Select Your Language

Notifications

webdunia
webdunia
webdunia
webdunia

'ಏಕರಾಗ' ಶೈಲಿಯಿಂದ ಹಾಸ್ಯ ಧಾರಾವಾಹಿಗಳು ಹೊರಬರುವುದು ಯಾವಾಗ?

'ಏಕರಾಗ' ಶೈಲಿಯಿಂದ ಹಾಸ್ಯ ಧಾರಾವಾಹಿಗಳು ಹೊರಬರುವುದು ಯಾವಾಗ?
PR
ಇದು ಕಿರುತೆರೆಯ ವೀಕ್ಷಕರ ಪ್ರಶ್ನೆ. ಇದಕ್ಕೆ ಮುಖ್ಯವಾಗಿ ಉತ್ತರಿಸಬೇಕಾದವರು ನಿರ್ದೇಶಕರೋ ಅಥವಾ ನಿರ್ಮಾಣ ಸಂಸ್ಥೆಗಳೋ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

ಹಿಂದಿ ಭಾಷೆಯಲ್ಲಿ ಸಾಮಾಜಿಕ ಧಾರಾವಾಹಿಗಳ ಮಧ್ಯೆಯೇ ಒಂದು ಲಘು ಹಾಸ್ಯದ ಧಾರಾವಾಹಿಯೂ ಸರಿಸುಮಾರಾಗಿ ಎಲ್ಲ ವಾಹಿನಿಗಳಲ್ಲೂ ಕಾಣಿಸಿಕೊಳ್ಳುತ್ತಿತ್ತು. ಸಹರಾ ವಾಹಿನಿಯಲ್ಲಿ ಬರುತ್ತಿದ್ದ 'ಡೋಂಟ್ ವರಿ ಹೋ ಜಾಯೆಗಾ', ಸ್ಟಾರ್ ಪ್ಲಸ್‌ನಲ್ಲಿ ಬರುತ್ತಿದ್ದ 'ತೂ ತೂ ಮೇ ಮೇ', ಇವೇ ಮೊದಲಾದ ಧಾರಾವಾಹಿಗಳ ಶೈಲಿಯಲ್ಲಿಯೇ ಮನೆಯ ಪರಿಸರದಲ್ಲಿ ಉದ್ಭವವಾಗುವ ಹಾಸ್ಯ ಸನ್ನಿವೇಶಗಳನ್ನು ಆಧರಿಸಿ ಧಾರಾವಾಹಿಯನ್ನು ಚಿತ್ರಿಸುವ ಪರಿಪಾಠ ಕನ್ನಡದಲ್ಲೂ ಆರಂಭವಾಯಿತು.

ಫೈನಲ್ ಕಟ್ ಪ್ರೊಡಕ್ಷನ್ಸ್ ಸಂಸ್ಥೆಯ ಸಿಹಿಕಹಿ ಚಂದ್ರುರವರು 'ಪಾ.ಪ. ಪಾಂಡು' ಧಾರಾವಾಹಿಗೆ ಚಾಲನೆ ನೀಡಿದಾಗ ಅದು ಈ ಮಟ್ಟಿನ ಯಶಸ್ಸನ್ನು ದಾಖಲಿಸುತ್ತದೆ ಎಂದು ಅವರಿಗೇ ಗೊತ್ತಿರಲಿಲ್ಲ. ಆದರೆ ಪಾಂಡು ಪಾತ್ರದಲ್ಲಿ ನಟಿಸುತ್ತಿದ್ದ ಚಿದಾನಂದ ಇದ್ದಕ್ಕಿದ್ದಂತೆ ಬೆಳ್ಳಿತೆರೆಯೆಡೆಗೆ ಮುಖಮಾಡಿದಾಗ ಜಹಾಂಗೀರ್ ಎಂಬ ಕಲಾವಿದನನ್ನು ಚಂದ್ರುರವರು ಪಾಂಡು ಪಾತ್ರದಲ್ಲಿ ಪ್ರತಿಷ್ಠಾಪಿಸಿದರು.

ಆರಂಭದಲ್ಲಿ ಪಾತ್ರನಿರ್ವಹಣೆಯಲ್ಲಿ ಜಹಾಂಗೀರ್ ಒಂದಷ್ಟು 'ಬಿಕ್ಕಳಿಕೆಗಳನ್ನು' ಎದುರಿಸಿದರಾದರೂ ಕ್ರಮೇಣ ತಮ್ಮದೇ ಶೈಲಿಯನ್ನು ರೂಢಿಸಿಕೊಂಡರು. ಆದರೆ ಈ ಸಂಸ್ಥೆಯ 'ಸಿಲ್ಲಿ ಲಲ್ಲಿ' ಮತ್ತು 'ಪಾಂಡುರಂಗ ವಿಠಲ' ಧಾರಾವಾಹಿಗಳಲ್ಲೂ ಅದೇ ಶೈಲಿಯ ಹಾಸ್ಯ ಸನ್ನಿವೇಶಗಳನ್ನು ನೋಡಬೇಕಾಗಿ ಬಂದುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ.

ಇದು ಯಾವ ಮಟ್ಟಿಗೆ ಮುಟ್ಟಿತೆಂದರೆ, ಸಂಚಿಕೆಯೊಂದರ ಶೀರ್ಷಿಕೆಯನ್ನು ನೋಡುತ್ತಿದ್ದಂತೆಯೇ ಏನೆಲ್ಲಾ ತಾಪತ್ರಯಗಳು, ಹಾಸ್ಯ ಸನ್ನಿವೇಶಗಳು ಅದರಲ್ಲಿ ಕಂಡುಬರಬಹುದು ಎಂದು ವೀಕ್ಷಕರು ಊಹಿಸುವಷ್ಟು ಸದರಿ ಸಂಚಿಕೆಗಳಲ್ಲಿ ಏಕತಾನತೆ ತುಂಬಿಕೊಂಡಿದೆ. ಧಾರಾವಾಹಿಯ ಶೀರ್ಷಿಕೆ ಬೇರೆ ಎನ್ನುವುದು ಬಿಟ್ಟರೆ ಮಿಕ್ಕಿದ್ದೆಲ್ಲಾ ಹೆಚ್ಚೂಕಮ್ಮಿ ಅದೇ. ಜೀ ವಾಹಿನಿಯಲ್ಲಿ ಪ್ರಸಾರವಾಗುವ 'ಪಾರ್ವತಿ ಪರಮೇಶ್ವರ' ಧಾರಾವಾಹಿಯೂ ಇದೇ ನೆರಳಲ್ಲಿರುವ ಒಂದು ಸೃಷ್ಟಿ ಎಂದು ಹೇಳಬಹುದು.

ಗೋಳಿನ ಕಥೆಯ ಅಥವಾ ಸಾಮಾಜಿಕ ವಿಷಯದ ಧಾರಾವಾಹಿಗಳನ್ನು ಹೊಸದಂತೆ ದಿನಕ್ಕೊಂದರಂತೆ ಹಾಸ್ಯ ಸನ್ನಿವೇಶಗಳನ್ನು ಕಟ್ಟಿಕೊಡುವುದು ಮತ್ತು ಜನರನ್ನು ರಂಜಿಸುವುದು ಅಂದುಕೊಂಡಷ್ಟು ಸುಲಭವಲ್ಲ ಎಂಬುದೇನೋ ನಿಜ. ಆದರೆ ವೈವಿಧ್ಯತೆ ಎಂಬುದೇ ಇಲ್ಲದಿದ್ದರೆ ಹಾಸ್ಯವು ಅದೆಷ್ಟೇ ರಂಜನೀಯವಾಗಿದ್ದರೂ ಬೇಸರ ಹುಟ್ಟಿಸುತ್ತದೆ ಎಂಬುದನ್ನು ಸಂಬಂಧಪಟ್ಟ ತಂತ್ರಜ್ಞರು ಹಾಗೂ ನಿರ್ಮಾಣ ಸಂಸ್ಥೆಗಳು ಅರಿತುಕೊಳ್ಳಬೇಕು ಎಂಬುದೇ ನಮ್ಮ ಕೋರಿಕೆ.

Share this Story:

Follow Webdunia kannada