Select Your Language

Notifications

webdunia
webdunia
webdunia
webdunia

ಪ್ರಿಯಾಮಣಿ 'ಚಾರುಲತಾ'ಕ್ಕೆ ತಮಿಳು ಸೂರ್ಯ ಟಾರ್ಚು?

ಪ್ರಿಯಾಮಣಿ 'ಚಾರುಲತಾ'ಕ್ಕೆ ತಮಿಳು ಸೂರ್ಯ ಟಾರ್ಚು?
SUJENDRA


ಪ್ರಿಯಾಮಣಿಯದ್ದು 'ಚಾರುಲತಾ'. ಸೂರ್ಯನದ್ದು 'ಮಾತ್ರಾನ್'. ಎರಡೂ ಕಡೆ ಇಬ್ಬಿಬ್ಬರು ಪ್ರಿಯಾಮಣಿ, ಇಬ್ಬಿಬ್ಬರು ಸೂರ್ಯ. ಆದರೆ ಡಬ್ಬಲ್ ಆಕ್ಟಿಂಗ್ ಅಲ್ಲ, ಎರಡೂ ದೇಹಕ್ಕಂಟಿಕೊಂಡಿರುವ ಪಾತ್ರಗಳು. ಎರಡೂ ಚಿತ್ರಗಳದ್ದು ಒಂದೇ ಕಲ್ಪನೆ. ಸಯಾಮಿ ಅವಳಿಗಳದ್ದು. ಹೆಚ್ಚು ಕಡಿಮೆ ಎರಡೂ ಚಿತ್ರಗಳ ಶೂಟಿಂಗ್ ಮುಗಿದಿದೆ. ಈಗ ಬಿಡುಗಡೆಯ ಪರ್ವ. ಯಾರು ಮೊದಲು?

ಸೂರ್ಯ ನಾಯಕನಾಗಿರುವ 'ಮಾತ್ರಾನ್' ಚಿತ್ರದ ಶೂಟಿಂಗ್ ಶುರುವಾಗಿ ಹೆಚ್ಚು ಕಡಿಮೆ ಒಂದು ವರ್ಷ ಕಳೆದಿದೆ. ಅದರ ನಂತರವಷ್ಟೇ ಕನ್ನಡದಲ್ಲಿ 'ಚಾರುಲತಾ' ಶುರುವಾಗಿತ್ತು. ಎರಡೂ ಚಿತ್ರಗಳ ಕಲ್ಪನೆ ಒಂದೇ ಆಗಿರುವ ಕಾರಣ, ಮೊದಲು ಬಿಡುಗಡೆಯಾದವರಿಗೆ ಬಂಪರ್ ಅವಕಾಶ. ಹಾಗಾಗಿ ಈಗ ಬಿಡುಗಡೆಗೆ ಕುಸ್ತಿ ಆರಂಭವಾಗಿದೆ.

ಬಿಗ್ ಬಜೆಟ್ ಚಿತ್ರ..
ತಮಿಳಿನ 'ಮಾತ್ರಾನ್' ಸೂರ್ಯ ನಾಯಕನಾಗಿರುವ ಇದುವರೆಗಿನ ಚಿತ್ರಗಳಲ್ಲೇ ಬಿಗ್ ಬಜೆಟ್ ಚಿತ್ರ. ಇದರ ತೆಲುಗು ವಿತರಣೆ ಹಕ್ಕುಗಳೇ 17 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಅಷ್ಟೊಂದು ದೊಡ್ಡ ಮೊತ್ತ ತೆತ್ತು ಖರೀದಿಸಿರುವುದು ಬೆಲ್ಲಂಕೊಂಡ ಸುರೇಶ್. ಇನ್ನು ಕರ್ನಾಟಕದ ವಿತರಣೆ ಹಕ್ಕುಗಳು ಮಂಡ್ಯ ಶ್ರೀಕಾಂತ್ ಪಾಲಾಗಿವೆ.

ವಿಮಲನ್ ಮತ್ತು ಅಖಿಲನ್ ಎಂಬ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸೂರ್ಯನಿಗೆ ಇಲ್ಲಿ ಕಾಜಲ್ ಅಗರವಾಲ್ ನಾಯಕಿ. ಕೆ.ವಿ. ಆನಂದ್ ನಿರ್ದೇಶಕರು. ಚಿತ್ರದ ಕಥೆ ಇನ್ನೂ ಗೊತ್ತಾಗಿಲ್ಲ. ಹಾಲಿವುಡ್ ಚಿತ್ರಗಳನ್ನು ಕಾಪಿ ಹೊಡೆದಿರುವ ಬಗ್ಗೆಯೂ ಮಾಹಿತಿಯಿಲ್ಲ.

ಚಾರುಲತಾ ರಿಮೇಕ್...
ಇನ್ನು ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ 'ಚಾರುಲತಾ' ಅಧಿಕೃತವಾಗಿ ಥಾಯ್-ಕೊರಿಯನ್ ಚಿತ್ರ 'ಅಲೋನ್' ರಿಮೇಕ್. ನೆನಪಿಡಿ, ಇತರರಂತೆ ಕಾಪಿ ಹೊಡೆಯುವ ಬದಲು, ರಿಮೇಕ್ ಹಕ್ಕುಗಳನ್ನು ಖರೀದಿಸಿಯೇ ಕನ್ನಡದಲ್ಲಿ ರಿಮೇಕ್ ಮಾಡಲಾಗುತ್ತಿದೆ. ಹಾಗಾಗಿ ನಿರ್ಮಾಪಕ ದ್ವಾರಕೀಶ್ ಕೊಂಚ ಎದೆಯುಬ್ಬಿಸುತ್ತಲೇ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ.

ಪ್ರಿಯಾಮಣಿ ನಾಯಕಿಯಾಗಿರುವ ಈ ಚಿತ್ರದ ಮೇಲೆ ಭಾರೀ ಭರವಸೆ ಇರುವುದರಿಂದ, ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಕನ್ನಡ, ತೆಲುಗು, ತಮಿಳುಗಳಲ್ಲಿ ಹೆಸರು 'ಚಾರುಲತಾ' ಎಂದೇ ಇರಲಿದೆ. ಆದರೆ ಮಲಯಾಳಂನಲ್ಲಿ ಇದೇ ಹೆಸರಿನ ಚಿತ್ರ ಇತ್ತೀಚೆಗಷ್ಟೇ ಬಂದಿರುವುದರಿಂದ ಬೇರೆ ಶೀರ್ಷಿಕೆ ಇಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.

ಪ್ರಿಯಾಮಣಿಗೆ 'ಚಾರುಲತಾ'ದಲ್ಲಿ ಸ್ಕಂದ ನಾಯಕ. ಸೀತಾ, ಶರಣ್ಯ ಪೊನ್ವಾನನ್, ಆರತಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸುಂದರ್ ಸಿ. ಬಾಬು ಸಂಗೀತ ಚಿತ್ರಕ್ಕಿದೆ.

Share this Story:

Follow Webdunia kannada