ್ಷ ಬಹುಮಾನ ನೀಡುತ್ತೇವೆ ಎಂದು ವರ್ಮಾ ಘೋಷಿಸಿದ್ದಾರೆ.

ಓ ಇಷ್ಟೇನಾ, ನಾನು ನೋಡುತ್ತೇನೆ ಎಂದು ಸೀದಾ ಥಿಯೇಟರ್ ಕಡೆ ನುಗ್ಗಬೇಡಿ. ಇಷ್ಟೇ ಇಲ್ಲ, ಇದಕ್ಕೆ ಕೆಲವು ಷರತ್ತೂಗಳೂ ಇವೆ. ನೀವು ಥಿಯೇಟರಿನಲ್ಲಿ ಚಿತ್ರ ನೋಡುತ್ತೇನೆಂದು ಸುಳ್ಳು ಹೇಳಿ ಗಡದ್ದಾಗಿ ನಿದ್ದೆ ಮಾಡಿ ಆಮೇಲೆ 5 ಲಕ್ಷ ಕೊಳ್ಳೆ ಹೊಡೆಯುತ್ತೇನೆಂದು ಅಡ್ಡದಾರಿಯ ಲೆಕ್ಕಾಚಾರ ಹಾಕಿದರೆ ಅದು ವರ್ಕೌಟಾಗಲ್ಲ. ಯಾಕೆಂದರೆ, ವೈಜ್ಞಾನಿಕವಾಗಿ ನೀವು ಚಿತ್ರವನ್ನು ಹೆದರದೆ ನೋಡುತ್ತಿದ್ದೀರೋ ಇಲ್ಲವೋ ಎಂದು ಅಧ್ಯಯನ ನಡೆಸಲು ಥಿಯೇಟರಿನಲ್ಲಿ ರಹಸ್ಯ ಕ್ಯಾಮರಾಗಳನ್ನೂ ಇಡುತ್ತಾರಂತೆ. ಜೊತೆಗೆ ಚಿತ್ರ ವೀಕ್ಷಿಸುವಾತನಿಗೆ ಇಸಿಜಿ ಮೆಷಿನ್ ಅಳವಡಿಸಿ ಕೂರಿಸಲಾಗುತ್ತದೆ. ಆ ಮೂಲಕ ಹೃದಯ ಬಡಿತ, ಪಲ್ಸ್ ರೇಟ್ ಎಲ್ಲವೂ ಚಿತ್ರ ವೀಕ್ಷಿಸುವ ಸಂದರ್ಭ ದಾಖಲಾಗುತ್ತದೆ. ನಿಮಗೆ ಸ್ವಲ್ಪ ಭಯವಾದರೂ, ಹೃದಯ ಬಡಿತ ಏರುಪೇರಾಗುತ್ತದೆ. ಇದೆಲ್ಲವೂ ಇಸಿಜಿ ಮೆಷಿನ್‌ನಲ್ಲಿ ದಾಖಲಾಗುವುದರಿಂದ ಇದು ಹೇಳಿಕೊಳ್ಳುವಷ್ಟು ಸುಲಭವಲ್ಲ.
webdunia
IFM


ಸಾಮಾನ್ಯವಾಗಿ ಸ್ವಲ್ಪ ಹೆದರಿದರೂ, ಎಮೋಶನಲ್ ಆದರೂ, ಅಂಥವನ ಹೃದಯ ಬಡಿತ ಏರುತ್ತದೆ. ಹಾಗಾಗಿ ಚಿತ್ರ ಮುಗಿಸಿ ಹೊರಬಂದು ನನಗೆ ಹೆದರಿಕೆಯೇ ಆಗಿಲ್ಲ, ಐದು ಲಕ್ಷ ಕೊಡಿ ಎಂದರೆ ಇಸಿಜಿ ಮೆಶಿನ್ ನೀವು ಸತ್ಯ ಹೇಳುತ್ತಿದ್ದೀರೋ, ಸುಳ್ಳೋ ಎಂದು ದಾಖಲೆ ತೋರಿಸುತ್ತದೆ. ನಿಮ್ಮ ಹೃದಯ ಬಡಿತ ಚಿತ್ರ ವೀಕ್ಷಿಸುವ ಸಂದರ್ಭದಲ್ಲಿ ಏರಿದ್ದರೆ ಈ ಬಹುಮಾನ ನಿಮಗೆ ದಕ್ಕುವುದಿಲ್ಲ. ಸಾಮಾನ್ಯವಾಗಿಯೇ ಇದ್ದರೆ ಐದು ಲಕ್ಷ ಗ್ಯಾರೆಂಟಿ!!!

ಈ ಸ್ಪರ್ಧೆ ಮಾರ್ಚ್ 10ರಂದು ಆರಂಭವಾಗಲಿದೆ. ಹೆಚ್ಚಿನ ವಿವರಗಳಿಗೆ www.phoonk2.in ವೆಬ್‌ಸೈಟ್ ಸಂಪರ್ಕಿಸಬಹುದು. ಆದರೆ ಒಂದು ಕಂಡೀಶನ್, ಈ ಸ್ಪರ್ಧೆಗೆ ಕೇವಲ 18ರಿಂದ 60 ವರ್ಷ ವಯಸ್ಸಿನೊಳಗಿನ ಸಂಪೂರ್ಣ ಆರೋಗ್ಯವಂತರು ಮಾತ್ರ ಭಾಗವಹಿಸಬಹುದು ಹಾಗೂ ಈವರೆಗೆ ಹೃದಯಾಘಾತ ಅಥವಾ ಹೃದಯಸಂಬಂಧೀ ಯಾವುದೇ ಖಾಯಿಲೆ ಇದ್ದಿರಬಾರದು. ನಿಮಗೂ ಧೈರ್ಯ ಇದೆಯಾ? ಹಾಗಿದ್ದರೆ ಒಂದು ಕೈ ನೋಡಿ!!!

Share this Story:

Follow Webdunia kannada