Select Your Language

Notifications

webdunia
webdunia
webdunia
webdunia

'ಸತ್ಯ ಇನ್ ಲವ್' ಜೆನಿಲಿಯಾರಿಂದ ಕನ್ನಡಕ್ಕೊಂದು ಗರಿ

'ಸತ್ಯ ಇನ್ ಲವ್' ಜೆನಿಲಿಯಾರಿಂದ ಕನ್ನಡಕ್ಕೊಂದು ಗರಿ
SUJENDRA
ನೋಡಲವಳು ಲವ್ಲಿ ಲವ್ಲಿ.. ಎಂದು ಹಾಡಿ ಕುಣಿದಿದ್ದ 'ಸತ್ಯ ಇನ್ ಲವ್' ಹುಡುಗಿ ಜೆನಿಲಿಯಾ ಡಿಸೋಜ ಈಗ ಲಿಮ್ಕಾ ದಾಖಲೆ ಸೇರಿದ್ದಾರೆ. ನೆನಪಿಡಿ, ಹಾಗೆ ಲಿಮ್ಕಾ ದಾಖಲೆ ಸೇರುವಂತಾಗಲು ಕನ್ನಡದ ಚಿತ್ರವೂ ಕಾರಣ. ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಾಯಕರಾಗಿದ್ದ 'ಸತ್ಯ ಇನ್ ಲವ್' ಹಿಟ್ ಆಗಿರುವುದರಿಂದಲೇ ಹೀಗೆ ದಾಖಲೆ ಮಾಡುವಂತಾಗಿದೆ.

ಮೊನ್ನೆಯಷ್ಟೇ ರಿತೇಶ್ ದೇಶ್‌ಮುಖ್‌ರನ್ನು ಮದುವೆ ಮಾಡಿಕೊಂಡು ಮುಂಬೈಯಲ್ಲೇ ಸೆಟ್ಲ್ ಆಗಿರುವ ಜೆನಿಲಿಯಾ ಸದ್ಯಕ್ಕೆ ಬಣ್ಣದ ಲೋಕದಿಂದ ದೂರವೇ ಇದ್ದಾರೆ. ಅವರದ್ದೀಗ ಹನಿಮೂನ್ ಮೂಡ್. ಈ ನಡುವೆಯೇ ಶುಭ ಸುದ್ದಿ ಬಂದಿದೆ. ಅವರು ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದಾರೆ.

ಹೀಗೆ ಲಿಮ್ಕಾ ದಾಖಲೆಯಲ್ಲಿ ಜೆನಿಲಿಯಾ ಹೆಸರು ಸೇರ್ಪಡೆಯಾಗಲು ಕಾರಣ, ನಾಲ್ಕು ಭಾಷೆಗಳಲ್ಲಿ ಒಂದೇ ವರ್ಷ ನಾಲ್ಕು ಹಿಟ್ ಚಿತ್ರಗಳನ್ನು ನೀಡಿರುವುದು. ಶಿವಣ್ಣ ನಾಯಕರಾಗಿದ್ದ 'ಸತ್ಯ ಇನ್ ಲವ್' ಮೊದಲು ಬಿಡುಗಡೆಯಾಗಿತ್ತು. ಇದು ಹಿಟ್ ಆಗುತ್ತಿದ್ದಂತೆ, ಅತ್ತ ತಮಿಳಿನಲ್ಲಿ 'ಸಂತೋಷ್ ಸುಬ್ರಮಣ್ಯಂ', ತೆಲುಗಿನಲ್ಲಿ 'ರೆಡಿ' ಹಾಗೂ ಹಿಂದಿಯಲ್ಲಿ 'ಜಾನೇ ತು ಯಾ ಜಾನೇ ನಾ' ಚಿತ್ರಗಳು ಬೆನ್ನು ಬೆನ್ನಿಗೆ ತೆರೆಗಪ್ಪಳಿಸಿದ್ದವು. ಈ ನಾಲ್ಕೂ ಚಿತ್ರಗಳು ಭರ್ಜರಿಯಾಗಿ ಗೆಲುವಿನ ಪತಾಕೆ ಹಾರಿಸಿದ್ದವು.

ರಾಘವ್ ಲೋಕಿ ನಿರ್ದೇಶನದ 'ಸತ್ಯ ಇನ್ ಲವ್' ಚಿತ್ರದಲ್ಲಿ ಜೆನಿಲಿಯಾ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಆ ನಂತರ ಅವರು ಕನ್ನಡದ ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಚಿತ್ರವೊಂದರಲ್ಲಿ ನಟಿಸುತ್ತಾರೆ ಎಂದು ಸುದ್ದಿಯಾಗಿತ್ತಾದರೂ, ಹಿಂದಿ ಚಿತ್ರರಂಗದಲ್ಲಿ ಅವರು ಬ್ಯುಸಿಯಾದ ನಂತರ ಸ್ಯಾಂಡಲ್‌ವುಡ್‌ಗೆ ಮರಳಲು ಹಿಂದೇಟು ಹಾಕಿದ್ದರು.

ಅದೇನೇ ಇರಲಿ, ಕನ್ನಡ ಚಿತ್ರರಂಗವನ್ನು ಮರೆತರೂ ಜೆನಿಲಿಯಾ ದಾಖಲೆಗೆ ಕನ್ನಡ ಸಿನಿಮಾ ಸಹಕರಿಸಿದೆ ಅನ್ನೋದು ಸುಳ್ಳಲ್ಲ. ಜತೆಗೆ ಮದುವೆಯ ಖುಷಿಯಲ್ಲಿರುವ ಜೋಡಿಗೆ ಇದು ಬೋನಸ್ ಸಿಕ್ಕಿದಂತೆಯೂ ಆಗಿದೆ. ಅದರಲ್ಲೂ ಜೆನಿಲಿಯಾ ಮಂಗಳೂರು ಮೂಲದ ಹುಡುಗಿಯಾಗಿರುವುದರಿಂದ ಕರ್ನಾಟಕದ ನಂಟೇನು ಆಕೆಗೆ ಕಡಿಮೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಏನಂತೀರಿ?

Share this Story:

Follow Webdunia kannada