Select Your Language

Notifications

webdunia
webdunia
webdunia
webdunia

ಮಾತೆತ್ತಿದರೆ ಜ್ಯೋತಿಷ್ಯದ ಮೊರೆಹೋಗುವ ವಾಹಿನಿಗಳು

ಮಾತೆತ್ತಿದರೆ ಜ್ಯೋತಿಷ್ಯದ ಮೊರೆಹೋಗುವ ವಾಹಿನಿಗಳು
ವಿಶೇಷ ವರದಿ: ಯಗಟಿ ರಘು ನಾಡಿಗ್‌

ಜ್ಯೋತಿಷ್ಯ ಎಂಬುದು ಒಂದು ವಿದ್ಯೆ; ಅದನ್ನು ಸಮರ್ಥರು ಪ್ರತಿಪಾದಿಸಿದರೆ ಸೂಕ್ತ ಫಲಗಳನ್ನು ಅಥವಾ ಮಾರ್ಗದರ್ಶನಗಳನ್ನು ಪಡೆಯಬಹುದು ಎಂಬುದೇನೋ ಸರಿ. ಆದರೆ ಪ್ರತಿಯೊಂದು ಸಮಸ್ಯೆ-ಬಿಕ್ಕಟ್ಟು-ವಿವಾದಾಸ್ಪದ ಸಂಗತಿಗಳು ತಲೆದೋರಿದಾಗಲೂ ವಿಚಾರಶಕ್ತಿಯನ್ನು ಪಕ್ಕಕ್ಕಿಟ್ಟು ವಾಹಿನಿಯ ಸ್ಟುಡಿಯೋಕ್ಕೆ ಜ್ಯೋತಿಷಿಗಳನ್ನು ಕರೆಸಿ ಅವಕ್ಕೆ ಪರಿಹಾರಗಳನ್ನು ಕೇಳುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ವಾಹಿನಿಗಳು-ವೀಕ್ಷಕರು-ವಿಚಾರವಂತರು ಆಲೋಚಿಸಬೇಕಾಗಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ತೀರಾ ಇತ್ತೀಚೆಗೆ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗಳು ನಡೆಯುತ್ತಿದ್ದ ಸಂದರ್ಭದಲ್ಲಿ ವಾಹಿನಿಯೊಂದು ಹಿಂಡುಗಟ್ಟಲೆ ಜ್ಯೋತಿಷಿಗಳನ್ನು ಸ್ಟುಡಿಯೋಗೆ ಕರೆಸಿಕೊಂಡು, 'ಭಾರತ ಸೆಮಿಫೈನಲ್‌ ಹಂತದವರೆಗೆ ಬರುತ್ತಾ?' 'ಬಂದರೆ ಆ ಪಂದ್ಯದಲ್ಲಿ ಗೆಲ್ಲುತ್ತಾ?' 'ಸೆಮಿಫೈನಲ್‌ನಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾದರೆ ಒಳ್ಳೆಯದೋ ಅಥವಾ ಪಾಕಿಸ್ತಾನ ಎದುರಾದರೆ ಒಳ್ಳೆಯದೋ?' 'ಫೈನಲ್‌ನಲ್ಲಿ ಆಡುವಾಗ ಭಾರತ ಮೊದಲು ಬ್ಯಾಟಿಂಗ್ ಆರಿಸಿಕೊಳ್ಳಬೇಕೋ ಅಥವಾ ಫೀಲ್ಡಿಂಗ್‌ ಆರಿಸಿಕೊಳ್ಳಬೇಕೋ?' ಎಂಬಂಥ ಪ್ರಶ್ನೆಗಳನ್ನು ಅವರೆದುರಿಗೆ ಇರಿಸಿತು. ಬಂದಿದ್ದ ಜ್ಯೋತಿಷಿಗಳು/ಹಸ್ತ ಸಾಮುದ್ರಿಕರು/ಸಂಖ್ಯಾಶಾಸ್ತ್ರಜ್ಞರು ಕೂಡಾ ಎಲ್ಲಾ ಬಗೆಯ ಗುಣಾಕಾರ-ಭಾಗಾಕಾರಗಳನ್ನು ಮಾಡಿ ಸಾಧ್ಯಾಸಾಧ್ಯತೆಗಳನ್ನು ಹೇಳಿದರು.

ಇಲ್ಲಿ ಒಂದು ಅಂಶವನ್ನು ನಾವು ಗಮನಿಸಬೇಕು. ಕ್ರಿಕೆಟ್ಟನ್ನು ಮೊದಲ್ಗೊಂಡು ಯಾವ ಕ್ರೀಡೆಯೂ ತನ್ನ ಶಕ್ತಿಯನ್ನು ಕೊನೆಯವರೆಗೆ ಹಿಡಿದಿಟ್ಟುಕೊಳ್ಳಬೇಕೆಂದರೆ ಮುಂದೇನಾಗುವುದೋ ಎಂಬ ರೋಚಕತೆಯನ್ನು ಕೊನೆಯ ಘಟ್ಟದವರೆಗೆ ಅದು ಕಾಯ್ದುಕೊಂಡಿರಬೇಕಾಗುತ್ತದೆ. ಇದಕ್ಕೂ ಜ್ಯೋತಿಷ್ಯವನ್ನು ಎಳೆದು ತಂದರೆ ಹೇಗೆ? ಆಟದ ಮಜವನ್ನು ಅನುಭವಿಸುವುದಾದರೂ ಹೇಗೆ? ವಾಹಿನಿಗಳು ಇದನ್ನು ಗಮನಿಸಬೇಕು.

ಇನ್ನು ಗ್ರಹಣಗಳು ಸಂಭವಿಸಿದರಂತೂ ಸರಿಯೇ ಸರಿ. ಸೂರ್ಯ ಅಥವಾ ಚಂದ್ರರು ಆಕಾಶದಲ್ಲಿ ಸ್ವತಃ ಗ್ರಹಣವನ್ನು ಹಿಡಿಸಿಕೊಂಡು (!) ಪಡಬಾರದ ಪಾಡು ಪಡುತ್ತಿದ್ದರೆ ಇಲ್ಲಿ ಭೂಮಿಯ ಮೇಲಿನ ಜ್ಯೋತಿಷಿಗಳಿಗೆ ಸುಗ್ಗಿಯೋ ಸುಗ್ಗಿ!! ಗ್ರಹಣದ ನೆಪವಿಟ್ಟುಕೊಂಡು ಹೆದರಿಸುವುದು ಒಂದಷ್ಟು ಜ್ಯೋತಿಷಿಗಳಿಗೆ ಪರಿಪಾಠವಾಗಿಬಿಡುತ್ತದೆ. ಗ್ರಹಣದ ಸಮಯದಲ್ಲಿ ತಿನ್ನುವ-ಕುಡಿಯುವ ಪದಾರ್ಥಗಳಿಗೆ ದರ್ಭೆಯನ್ನು ಹಾಕುವುದು ಒಂದು ಪರಿಪಾಠ. ಆದರೆ ಓರ್ವ ಮಹಾನುಭಾವ ಜ್ಯೋತಿಷಿಯು ಈ ಕುರಿತು ಮಾತನಾಡುವಾಗ ಚಿಕ್ಕ ಮಕ್ಕಳಿಗೆ ತಿನ್ನಿಸುವ ಆಹಾರಕ್ಕೆ ದರ್ಭೆಗಳನ್ನು ಸಣ್ಣದಾಗಿ ಕತ್ತರಿಸಿ ಬೆರೆಸಿ ತಿನ್ನಿಸಬೇಕು ಎಂದು ಸಲಹೆ ನೀಡಿಬಿಟ್ಟರು. ದರ್ಭೆಯಂಥ ಚೂಪಾದ ಗರಿಕೆ ಹೊಟ್ಟೆಯೊಳಗೆ, ಅದರಲ್ಲೂ ಮಕ್ಕಳ ಹೊಟ್ಟೆಯೊಳಗೆ ಸೇರಿದರೆ ಆಗುವ ಪರಿಣಾಮವೇನಾದರೂ ಅವರಿಗೆ ತಿಳಿದಿದೆಯೇ?

ಹದಿನೈದು ವರ್ಷಗಳ ಹಿಂದೆ ಇಷ್ಟೊಂದು ವಾಹಿನಿಗಳಿರಲಿಲ್ಲ. ಆಗೆಲ್ಲಾ ಗ್ರಹಣಗಳು ಸಂಭವಿಸಲೇ ಇಲ್ಲವೇ? ಏನೂ ತೊಂದರೆಗೆ ಸಿಲುಕದಂತೆ ನಾವೆಲ್ಲಾ ಗುಂಡುಕಲ್ಲಿನ ಹಾಗೆ ಉಳಿದುಕೊಂಡಿಲ್ಲವೇ? ಅನಗತ್ಯ ಭಯವನ್ನು ಜನಸಮುದಾಯದಲ್ಲಿ ಏಕೆ ಬಿತ್ತಬೇಕು?

ಇನ್ನು ತೀರಾ ಇತ್ತೀಚೆಗೆ ನಡೆದ 'ಸೂಪರ್ ಮ‌ೂನ್‌' ಎಂಬ ಬಾನಂಗಳದ ವಿದ್ಯಮಾನದ ಸಂದರ್ಭದಲ್ಲೂ ಇಂಥ ಹಲವಾರು 'ಗೋಚಾರ-ಫಲಗಳು' ಹೇಳಲ್ಪಟ್ಟವು. ಚಂದ್ರನು ಎಂದಿಗಿಂತ ಭೂಮಿಗೆ ಸಾಕಷ್ಟು ಹತ್ತಿರಕ್ಕೆ ಬಂದ ದಿನವಾದ ಅಂದು ವಾಹಿನಿಗಳು ಪೈಪೋಟಿಯ ಮೇಲೆ ಈ ತೆರನಾದ ಕಾರ್ಯಕ್ರಮಗಳನ್ನು ಬಿತ್ತರಿಸಿದವು. ಆ ಸಮಯದಲ್ಲಿ ಮಕ್ಕಳು ಹುಟ್ಟಿದರೆ ಅವು ವಿಕಲಾಂಗರಾಗಿರುವ ಸಾಧ್ಯತೆಗಳಿರುತ್ತವೆ ಎಂದು ಓರ್ವ ಜ್ಯೋತಿಷಿಯು ತನಗೆ 'ಗೋಚರಿಸಿದ' ಗೋಚಾರಫಲವನ್ನು ಅಂದು ಹೇಳಿದಾಗ ಚರ್ಚೆಯಲ್ಲಿ ಹಾಜರಿದ್ದ ಬೆಂಗಳೂರು ನ್ಯಾಷನಲ್‌ ಕಾಲೇಜಿನಲ್ಲಿ ಗಣಿತಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಬಾಲಚಂದ್ರರಾವ್‌ರವರು ಸದರಿ ಜ್ಯೋತಿಷಿಯನ್ನು ಅಲ್ಲಿಯೇ ಝಾಡಿಸಿದರು. ಏಕೆಂದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ 'ಸೂಪರ್ ಮ‌ೂನ್‌' ಸಂಬಂಧಿತ ಉಲ್ಲೇಖವೇ ಇಲ್ಲ!!

ಇನ್ನು ಕೆಲವರು ಜನರಲ್ಲಿ ತುಂಬುವ ಕಲ್ಪನೆಗಳಂತೂ ಚಿತ್ರ-ವಿಚಿತ್ರವಾಗಿರುತ್ತವೆ. ಹೆಂಗಸರು ಚೂಡಿದಾರ್ ಧರಿಸಿದರೆ ಅವರಿಗೆ ಕ್ಯಾನ್ಸರ್ ಬರುತ್ತದೆ ಎಂಬುದು ಅವುಗಳಲ್ಲೊಂದು. ದಕ್ಷಿಣ ಭಾರತದ ಕಥೆ ಬಿಡಿ, ಪಂಜಾಬ್‌-ಹರಿಯಾಣ-ದೆಹಲಿ ಮೊದಲಾದ ಕಡೆಗಳಲ್ಲೆಲ್ಲಾ ಹೆಣ್ಣು ಮಕ್ಕಳು ಹೆಚ್ಚಾಗಿ ಧರಿಸುವುದು ಚೂಡಿದಾರ್‌, ಸಲ್ವಾರ್ ಕಮೀಜ್‌ನಂಥ ಉಡುಪುಗಳನ್ನೇ. ಅವರೆಲ್ಲಾ ಕ್ಯಾನ್ಸರ್ ಪೀಡಿತರಾಗಿದ್ದಾರೆಯೇ?!! 'ಗೋಚಾರ ಫಲ' ಹೇಳೋಕೂ ಒಂದು ಇತಿಮಿತಿ, ಸಾಮಾನ್ಯ ಪ್ರಜ್ಞೆ ಬೇಡವೇ?

ಇಷ್ಟಕ್ಕೇ ಆಗಿದ್ದರೆ ಸುಮ್ಮನಿರಬಹುದಿತ್ತು. ಮೇ ತಿಂಗಳಲ್ಲಿ ಜಗನ್ಮಾತೆ ಭೂಮಿಗೆ ಬರುತ್ತಾಳೆ ಎಂಬುದು, ಬೆಂಗಳೂರು-ಮೈಸೂರು ಪ್ರದೇಶಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲಾ ಭೂಭಾಗಗಳು 2012ರ ಡಿಸೆಂಬರ್ ಹೊತ್ತಿಗೆ ಜಲಾವೃತವಾಗುತ್ತವೆ ಎಂಬುದು, ಈ ವರ್ಷದ ಸೆಪ್ಟೆಂಬರ್‌ನಿಂದ ಮೊದಲ್ಗೊಂಡು ನಂತರದ 4 ತಿಂಗಳವರೆಗೆ ದೇಶದಲ್ಲಿ ವಿದ್ಯುಚ್ಛಕ್ತಿಯು ಸಂಪೂರ್ಣ ಬಂದ್‌ ಆಗಿಬಿಡುತ್ತದೆ ಎಂಬುದು, ಮಹಿಳೆಯರು ದೇವಾಲಯಗಳಲ್ಲಿ ಐದು ಬಗೆಯ ಎಣ್ಣೆಯನ್ನು ಬಳಸಿಕೊಂಡು ದೀಪ ಹಚ್ಚಬೇಕು ಎಂಬುದು ಇವೆಲ್ಲಾ ಅವಿವೇಕದ ಪರಮಾವಧಿಯೆನ್ನದೆ ವಿಧಿಯಿಲ್ಲ. ಇವಕ್ಕೆಲ್ಲಾ ಕೊನೆ ಹಾಡುವವರಾರು?

ಈ ನಿಟ್ಟಿನಲ್ಲಿ ವಾಹಿನಿಗಳು ತಮ್ಮ ನಿಲುವನ್ನು ಬದಲಿಸಿಕೊಳ್ಳಬೇಕಿದೆ. ಎಲ್ಲದಕ್ಕೂ ಟಿ.ಆರ್‌.ಪಿ.ಯ ಕಡೆಗೆ ಬೆರಳು ಮಾಡಿ ತೋರಿಸುವುದರ ಬದಲಿಗೆ, ಜನರ ಚಿಂತನಾಶಕ್ತಿಯನ್ನು ಒರೆಗೆ ಹಚ್ಚುವುದರ ಕಡೆಗೆ ಅವು ಗಮನ ಹರಿಸುವುದು ಒಳಿತು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada