Select Your Language

Notifications

webdunia
webdunia
webdunia
webdunia

ತೆಲುಗಿನತ್ತ 'ಕೋ ಕೋ ಕೋಳಿ ಕೋತಿ'ಗಳ ಪಯಣ

ತೆಲುಗಿನತ್ತ 'ಕೋ ಕೋ ಕೋಳಿ ಕೋತಿ'ಗಳ ಪಯಣ
SUJENDRA
ಅತ್ತ ನಿರ್ದೇಶಕ ಆರ್. ಚಂದ್ರು 'ಚಾರ್‌ಮಿನಾರ್' ಸಿದ್ಧತೆಯಲ್ಲಿದ್ದರೆ, ಇತ್ತ ನಿರ್ಮಾಪಕರು 'ಕೋ ಕೋ ಕೋಳಿ ಕೋತಿ' ಚಿತ್ರವನ್ನು ಆಂಧ್ರಪ್ರದೇಶದತ್ತ ಕೊಂಡೊಯ್ಯಲು ನಿರ್ಧರಿಸಿದ್ದಾರೆ. ಕನ್ನಡದಲ್ಲಿ ಹಿಟ್ ಆಗಿರುವ ಚಿತ್ರ ತೆಲುಗಿನಲ್ಲೂ ಗೆಲ್ಲಬಹುದು ಅನ್ನೋದು ಅವರ ಲೆಕ್ಕಾಚಾರ. ಅದಕ್ಕೆ ಬೇಕಾದ ಕೆಲವು ಬದಲಾವಣೆಗಳನ್ನು ಕೂಡ ಮಾಡಲಾಗುತ್ತಿದೆ.

ಶ್ರೀನಗರ ಕಿಟ್ಟಿ, ಪ್ರಿಯಾಮಣಿ, ಹರ್ಷಿಕಾ ಪೂಣಚ್ಚ, ಸಂಜನಾ, ತೆಲುಗಿನ ಶ್ರೀಹರಿ ಮುಂತಾದವರು ನಟಿಸಿದ್ದ 'ಕೋ ಕೋ' ಚಿತ್ರ ಕನ್ನಡದಲ್ಲಿ ಹಿಟ್ ಆಗಿತ್ತು. ನಿರ್ದೇಶಕ ಆರ್. ಚಂದ್ರು ಬಗ್ಗೆ ಕೆಲವೊಂದು ಟೀಕೆಗಳು ಕೇಳಿ ಬಂದರೂ, ಬಾಕ್ಸಾಫೀಸಿನಲ್ಲಿ ಯಶಸ್ಸು ಸಾಧಿಸಿತ್ತು. ಇದೇ ಖುಷಿಯಲ್ಲಿರುವ ನಿರ್ಮಾಪಕ ಭಾಸ್ಕರ್ ಮತ್ತು ಆದಿನಾರಾಯಣ್ ಆಂಧ್ರದತ್ತ ಹೊರಟಿದ್ದಾರೆ.

ಈಗಿನ ಲೆಕ್ಕಾಚಾರದ ಪ್ರಕಾರ, ಸಂಜನಾ ತೆಲುಗು ಆವೃತ್ತಿಯಿಂದ ಕಣ್ಮರೆಯಾಗಲಿದ್ದಾರೆ. ಸಂಜನಾ ಕುಣಿದಿರುವ ಒಂದು ಹಾಡು ಸೇರಿದಂತೆ ಸುಮಾರು ಶೇ.20ರಷ್ಟು ಭಾಗವನ್ನು ತೆಲುಗು ಕಲಾವಿದರನ್ನು ಬಳಸಿಕೊಂಡು ಮರು ಚಿತ್ರೀಕರಣ ನಡೆಸಲಾಗುತ್ತಿದೆ. ಆದರೆ ನಾಯಕ-ನಾಯಕಿ ಬದಲಾವಣೆಯಿಲ್ಲ. ಶ್ರೀನಗರ ಕಿಟ್ಟಿ ಮತ್ತು ಪ್ರಿಯಾಮಣಿಯವರೇ ಅಲ್ಲೂ ಇರಲಿದ್ದಾರೆ.

ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ರಮಣ ಗೋಕುಲ 'ಕೋ ಕೋ' ಸಂಗೀತ ನಿರ್ದೇಶಕರು. ಅವರು ಹಾಕಿದ್ದ ಮಟ್ಟುಗಳು ಕನ್ನಡದಲ್ಲಿ ಅಷ್ಟೊಂದು ಗಮನ ಸೆಳೆದಿರಲಿಲ್ಲ.

ತೆಲುಗಿನಲ್ಲಿ ನಟಿಸದಿದ್ದರೂ, ತೆಲುಗು ಚಿತ್ರರಂಗದಲ್ಲಿ ಈ ಮೂಲಕ ಗುರುತಿಸಿಕೊಳ್ಳುತ್ತಿರುವುದಕ್ಕೆ ಕಿಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ. ತೆಲುಗು ಪ್ರೇಕ್ಷಕರು ಚಿತ್ರವನ್ನು ಮೆಚ್ಚಿಕೊಳ್ಳುವ ಭರವಸೆ ನನಗಿದೆ. ನಿಜಕ್ಕೂ ಚಿತ್ರ ತುಂಬಾ ಚೆನ್ನಾಗಿದೆ. ಕರ್ನಾಟಕದಲ್ಲಿ ಅದ್ಭುತ ಪ್ರತಿಕ್ರಿಯೆಯೂ ಸಿಕ್ಕಿದೆ. ಭಾಸ್ಕರ್ ಮತ್ತು ಆದಿನಾರಾಯಣ್‌ರಂತಹ ನಿರ್ಮಾಪಕರು ಬುದ್ಧಿವಂತರು ಕೂಡ ಹೌದು ಎಂದು ಹೇಳಿದ್ದಾರೆ.

ಇಷ್ಟೆಲ್ಲ ಬೆಳಕಿಗೆ ಬಂದದ್ದು, ಕಿಟ್ಟಿ ನಿರ್ಮಾಣದ 'ಬಾಲ್ ಪೆನ್' ಚಿತ್ರದ ಕಾರ್ಯಕ್ರಮದಲ್ಲಿ. ಗ್ರೀನ್ ಹೌಸ್ ರಾಜ್ ಮಿಲನ್‌ನಲ್ಲಿ ಭಾನುವಾರ ರಾತ್ರಿ ನಡೆದ ಈ ಸಮಾರಂಭಕ್ಕೆ ಭಾಸ್ಕರ್ ಮತ್ತು ಆದಿನಾರಾಯಣ್ ಕೂಡ ಬಂದಿದ್ದರು.

ಸುಮಾರು ಐದು ಕೋಟಿ ರೂಪಾಯಿ ಬಜೆಟ್‌ನಲ್ಲಿ 'ಕೋ ಕೋ' ಕನ್ನಡದಲ್ಲಿ ನಿರ್ಮಾಣವಾಗಿತ್ತು.

Share this Story:

Follow Webdunia kannada