Select Your Language

Notifications

webdunia
webdunia
webdunia
webdunia

ಏಷ್ಯಾದ ಪ್ರಥಮ ಸಿನೆರಮಾ ಥಿಯೇಟರ್ 'ಕಪಾಲಿ' ಕಣ್ಮರೆಯಾಗಲಿದೆ

ಏಷ್ಯಾದ ಪ್ರಥಮ ಸಿನೆರಮಾ ಥಿಯೇಟರ್ 'ಕಪಾಲಿ' ಕಣ್ಮರೆಯಾಗಲಿದೆ
PR
ಬೆಂಗಳೂರಿನ ಸುಬೇದಾರ್ ಛತ್ರಂ ರಸ್ತೆಯಲ್ಲಿನ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರ ಶೀಘ್ರದಲ್ಲೇ ಕಣ್ಮರೆಯಾಗಲಿದೆ.

ಎಪ್ಪತ್ತರ ದಶಕದಲ್ಲಿ ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕಟ್ಟಲಾಗಿದ್ದ ಕಪಾಲಿ ಚಿತ್ರಮಂದಿರವನ್ನು ನೆಲಸಮಗೊಳಿಸಿ ಅಲ್ಲಿ ಬೃಹತ್ ಮಾಲ್ ನಿರ್ಮಿಸುವ ಯೋಜನೆ ಚಿತ್ರಮಂದಿರದ ಮಾಲೀಕ ಡಾ. ರಾಮಚಂದ್ರೇಗೌಡರದು.

ಏಷ್ಯಾದ ಪ್ರಥಮ ಸಿನೆರಮಾ ಥಿಯೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಪಾಲಿ ಒಂದೂವರೆ ಸಾವಿರ ಆಸನಗಳನ್ನು ಹೊಂದಿದ್ದು ರಾಜ್ಯದಲ್ಲಿ ಇತರ ಟಾಕೀಸ್‌ಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು ಆಸನಗಳನ್ನು ಹೊಂದಿದೆ.

ಆದುದರಿಂದ ಚಿತ್ರಮಂದಿರ ಅರ್ಧ ಭರ್ತಿಯಾದರೂ ಸಾಕು ಚಿತ್ರದ ನಿರ್ಮಾಪಕರಿಗೆ ನಷ್ಟವಿಲ್ಲ. ಹಾಗಾಗಿಯೇ ಒಂದು ಮಾತು ಚಾಲ್ತಿಗೆ ಬಂದಿದೆ. ಅದೇನೆಂದರೆ ಕಪಾಲಿಯಲ್ಲಿ ಒಂದು ಚಿತ್ರ ಐವತ್ತು ದಿನ ಓಡುವುದೂ ಒಂದೇ ಇತರ ಚಿತ್ರ ಮಂದಿರದಲ್ಲಿ ಅದೇ ಚಿತ್ರ ನೂರು ದಿನಗಳ ಯಶಸ್ವೀ ಪ್ರದರ್ಶನ ಕಾಣುವುದೂ ಒಂದೇ.

ಒಂದೇ ವಾರಕ್ಕೆ ಮಾಯವಾದ ಚಿತ್ರಗಳೂ, ನೂರಾರು ದಿನಗಳ ಯಶಸ್ವೀ ಪ್ರದರ್ಶನ ಕಂಡ ಚಿತ್ರಗಳೂ ಕಪಾಲಿಗೆ ಬಂದು ಹೋಗಿವೆ.

ಈ ಚಿತ್ರ ಮಂದಿರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ಗೆ ಭಾರೀ ಸೋಲು ಮತ್ತು ಭರ್ಜರಿ ಗೆಲುವು ಎರಡನ್ನೂ ನೀಡಿದೆ. ಕಪಾಲಿಯಲ್ಲಿ ಯಾವೊಂದು ಚಿತ್ರವೂ ಯಶಸ್ವೀ ಪ್ರದರ್ಶನ ಕಾಣದ ಸಂದರ್ಭದಲ್ಲಿ ಶಿವರಾಜ್‌ ಕುಮಾರ್ ಅವರ 'ಓಂ' ಚಿತ್ರವೊಂದೇ ಭರ್ಜರಿ ಯಶಸ್ಸು ಕಂಡಿತಂತೆ.

ಹಾಗಾಗಿ ಈಗಲೂ ಕಪಾಲಿಗೆ ಯಾವುದೇ ಹೊಸ ಚಿತ್ರ ಬರಲಿಲ್ಲವೆಂದಾದರೆ ಹೇಳದೆ ಕೇಳದೆ 'ಓಂ' ಪ್ರತ್ಯಕ್ಷವಾಗಿಬಿಡುತ್ತದೆ. ಈ ವಾರದಲ್ಲೂ 'ಬಹು ಜನರ ಬೇಡಿಕೆ ಮೇರೆಗೆ' ಕಪಾಲಿಯಲ್ಲಿ 'ಓಂ' ಅವತರಿಸಿದೆ.

Share this Story:

Follow Webdunia kannada