Select Your Language

Notifications

webdunia
webdunia
webdunia
webdunia

ಶಿವಣ್ಣ ಸಿನಿಮಾ ಟ್ರಬಲ್: ಆರ್ಯನ್, ಅಂದರ್ ಬಾಹರ್ ಮುಂದಕ್ಕೆ!

ಶಿವಣ್ಣ ಸಿನಿಮಾ ಟ್ರಬಲ್: ಆರ್ಯನ್, ಅಂದರ್ ಬಾಹರ್ ಮುಂದಕ್ಕೆ!
PR
ಮಾರ್ಚ್ 21ಕ್ಕೆ ಒಂದು ಸಿನಿಮಾದ ಮುಹೂರ್ತ ನಡೆಯಬೇಕಿತ್ತು. ಇನ್ನೊಂದು ಸಿನಿಮಾ ಮಾರ್ಚ್ 29ಕ್ಕೆ ಬಿಡುಗಡೆಯಾಗಬೇಕಿತ್ತು. ಅವೆರಡೂ ಈಗ ಬಹುತೇಕ ಮುಂದಕ್ಕೆ ಹೋಗಿದೆ. ಎರಡೂ ಸಿನಿಮಾಗಳ ಈ ಸಮಸ್ಯೆಗಳಿಗೆ ಖಂಡಿತಾ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಕಾರಣರಲ್ಲ, ನಿರ್ದೇಶಕ-ನಿರ್ಮಾಪಕರದ್ದು!

ಇದು ಆರ್ಯನ್ ಮತ್ತು ಅಂದರ್ ಬಾಹರ್ ಸಿನಿಮಾಗಳ ಸಂಕಷ್ಟದ ಸುದ್ದಿ. ಆರ್ಯನ್ ಚಿತ್ರದ ನಿರ್ದೇಶಕ ಡಿ. ರಾಜೇಂದ್ರ ಬಾಬು ಅಸ್ವಸ್ಥರಾಗಿರುವ ಕಾರಣ ಚಿತ್ರದ ಮುಹೂರ್ತವನ್ನು ತಿಂಗಳ ಮಟ್ಟಿಗೆ ಮುಂದೂಡಲಾಗಿದೆ. ಅಂದರ್ ಬಾಹರ್ ಚಿತ್ರದ ನಿರ್ಮಾಪಕರೊಬ್ಬರು ಸೆನ್ಸಾರ್ ಪ್ರಮಾಣಪತ್ರ ನೀಡಬಾರದು ಎಂದು ಪತ್ರ ಬರೆದಿದ್ದಾರೆ.

'ಆರ್ಯನ್' ಚಿತ್ರಕ್ಕೆ ಮಾ.21ರ ಗುರುವಾರ ಮುಹೂರ್ತ ನಡೆಯಬೇಕಿತ್ತು. ಲಕ್ಕಿ ಸ್ಟಾರ್ ರಮ್ಯಾ ಮತ್ತು ಅರ್ಚನಾ ಗುಪ್ತಾ ನಾಯಕಿಯರಾಗಿರುವ ಈ ಚಿತ್ರದಲ್ಲಿ ಶರತ್ ಕುಮಾರ್ ಕೂಡ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳ ನಂತರ ಡಿ. ರಾಜೇಂದ್ರ ಬಾಬು ಅವರು ಶಿವಣ್ಣನನ್ನು ನಿರ್ದೇಶಿಸುತ್ತಿರುವುದರಿಂದ ನಿರೀಕ್ಷೆಯಂತೆಯೇ ಸಾಕಷ್ಟು ಕುತೂಹಲ ಸೃಷ್ಟಿಯಾಗಿತ್ತು.

ಆದರೆ ಅಷ್ಟರಲ್ಲೇ ನಿರ್ದೇಶಕ ರಾಜೇಂದ್ರ ಬಾಬು ಅಸ್ವಸ್ಥಗೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆ ಸಿಕ್ಕಾಪಟ್ಟೆ ರೋಮಾಂಚನಗೊಂಡ ಬಾಬು ಅವರ ರಕ್ತದೊತ್ತಡ ದಿಢೀರ್ ಮೇಲಕ್ಕೇರಿದೆ. ಮಧುಮೇಹ ಕೂಡ ತೊಂದರೆ ಕೊಡುತ್ತಿದೆ. ಈಗ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರ ತುರ್ತು ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲಿಂದ ಬಿಡುಗಡೆಯಾದ ಮೇಲೆ 15 ದಿನ ವಿಶ್ರಾಂತಿ ಪಡೆಯಲೇಬೇಕು ಎನ್ನುವುದು ವೈದ್ಯರ ಸಲಹೆ.

ನಿರ್ದೇಶಕರಲಿಲ್ಲದೆ ಚಿತ್ರದ ಮುಹೂರ್ತ ನಡೆಸುವುದು ಸಾಧ್ಯವಿಲ್ಲ. ಹಾಗಾಗಿ ನಿರ್ಮಾಪಕ ಕಮರ್ ಮುಹೂರ್ತವನ್ನು ಮುಂದೂಡಿದ್ದಾರೆ. ಚಿತ್ರಕ್ಕೆ ಡೇಟ್ಸ್ ಕೊಟ್ಟಿರುವ ಶಿವಣ್ಣ, ರಮ್ಯಾ, ಅರ್ಚನಾ ಗುಪ್ತಾ ಮತ್ತು ಶರತ್ ಕುಮಾರ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಅನಾರೋಗ್ಯದ ವಿಚಾರವಾಗಿರುವುದರಿಂದ ಎಲ್ಲರೂ ಚಿತ್ರೀಕರಣ ಮುಂದೂಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ಈಗಿನ ಲೆಕ್ಕಾಚಾರಗಳ ಪ್ರಕಾರ ಇನ್ನು ಚಿತ್ರದ ಮುಹೂರ್ತ ವರನಟ ಡಾ.ರಾಜ್‌ಕುಮಾರ್ ಹುಟ್ಟುಹಬ್ಬವಾಗಿರುವ ಏಪ್ರಿಲ್ 24ಕ್ಕೆ. ಅಂದೇ ಮುಹೂರ್ತ ನಡೆಸುವ ಚಿಂತನೆ ನಡೆದಿದೆ ಎಂದು ನಿರ್ಮಾಪಕ ಕಮರ್ ತಿಳಿಸಿದ್ದಾರೆ.

ಈ ನಡುವೆ ಅಂದರ್ ಬಾಹರ್ ಚಿತ್ರವೂ ಸಮಸ್ಯೆಗೆ ಸಿಲುಕಿದೆ. ಮಾರ್ಚ್ 29ರಂದು ಬಿಡುಗಡೆಯಾಗಬೇಕಿದ್ದ ಚಿತ್ರ ಸೆನ್ಸಾರ್ ಮಂಡಳಿಗೆ ಹೋಗುವ ಮೊದಲೇ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾಗಿರುವ ಜಗದೀಶ್ ಎ.ಎಸ್. ಎಂಬವು ಕ್ಯಾತೆ ತೆಗೆದಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಅನುಮತಿ ನೀಡಬಾರದು ಎಂದು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ಇದಕ್ಕೆ ಕಾರಣ, ಜಗದೀಶ್ ಅವರನ್ನು ಚಿತ್ರದ ಇತರ ನಿರ್ಮಾಪಕರು ನಿರ್ಲಕ್ಷಿಸಿರುವುದು. ರಜನೀಶ್, ಪ್ರಸಾದ್ ರಾವ್, ಅಂಬರೀಷ್ ಎಚ್.ಎಸ್., ಅವಿನಾಶ್, ಭಾಸ್ಕರ ರಾವ್ ಜತೆ ತಾನೂ ಈ ಚಿತ್ರದ ನಿರ್ಮಾಪಕ, ಪಾಲುದಾರ. ಹೀಗಿದ್ದೂ ಚಿತ್ರದ ಜಾಹೀರಾತುಗಳು ಮತ್ತು ಪ್ರಚಾರದಲ್ಲಿ ನನ್ನನ್ನು ಕೈ ಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕಾರಣದಿಂದ ಅಂದರ್ ಬಾಹರ್ ಮಾ.29ರಂದು ಬಿಡುಗಡೆಯಾಗುವುದು ಸಂಶಯ. ಸಮಸ್ಯೆ ಪರಿಹಾರ ಕಂಡ ನಂತರ ಹೊಸ ದಿನಾಂಕ ಪ್ರಕಟವಾಗುವ ನಿರೀಕ್ಷೆಗಳಿವೆ.

Share this Story:

Follow Webdunia kannada