Select Your Language

Notifications

webdunia
webdunia
webdunia
webdunia

ಸಂಜನಾಗೆ ಅಪ್ಪು, ಕಿಚ್ಚ, ದರ್ಶನ್ ಜತೆ ನಟಿಸುವಾಸೆಯಂತೆ!

ಸಂಜನಾಗೆ ಅಪ್ಪು, ಕಿಚ್ಚ, ದರ್ಶನ್ ಜತೆ ನಟಿಸುವಾಸೆಯಂತೆ!
PR
ನಮ್ಮ 'ಗಂಡ ಹೆಂಡತಿ'ಯ ಸಂಜನಾ ಈಗ 'ಮಹಾನದಿ'ಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾರೆ. ದೊಡ್ಡ ಬ್ಯಾನರ್, ದೊಡ್ಡ ಬಜೆಟ್, ಒಳ್ಳೆಯ ಕಥೆ, ಒಳ್ಳೆಯ ನಿರ್ದೇಶಕರು, ಒಳ್ಳೆಯ ಪಾತ್ರ... ಹೀಗೆ ಅವರ ಬಾಯಲ್ಲೀಗ 'ಮಹಾನದಿ'ಯದ್ದೇ ಗುಣಗಾನ. ಈ ನಡುವೆ ಅವರಿಗೆ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜತೆ ನಟಿಸುವ ಆಸೆಯೂ ಆಗಿದೆ!

ಇತ್ತೀಚೆಗಷ್ಟೇ ಇದನ್ನು ಸಂಜನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನೀವು ಯಾರೊಂದಿಗೆ ನಟಿಸಲು ಇಷ್ಟಪಡುತ್ತೀರಿ ಎಂಬ ಪ್ರಶ್ನೆಗೆ, "ಪುನೀತ್, ಸುದೀಪ್, ದರ್ಶನ್..." ಎಂದು ಉದ್ದುದ್ದ ಪಟ್ಟಿ ಕೊಟ್ಟಿದ್ದಾರೆ. ಯಾವತ್ತಾದರೂ ಒಂದು ದಿನ ಈ ಅವಕಾಶ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯೂ ಅವರಲ್ಲಿದೆ.

ನನ್ನ ವೈಯಕ್ತಿಕ ಜೀವನ, ಸಂಬಂಧಗಳ ಬಗ್ಗೆ ಸಿಕ್ಕಾಪಟ್ಟೆ ಮಾತನಾಡಿಕೊಂಡರು, ಸಾಕಷ್ಟು ಮಂದಿ ಬರೆದೂ ಬಿಟ್ಟರು. ಇದು ನನ್ನ ಇಮೇಜ್‌ಗೆ ಒಳ್ಳೆಯದಲ್ಲ. ಆದರೂ ಪ್ರತಿಭೆಗೆ ಒಂದಲ್ಲ ಒಂದು ದಿನ ಬೆಲೆ ಸಿಕ್ಕಿಯೇ ಸಿಗುತ್ತದೆ ಎಂಬ ಭರವಸೆ ನನ್ನದು. ಈಗಾಗಲೇ ಕೆಲವು ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದೇನೆ ಎಂದು ಹೇಳುತ್ತಾರೆ.

ಅವರೇ ಹೇಳಿಕೊಂಡಿರುವ ಪ್ರಕಾರ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ನಾಯಕರಾಗಿದ್ದ 'ಮೈಲಾರಿ' ಚಿತ್ರ ದೊಡ್ಡ ಬ್ರೇಕ್. ನಂತರ 'ನರಸಿಂಹ' ಚಿತ್ರದ ಹಾಡು ಕೂಡ ಅವರಿಗೆ ತುಂಬಾನೇ ಸಹಾಯ ಮಾಡಿದೆ. ಸದ್ಯ ಪ್ರಜ್ವಲ್ ದೇವರಾಜ್ ನಾಯಕನಾಗಿರುವ 'ಸಾಗರ್' ಬಿಡುಗಡೆಯ ಅವಸರದಲ್ಲಿದೆ. ಇದನ್ನು ಹೊರತುಪಡಿಸಿ ನಟಿಸುತ್ತಿರುವ ಚಿತ್ರ 'ಮಹಾನದಿ'.

ಕೃಷ್ಣಪ್ಪ ಉಪ್ಪೂರು ನಿರ್ದೇಶನದ 'ಮಹಾನದಿ' ಸ್ತ್ರೀ ಪ್ರಧಾನ ಚಿತ್ರ. ನನ್ನ ಪಾತ್ರದ ಹೆಸರು ಮೀನಾಕ್ಷಿ. ಮಸಾಲೆ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದವಳಿಗೆ ಇದು ಸಾಧ್ಯವೇ ಎಂಬ ಶಂಕೆಯಿತ್ತು. ಆದರೆ ಅದನ್ನು ಸಾಧಿಸಿ ತೋರಿಸಿದ್ದೇನೆ. ಸದ್ಯ ಉಡುಪಿಯಲ್ಲಿ ಚಿತ್ರೀಕರಣ. ಇಲ್ಲಿ ಮುಗಿಯುತ್ತಿದ್ದಂತೆ ಮಂಗಳೂರಲ್ಲಿ ಶೂಟಿಂಗ್‌ಗೆ ಚಿತ್ರತಂಡ ತೆರಳಲಿದೆ ಎಂದು ಸಂಜನಾ ಮಾಹಿತಿ ನೀಡಿದ್ದಾರೆ.

6.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 'ಮಹಾನದಿ', ತೆಲುಗಿನಲ್ಲಿ ಅನೂಷ್ಕಾ ಶೆಟ್ಟಿಗೆ ಹೇಗೆ 'ಅರುಂಧತಿ' ಬ್ರೇಕ್ ಕೊಟ್ಟಿತೋ, ಅದೇ ರೀತಿಯಲ್ಲಿ ಸಂಜನಾಗೆ ಬ್ರೇಕ್ ಕೊಡಲಿದೆಯಂತೆ. ಕಥೆ ಅದರಂತೆ ಗಟ್ಟಿಯಾಗಿದೆ. ಎಲ್ಲರೂ ಮೆಚ್ಚುವಂತಿದೆ. ಹಾಗಾಗಿ ಗೆದ್ದೇ ಗೆಲ್ಲುತ್ತೇನೆ ಎಂಬ ಭರವಸೆ ಅವರದ್ದು.

Share this Story:

Follow Webdunia kannada