Select Your Language

Notifications

webdunia
webdunia
webdunia
webdunia

ಕರಿಬಸವಯ್ಯಗೆ ಕನ್ನಡ ಚಿತ್ರರಂಗದ ಗೌರವ ಇದೇನಾ?

ಕರಿಬಸವಯ್ಯಗೆ ಕನ್ನಡ ಚಿತ್ರರಂಗದ ಗೌರವ ಇದೇನಾ?
PR
ಬಣ್ಣದ ಲೋಕದ ಮಂದಿಯ ನೈಜ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಮೊನ್ನೆ ತಾನೇ ನಿಧನರಾದ ನಟ ಕರಿಬಸವಯ್ಯನವರಿಗೆ ಶ್ರದ್ಧಾಂಜಲಿ ಬಿಡಿ, ಕನಿಷ್ಠ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೂ ನಮ್ಮ ಸ್ಟಾರುಗಳು ಬರಲಿಲ್ಲ. ಕನ್ನಡ ಚಿತ್ರರಂಗ ಅಂದರೆ ಇಷ್ಟೇನಾ? ನಮ್ಮ ಸ್ಟಾರುಗಳಿಗೆ ಹೃದಯವೇ ಇಲ್ವಾ?

ಕರಿಬಸವಯ್ಯನವರು ಬದುಕಿದ್ದಾಗ ಅವರನ್ನು ಬಳಸಿಕೊಂಡ ನಿರ್ದೇಶಕ-ನಿರ್ಮಾಪಕರಿಗೆ ಲೆಕ್ಕವಿಲ್ಲ. ಎಲ್ಲಾ ಶೋಷಿತ ಪೋಷಕ ನಟರಂತೆ ಅವರೂ ಸಂಭಾವನೆ ವಿಚಾರದಲ್ಲಿ ಕೊನೆಯ ಸಾಲಿನಲ್ಲಿದ್ದವರು. ಕನಿಷ್ಠ ಹಾಗೆ ದುಡಿಸಿಕೊಂಡವರಾದರೂ ಮೊನ್ನೆ 'ಸಂಸ ರಂಗಮಂದಿರ'ದಲ್ಲಿ ಕರಿಬಸವಯ್ಯ ಹೆಣವಾಗಿ ಮಲಗಿದ್ದಾಗ ಬಂದು ಅಗಲಿದ ಆತ್ಮಕ್ಕೆ ಶಾಂತಿಯನ್ನು ಕೋರಬಹುದಿತ್ತು. ಅವರ ಜತೆ ನಟಿಸಿದ್ದ ನಾಯಕ-ನಾಯಕಿಯರಿಗೆ ಅಂತಿಮ ದರ್ಶನ ಪಡೆಯಬಹುದಿತ್ತು.

ಆದರೆ ಮಸಣದ ಹಾದಿಯಲ್ಲಿದ್ದ ಕರಿಬಸವಯ್ಯನವರ ಕಳೇಬರದತ್ತ ಕೆಲವೇ ಕೆಲವರನ್ನು ಬಿಟ್ಟರೆ ಉಳಿದವರು ತಿರುಗಿಯೂ ನೋಡಲಿಲ್ಲ. ಬಂದವರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಘವೇಂದ್ರ ರಾಜ್‌ಕುಮಾರ್, ಶಶಿಕುಮಾರ್, ಎಸ್. ನಾರಾಯಣ್, ಬ್ಯಾಂಕ್ ಜನಾರ್ದನ್ ಸೇರಿದಂತೆ ಕೆಲವೇ ಕೆಲವು ಆಪ್ತರಿದ್ದರು. ಸುಮಾರು ಮೂರು ಗಂಟೆಗಳ ಕಾಲ ಪಾರ್ಥೀವ ಶರೀರ ಅಲ್ಲಿದ್ದರೂ ಉಳಿದ ಸ್ಯಾಂಡಲ್‌ವುಡ್ ಮಂದಿ ಬರಲೇ ಇಲ್ಲ.

ಇದೇ ದುಸ್ಥಿತಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸೋಮವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೂ ಬಂದಿತ್ತು. ಹಿರಿಯ ನಟಿಯರಾದ ಡಾ. ಬಿ. ಸರೋಜಾದೇವಿ, ಡಾ. ಜಯಮಾಲ, ಜಯಂತಿ, ಜಗ್ಗೇಶ್, ಪ್ರೊ. ಬರಗೂರು ರಾಮಚಂದ್ರಪ್ಪ ಸೇರಿದಂತೆ ಬೆರಳೆಣಿಕೆಯ ಹಾಜರಿ ಅಲ್ಲಿತ್ತು. ಇದ್ದವರು ಸ್ಟಾರುಗಳ ಬಗ್ಗೆ ಖೇದದಿಂದಲೇ, ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಬರಲಾಗದವರ ತುರ್ತು ಕಾರ್ಯಗಳನ್ನು ನೆನೆ ನೆನೆದು ಹಿಡಿ ಶಾಪ ಹಾಕಿದರು.

ಸಿಸಿಎಲ್‌ಗಾದರೆ ಹೋಗುತ್ತಿದ್ದರು...
ಹೀಗೆಂದು ಕನ್ನಡ ಸ್ಟಾರುಗಳನ್ನು ತರಾಟೆಗೆ ತೆಗೆದುಕೊಂಡದ್ದು ನವರಸ ನಾಯಕ ಜಗ್ಗೇಶ್ ಮತ್ತು ಇತರರು. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಕ್ಕಾದರೆ ಚಿತ್ರರಂಗದ ದಂಡೇ ಹೋಗುತ್ತಿತ್ತು. ಆದರೆ ಇಲ್ಲಿ ನಮ್ಮನ್ನು ಅಗಲಿರುವುದು ಕರಿಬಸವಯ್ಯ ಎಂದು ಬೇಸರ ಅವರು ವ್ಯಕ್ತಪಡಿಸಿದರು.

ಈ ಬಗ್ಗೆ ಒಂದೆರಡು ಮಾತುಗಳನ್ನು ದುಃಖದಿಂದಲೇ ಆಡಿದ ಜಗ್ಗೇಶ್, ಬಣ್ಣದ ಲೋಕದ ಮಂದಿ ಹೀಗ್ಯಾಕೆ ಮಾಡುತ್ತಾರೆ? ನಮ್ಮ ನಡುವೆ ಹೀಗೆ ಯಾಕಾಗುತ್ತಿದೆ ಎಂದು ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೂ ಬರದೆ, ಶ್ರದ್ಧಾಂಜಲಿಗೂ ಬರದೆ ದೂರ ಉಳಿದವರನ್ನು ಪ್ರಶ್ನಿಸಿದರು.

Share this Story:

Follow Webdunia kannada