Select Your Language

Notifications

webdunia
webdunia
webdunia
webdunia

ಗಲಾಟೆ ಭೀತಿ; ಉಪ್ಪಿ 'ಬಸವಣ್ಣ'ನಿಗೆ ಸೀಕ್ರೆಟ್ ಮುಹೂರ್ತ

ಗಲಾಟೆ ಭೀತಿ; ಉಪ್ಪಿ 'ಬಸವಣ್ಣ'ನಿಗೆ ಸೀಕ್ರೆಟ್ ಮುಹೂರ್ತ
, ಶುಕ್ರವಾರ, 14 ಜೂನ್ 2013 (15:07 IST)
PR
ಸಾಮಾನ್ಯವಾಗಿ ಯಾವುದೇ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರದ ಮುಹೂರ್ತವನ್ನು ಗುಟ್ಟಾಗಿ ಮಾಡಲು ಇಚ್ಛಿಸುವುದಿಲ್ಲ. ಆದರೆ ವಿವಾದಿತ 'ಬಸವಣ್ಣ' ಚಿತ್ರಕ್ಕೆ ಯಾರಿಗೂ ಗೊತ್ತಾಗದಂತೆ ಮುಹೂರ್ತ ಮುಗಿಸಲಾಗಿದೆ. ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಗುರುವಾರ ಬೆಳಗ್ಗೆ ರಹಸ್ಯ ಮುಹೂರ್ತ ನಡೆಯಿತು. ಚಿತ್ರೀಕರಣವೂ ಶುರುವಾಯಿತು.

ಇದಕ್ಕೇನು ಕಾರಣ? ಮೊದಲನೆಯದ್ದು, ಮುಹೂರ್ತ ಯಾವಾಗ, ಎಲ್ಲಿ ಎಂದು ಗೊತ್ತಾದರೆ ಗಲಾಟೆ ನಡೆಯಬಹುದು ಎನ್ನುವ ಭೀತಿ. ಎರಡನೇಯದ್ದು ಗುಟ್ಟಾಗಿ ಮುಹೂರ್ತ ಮಾಡಿದ್ದನ್ನೇ ಮಾಧ್ಯಮಗಳು ದೊಡ್ಡ ಸುದ್ದಿ ಮಾಡುತ್ತವೆ, ಆಗ ಪುಕ್ಕಟೆ ಪ್ರಚಾರ ಸಿಗುತ್ತದೆ ಎನ್ನುವುದು.

'ಬಸವಣ್ಣ' ಚಿತ್ರದಲ್ಲಿ ಉಪೇಂದ್ರ ನಾಯಕ, ರಾಗಿಣಿ ದ್ವಿವೇದಿ ಒಬ್ಬ ನಾಯಕಿ. ಚಿತ್ರವನ್ನು ನಿರ್ದೇಶಿಸುತ್ತಿರುವುದು 'ದಂಡುಪಾಳ್ಯ' ಖ್ಯಾತಿಯ ಶ್ರೀನಿವಾಸ ರಾಜು. ನಿರ್ಮಿಸುತ್ತಿರುವುದು ಸಿ.ಆರ್. ಮನೋಹರ್.

ಚಿತ್ರದ ಹೆಸರು 'ಬಸವಣ್ಣ' ಎಂದು ಘೋಷಣೆಯಾದಾಗಲೇ ಸಾಕಷ್ಟು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದರು. ಸಾಲದೆಂಬಂತೆ ಬಸವ ಜಯಂತಿಯಂದೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಒಂದು ಕಡೆ ಧ್ಯಾನಮುದ್ರೆ, ಕೆಳಗೆ ಪಿಸ್ತೂಲು, ಶೀರ್ಷಿಕೆಯ ಪಕ್ಕ ಸಮುದಾಯವೊಂದನ್ನು ಬಿಂಬಿಸುವ ನಾಮ. ಪೋಸ್ಟರ್ ನೋಡಿದ ಪ್ರತಿಯೊಬ್ಬರೂ, ಇದು ಅತಿರೇಕದ ಪರಮಾವಧಿ ಎಂದೇ ಉದ್ಘರಿಸಿದ್ದರು.

ಇಷ್ಟಾದರೂ ನಿರ್ದೇಶಕ ಶ್ರೀನಿವಾಸ ರಾಜು ತನ್ನ ಚಿತ್ರದ ಶೀರ್ಷಿಕೆ ಬದಲಾಯಿಸಲು ಒಪ್ಪಿರಲಿಲ್ಲ. ವಿಚಿತ್ರ ಪೋಸ್ಟರ್ ವಿನ್ಯಾಸವನ್ನೂ ಸಮರ್ಥಿಸಿಕೊಂಡಿದ್ದರು. ಈಗಲೇ ಯಾವುದನ್ನೂ ನಿರ್ಧರಿಸಬೇಡಿ, ಚಿತ್ರ ನೋಡಿದ ನಂತರ ಪ್ರತಿಕ್ರಿಯಿಸಿ ಎಂದು ಹೇಳಿದ್ದರು.

ಆದರೆ ಈಗ ಚಿಕ್ಕ ಬದಲಾವಣೆಗೆ ಸಮ್ಮತಿಸಿದ್ದಾರೆ. ಸುದ್ದಿವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶ್ರೀನಿವಾಸ ರಾಜು, ಪೋಸ್ಟರ್‌ನಲ್ಲಿರುವ ಪಿಸ್ತೂರ್ ಚಿತ್ರವನ್ನು ತೆಗೆಯಲು ಒಪ್ಪಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಿರ್ಮಾಪಕ ಮನೋಹರ್, ಚಿತ್ರದ ಪೋಸ್ಟರ್ ಬಿಡುಗಡೆಯಾದಾಗ ನಾನು ನಿರ್ಮಾಪಕನಾಗಿರಲಿಲ್ಲ. ಇತ್ತೀಚೆಗಷ್ಟೇ ಚಿತ್ರ ತಂಡಕ್ಕೆ ಸೇರಿಕೊಂಡಿದ್ದೇನೆ. ಇಂತಹ ಪ್ರಚಾರ ನನಗೆ ಬೇಕಾಗಿಲ್ಲ. ಖಂಡಿತಾ ಮುಂದಿನ ಪೋಸ್ಟರ್‌ಗಳಲ್ಲಿ ಈ ರೀತಿಯ ವಿವಾದಿತ ಅಂಶಗಳಿರುವುದಿಲ್ಲ ಎಂದು ಹೇಳಿದ್ದಾರೆ.

Share this Story:

Follow Webdunia kannada