Select Your Language

Notifications

webdunia
webdunia
webdunia
webdunia

'ಟೋನಿ'ಯಾದ ಕಿಟ್ಟಿಗೆ ಜಯತೀರ್ಥ ಹೊಸ ಗೆಟಪ್

'ಟೋನಿ'ಯಾದ ಕಿಟ್ಟಿಗೆ ಜಯತೀರ್ಥ ಹೊಸ ಗೆಟಪ್
SUJENDRA
'ಒಲವೇ ಮಂದಾರ' ಸಿನಿಮಾ ಚೆನ್ನಾಗಿತ್ತು, ಎಲ್ಲರೂ ಮೆಚ್ಚಿಕೊಂಡರು. ಆದರೆ ಚಿತ್ರಮಂದಿರಕ್ಕೆ ಎಲ್ಲೂ ಮುಗಿಬೀಳಲಿಲ್ಲ. ಕಾರಣ, ಕಮರ್ಷಿಯಲ್ ಅಂಶಗಳನ್ನು ಸೇರಿಸಲು ನಿರ್ದೇಶಕ ಜಯತೀರ್ಥ ಅವರಿಗೆ ಸಾಧ್ಯವಾಗದೇ ಇರುವುದು. ಈಗ ಆ ಕೊರತೆಯನ್ನು ನೀಗಿಸುತ್ತಲೇ 'ಟೋನಿ' ಆರಂಭಿಸಿದ್ದಾರೆ. ಶ್ರೀನಗರ ಕಿಟ್ಟಿಗೆ ಹೊಸ ಗೆಟಪ್ ಕೊಟ್ಟಿದ್ದಾರೆ.

ಇತ್ತ ನಾಯಕನಾಗಿ ಒಂದು ಬ್ರೇಕ್ ಪಡೆದುಕೊಳ್ಳಲು ಇನ್ನೂ ವಿಫಲನಾಗಿರುವ ಶ್ರೀನಗರ ಕಿಟ್ಟಿಯಂತೂ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಅದೇ ಖುಷಿಯಲ್ಲಿ ಜಯತೀರ್ಥರನ್ನು ನಂಬುತ್ತಲೇ ಎರಡನೇ ಬಾರಿ (ಮೊದಲನೇ ಚಿತ್ರ 'ಬಾಲ್‌ಪೆನ್') ನಿರ್ಮಾಪಕರೂ ಆಗಿದ್ದಾರೆ. ಆದರೆ ಕಿಟ್ಟಿ ಒಬ್ಬರೇ ಇದನ್ನು ನಿರ್ಮಿಸುತ್ತಿಲ್ಲ, ಜತೆಗೆ ಗೆಳೆಯ ಇಂದ್ರಕುಮಾರ್ ಕೂಡ ಇದ್ದಾರೆ.

'ಒಲವೇ ಮಂದಾರ'ದಂತೆ ಇದೂ ರಸ್ತೆಯಲ್ಲೇ ಸಾಗುವ ಕಥೆ. ಆದರೆ ಈ ಬಾರಿ ಜಯತೀರ್ಥ ಉತ್ತರ ಭಾರತಕ್ಕೆ ಹೋಗುತ್ತಿಲ್ಲ. ಬದಲಿಗೆ, ಕರ್ನಾಟಕದಲ್ಲೇ ಸುತ್ತಾಡಲಿದ್ದಾರೆ. ಆದರೆ ಹಾಡುಗಳಿಗಾಗಿ ದಕ್ಷಿಣ ಭಾರತದ ಕೆಲವು ಆಕರ್ಷಕ ತಾಣಗಳನ್ನು ನಿರ್ದೇಶಕರು ಆರಿಸಿದ್ದಾರಂತೆ. ಒಟ್ಟು 60 ದಿನಗಳ ಚಿತ್ರೀಕರಣ.

ಕಿಟ್ಟಿಯಂತೂ ಈ ಚಿತ್ರದಲ್ಲಿ ಪಕ್ಕಾ ಮಾಡರ್ನ್ ಯುವಕನಾಗಿರುವುದು ಜಾಹೀರಾತುಗಳಲ್ಲೇ ರುಜುವಾತಾಗಿದೆ. ಸಿನಿಮಾದಲ್ಲೂ ಅವರ ಪಾತ್ರ ಹೀಗೆಯೇ ಸಾಗುತ್ತದೆ. ಇಂದು ಗಳಿಸಿದ್ದು, ಇಂದೇ ಖರ್ಚಾಗಿ ಬಿಡಲಿ ಎಂಬ ಮನೋಭಾವ. ಅದೇ ಕಾರಣದಿಂದ 'ಏಕ್ ದಿನ್ ಕಾ ಸುಲ್ತಾನ್' ಎಂಬ ಅಡಿಬರಹ ಚಿತ್ರಕ್ಕಿದೆ. ನಾಯಕ ಟೋನಿಯನ್ನು ಬದಲಾವಣೆ ಮಾಡುವ ಜವಾಬ್ದಾರಿ ನಾಯಕಿಯದ್ದು. ಈ ಪಾತ್ರವೀಗ ಐಂದ್ರಿತಾ ರೇ ಮಡಿಲಿಗೆ ಬಿದ್ದಿದೆ.

ಆದರೂ ಕಿಟ್ಟಿ ಹೀಗೆ ಸಿಗಾರ್ ಬಾಯಲ್ಲಿಟ್ಟುಕೊಂಡು ಹೀಗೆ ಹೊಗೆ ಬಿಡುತ್ತಿರುವುದು ಯಾಕೆ? ಇದೂ ಜಾಗೃತಿಯ ಯತ್ನ ಎಂದರು ಜಯತೀರ್ಥ.

ದುಬೈ ಕನ್ನಡ ಸಂಘದ ಕಾರ್ಯಕ್ರಮಕ್ಕೆ ತೆರಳಿರುವುದರಿಂದ, ಮುಹೂರ್ತಕ್ಕೆ ನಾಯಕಿ ಐಂದ್ರಿತಾ ಬಂದಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸಿದರು. ಉಳಿದಂತೆ ರಂಗಭೂಮಿಯ ಕಲಾವಿದರಿಗೇ ನಿರ್ದೇಶಕರು ಮಣೆ ಹಾಕಿರುವುದು ಶರತ್ ಲೋಹಿತಾಶ್ವ, ಸ್ವಯಂವರ ಚಂದ್ರು, ಸುಚೇಂದ್ರ ಪ್ರಸಾದ್, ವೀಣಾ ಸುಂದರ್, ಹರೀಶ್ ರಾಯಪ್ಪ ಮುಂತಾದವರ ಆಯ್ಕೆಯಿಂದ ಸ್ಪಷ್ಟವಾಗಿದೆ. ಸಂಗೀತ ನಿರ್ದೇಶನ ಸಾಧು ಕೋಕಿಲಾ ಅವರದ್ದು. ಈ ಹಿಂದೆ ಕಿಟ್ಟಿಯ 'ಇಂತಿ ನಿನ್ನ ಪ್ರೀತಿಯ' ಚಿತ್ರಕ್ಕೂ ಸಾಧು ಸಂಗೀತವಿತ್ತು.

Share this Story:

Follow Webdunia kannada