Select Your Language

Notifications

webdunia
webdunia
webdunia
webdunia

ಶಿವಣ್ಣ ಮತ್ತೆ ಭೂಗತ ಲೋಕಕ್ಕೆ: ಚಿತ್ರದ ಹೆಸರು 'ಮುಂಬೈ'..!

ಶಿವಣ್ಣ ಮತ್ತೆ ಭೂಗತ ಲೋಕಕ್ಕೆ: ಚಿತ್ರದ ಹೆಸರು 'ಮುಂಬೈ'..!
PR
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಭೂಗತ ಲೋಕದ ಸಿನಿಮಾಗಳ ನಂಟು ಬಿಡುತ್ತಿಲ್ಲ. ಅದಕ್ಕೀಗ ಹೊಸ ಸೇರ್ಪಡೆ 'ಮುಂಬೈ'. ಇಂತಹ ಚಿತ್ರಗಳು ಶಿವಣ್ಣನಿಗೇನೂ ಹೊಸತಲ್ಲ. ಆದರೆ ಕೋಟಿ ರಾಮು ನಿರ್ಮಾಣ ಸಂಸ್ಥೆಯಿಂದ ಹೊರ ಬರುತ್ತಿರುವ ಚಿತ್ರವಾಗಿರುವುದರಿಂದ ಒಂದಷ್ಟು ಕುತೂಹಲವಿದೆ.

ಕಾರಣ, ಶಿವಣ್ಣ-ರಾಮು ಕಾಂಬಿನೇಷನ್‌ನ ಯಾವುದೇ ಚಿತ್ರಗಳು ಬಾಕ್ಸಾಫೀಸಿನಲ್ಲಿ ಮಕಾಡೆ ಮಲಗಿದ ಉದಾಹರಣೆಗಳಿಲ್ಲ. ಎಕೆ 47, ನಂಜುಂಡಿ, ಭಾವ ಭಾಮೈದ, ಸಿಂಹದ ಮರಿ ಮುಂತಾದ ಚಿತ್ರಗಳ ದಾಖಲೆಗಳೇ ಇದಕ್ಕೆ ಸಾಕ್ಷಿ. ಈ ಸರಣಿಗೆ 'ಮುಂಬೈ' ಚಿತ್ರ ಇನ್ನೊಂದು ಸೇರ್ಪಡೆಯಾಗಬಹುದು ಎನ್ನುವುದು ನಿರ್ಮಾಪಕ ರಾಮು ನಿರೀಕ್ಷೆ.

ಭೂಗತ ಜಗತ್ತಿನ ಕಥೆ ಹೊಂದಿರುವ ಚಿತ್ರಕ್ಕೆ 'ಮುಂಬೈ' ಎಂದು ಹೆಸರಿಡಲಾಗಿದೆ. ಮುಂದಿನ ತಿಂಗಳೇ ಚಿತ್ರೀಕರಣ ಆರಂಭ. ಎಕೆ 47 ಚಿತ್ರತಂಡವೇ ಇಲ್ಲೂ ಮುಂದುವರಿಯಲಿದೆ ಎಂದು ನಿರ್ಮಾಪಕ ರಾಮು ತಿಳಿಸಿದ್ದಾರೆ.

ರಾಮು ಇಷ್ಟು ಹೇಳುವುದರೊಂದಿಗೆ ಓಂ ಪ್ರಕಾಶ್ ರಾವ್ ಮತ್ತೆ ಶಿವಣ್ಣ ಚಿತ್ರ ನಿರ್ದೇಶಿಸಲಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಇತ್ತೀಚೆಗಷ್ಟೇ ಓಂ ನಿರ್ದೇಶನದ 'ಶಿವ' ಫ್ಲಾಪ್ ಆಗಿತ್ತು. ಓಂ-ಶಿವಣ್ಣ ಜೋಡಿಯ ಮೇಲಿದ್ದ ನಿರೀಕ್ಷೆಗಳು ಬಾಕ್ಸಾಫೀಸಿನಲ್ಲಿ ಹುಸಿಯಾಗಿದ್ದವು. ಮತ್ತೆ ಅದೇ ನಿರ್ದೇಶಕನ ಜತೆ ಶಿವಣ್ಣ ಕೆಲಸ ಮಾಡಲಿದ್ದಾರೆ ಎಂಬ ಸುಳಿವನ್ನು ರಾಮು ನೀಡಿದ್ದಾರೆ.

ಈಗಿನ ಲೆಕ್ಕಾಚಾರಗಳ ಪ್ರಕಾರ, ಏಪ್ರಿಲ್ ತಿಂಗಳಲ್ಲೇ ಚಿತ್ರೀಕರಣ ಶುರು. ಇದರೊಂದಿಗೆ ಡಿ. ರಾಜೇಂದ್ರ ಬಾಬು ನಿರ್ದೇಶನದ 'ಆರ್ಯನ್' ಚಿತ್ರ ಮತ್ತೆ ಮುಂದಕ್ಕೆ ಹೋಗುತ್ತಿದೆ. ಚಿತ್ರಕ್ಕೆ ಏಪ್ರಿಲ್ 24ಕ್ಕೆ ಮುಹೂರ್ತ ನಡೆಯಲಿದೆ ಎಂಬ ಮಾಹಿತಿ ಇದೆಯಾದರೂ, ನಿರ್ದೇಶಕರು ಅನಾರೋಗ್ಯಕ್ಕೀಡಾಗಿರುವುದರಿಂದ ಪ್ರಾಜೆಕ್ಟ್ ವಿಳಂಬವಾಗುತ್ತಿರುವ ಮಾಹಿತಿಯಿದೆ.

Share this Story:

Follow Webdunia kannada