Select Your Language

Notifications

webdunia
webdunia
webdunia
webdunia

ಕುಮಾರತ್ರಯರು ಒಟ್ಟಾಗಿ ನಟಿಸುವ ಓಂ

ಕುಮಾರತ್ರಯರು ಒಟ್ಟಾಗಿ ನಟಿಸುವ ಓಂ
ಬೆಂಗಳೂರು , ಗುರುವಾರ, 27 ಡಿಸೆಂಬರ್ 2007 (15:26 IST)
ಕನ್ನಡ ಚಿತ್ರರಸಿಕರ ಬಹುದಿನಗಳ ಕನಸು ಈಗ ನೆರವೇರುವ ಸಮಯ ಬಂದಿದೆ. ತಮ್ಮ ಮಕ್ಕಳ ಜೊತೆ ಒಂದು ಚಿತ್ರದಲ್ಲಿ ನಟಿಸಬೇಕೆಂಬುದು ಮೇರುನಟ ಡಾ. ರಾಜ್‌ಕುಮಾರ್ ಅವರ ಬಹು ದೊಡ್ಡ ಆಸೆಯಾಗಿತ್ತು. ಆದರೆ ವಿಧಿ ಅದಕ್ಕೆ ಅವಕಾಶ ನೀಡಲಿಲ್ಲ.

ಅವರಿಲ್ಲದಿದ್ದರೂ ಅವರ ಮೂವರು ಮಕ್ಕಳ ಅಭಿನಯದಲ್ಲಿ ಚಿತ್ರ ನಿರ್ಮಿಸಲು ಪಿರಮಿಡ್ ಸೈಮಿರಾ ಸಂಸ್ಥೆ ಮುಂದೆ ಬಂದಿದೆ. ಈ ಸಂಸ್ಥೆ ನಿರ್ಮಿಸುತ್ತಿರುವ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಒಟ್ಟಿಗೆ ಅಭಿನಯಿಸುತ್ತಿರುವುದರಿಂದ ಇದೊಂದು ಸಿಹಿ ಸುದ್ದಿ.

ಚಿತ್ರ ನಿರ್ದೇಶಕ ರವಿ ಶ್ರೀವತ್ಸ. ಆದರೆ ಈ ಚಿತ್ರಕ್ಕೆ ಓಂ ಎಂಬ ಟೈಟಲ್ ಇಟ್ಟಿರುವುದು ಕುತೂಹಲ ಕೆರಳಿಸಿದೆ. ಉಪೇಂದ್ರ ಅವರ ಓಂ ಚಿತ್ರಕ್ಕೂ ಈ ಕಥಾವಸ್ತುವಿಗೂ ಸಂಬಂಧವಿಲ್ಲದಿದ್ದರೂ ಆ ಚಿತ್ರ ಗಳಿಸಿದ ಯಶಸ್ಸಿಗಿಂತ ಹೆಚ್ಚಿನ ಯಶಸ್ಸು ಗಳಿಸುವ ವಿಶ್ವಾಸ ಶ್ರೀವತ್ಸ ಅವರದ್ದು.

ಮಾದೇಶ ಸಿನೆಮಾ ಷೂಟಿಂಗ್ ವೇಳೆಯಲ್ಲಿ ಶಿವರಾಜ್‌ಕುಮಾರರಿಗೆ ಶ್ರೀವತ್ಸ ಕತೆಯ ಎಳೆ ಹೇಳಿದ್ದರಂತೆ. ಅದು ಅವರಿಗೆ ಮೆಚ್ಚಿಗೆ ಆಯಿತಂತೆ. ನಂತರ ಇಬ್ಬರು ಸಹೋದರರಿಗೂ ಆ ಕತೆ ಇಷ್ಟವಾಯಿತು. ಈ ಸಿನೆಮಾಗೆ ಸಂಬಂಧಿಸಿದಂತೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ದೊರೆಯಿತು.

ಅಪ್ಪಾಜಿ ಇದ್ದಾಗ ನಾವು ನಾಲ್ಕು ಜನ ಒಂದೇ ಚಿತ್ರದಲ್ಲಿ ಅಭಿನಯಿಸಿದರೆ ಚೆನ್ನ ಅಂತ ಬಹಳಷ್ಟು ಜನ ಹೇಳಿದ್ದರು. ಆದರೆ ಅದಾಗಲಿಲ್ಲ ಎಂದು ರಾಘವೇಂದ್ರ ರಾಜ್‌ಕುಮಾರ್ ಹೇಳಿದರು. ಪಾತ್ರ ಹೇಗಿದೆಯೋ ಅದಕ್ಕೆ ಸರಿಯಾಗಿ ನಮ್ಮನ್ನು ಬಳಸಿಕೊಳ್ಳಬೇಕೇ ಹೊರತು ತಮಗೆ ತಕ್ಕ ಹಾಗೆ ಪಾತ್ರವನ್ನು ಸೃಷ್ಟಿ ಮಾಡಬಾರದು ಎಂದು ತ್ರಿಮೂರ್ತಿಗಳು ನಿರ್ದೇಶಕರಿಗೆ ಹೇಳಿದ್ದರಂತೆ. ಈ ಚಿತ್ರ ಒಳ್ಳೆಯ ಚಿತ್ರವಾಗಿ ಮೂಡಿಬರಬೇಕು ಎನ್ನುವುದು ಚಿತ್ರತಂಡದ ಆಶಯ.

ಏಕೆಂದರೆ ಕುಮಾರತ್ರಯರು ಒಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬರುವುದು ಅಪರೂಪ ಎಂದರು ರಾಘವೇಂದ್ರ ರಾಜ್‌ಕುಮಾರ್. ಎಲ್ಲರೂ ರವಿ ಶ್ರೀವತ್ಸ ಅವರ ಮೇಲೆ ನಂಬಿಕೆ ಇಟ್ಟಿದ್ದಾರೆ, ಅವರು ಯಾರ ನಂಬಿಕೆಗೆ ಧಕ್ಕೆ ಬರದಂತೆ ಚಿತ್ರ ಮಾಡುವುದಾಗಿ ಪಣ ತೊಟ್ಟಿದ್ದಾರೆ.

Share this Story:

Follow Webdunia kannada