Select Your Language

Notifications

webdunia
webdunia
webdunia
webdunia

ಆಗಸ್ಟ್ 24ರಂದು ಮೂರನೇ ಕಣ್ಣು ಬಿಡಲಿರುವ 'ಶಿವ'

ಆಗಸ್ಟ್ 24ರಂದು ಮೂರನೇ ಕಣ್ಣು ಬಿಡಲಿರುವ 'ಶಿವ'
SUJENDRA
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ 101ನೇ ಚಿತ್ರ ಎಂಬ ಹೆಗ್ಗಳಿಕೆಯ 'ಶಿವ' ಚಿತ್ರದ ಬಿಡುಗಡೆಗೆ ಎದುರಾಗುತ್ತಿರುವ ಅಡ್ಡಿ ಆತಂಕಗಳು ಒಂದೆರಡಲ್ಲ. ಪ್ರತಿಬಾರಿಯೂ ಬಿಡುಗಡೆ ದಿನಾಂಕ ಒಂದಲ್ಲ ಒಂದು ಕಾರಣದಿಂದ ಮುಂದಕ್ಕೆ ಹೋಗುತ್ತಿದೆ. ಸದ್ಯ ಬಂದಿರುವ ಮಾಹಿತಿಗಳ ಪ್ರಕಾರ, ಆಗಸ್ಟ್ 24ರಂದೇ 'ಶಿವ' ಬೆಳ್ಳಿತೆರೆಯಲ್ಲಿ ಅಬ್ಬರಿಸಲಿದ್ದಾನೆ.

ಆಗಸ್ಟ್ 24ರ ಶುಕ್ರವಾರ 'ಶಿವ' ಬಿಡುಗಡೆ ಆಗಿಯೇ ತೀರುತ್ತದೆ ಎಂದು ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಮತ್ತು ನಿರ್ದೇಶಕ ಓಂ ಪ್ರಕಾಶ್ ರಾವ್ ಕಟ್ಟಕಡೆಯ ಭರವಸೆ ನೀಡಿದ್ದಾರೆ. ಈ ಚಿತ್ರದಲ್ಲಿ ಶಿವಣ್ಣನಿಗೆ ರಾಗಿಣಿ ದ್ವಿವೇದಿ ನಾಯಕಿ.

ಕೆಲ ದಿನಗಳ ಹಿಂದಷ್ಟೇ, ಆಗಸ್ಟ್ 10ರಂದು ಬಿಡುಗಡೆ ಮಾಡಿಯೇ ಸಿದ್ಧ ಎಂದು ಸ್ವತಃ ಶ್ರೀಕಾಂತ್ ಅವರೇ ಹೇಳಿದ್ದರಲ್ಲವೇ? ಅದೂ ನಿಜಾನೇ, ಶಿವರಾಜ್ ಕುಮಾರ್ ಸಿನಿಮಾಕ್ಕಾಗಿ ಕಳೆದೊಂದು ವರ್ಷದಿಂದ ಜಾತಕ ಪಕ್ಷಿಯಂತೆ ಕಾಯುತ್ತಿರುವ ಅಭಿಮಾನಿಗಳನ್ನು ಹೀಗೆಂದು ಶ್ರೀಕಾಂತ್ ಸಮಾಧಾನ ಪಡಿಸಿದ್ದು ಹೌದು. ಆದರೆ ಅವರ ಕಷ್ಟವನ್ನು ಬಲ್ಲವರು ಯಾರು?

ಆಗಸ್ಟ್ 10ರಂದೇ 'ಶಿವ' ಚಿತ್ರವನ್ನು ಬಿಡುಗಡೆ ಮಾಡಬೇಕೆಂಬ ಆಸೆ ನನಗೂ ಇತ್ತು. ಅದಕ್ಕೂ ಮೊದಲು, ವರಮಹಾಲಕ್ಷ್ಮಿ ಹಬ್ಬದಂದೇ (ಜುಲೈ 27) ಬಿಡುಗಡೆ ಮಾಡಬೇಕೆಂದುಕೊಂಡಿದ್ದೆ. ಆದರೆ ನಮ್ಮ ಕೆಲಸವೇ ಮುಗಿದಿಲ್ಲ. ಇನ್ನೂ ಚಿತ್ರದ ಮೊದಲ ಪ್ರತಿ ಹೊರ ಬಂದಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲೇ ವಿಳಂಬವಾಗುತ್ತಿದೆ. ಹಾಗೆಂದು ಇದಕ್ಕಾಗಿ ಯಾರನ್ನೂ ನಾನು ದೂರುತ್ತಿಲ್ಲ. ನಮ್ಮ ತಂತ್ರಜ್ಞರು ಗುಣಮಟ್ಟದ ಔಟ್‌ಪುಟ್ ಬೇಕೆಂಬ ಕಾರಣಕ್ಕಾಗಿ, ಕಠಿಣ ಶ್ರಮವಹಿಸುತ್ತಿದ್ದಾರೆ. ಆ ಕಾರಣದಿಂದ ತಡವಾಗುತ್ತಿದೆ.

ಆದರೆ ಈಗ ಹೆಚ್ಚು ಕಡಿಮೆ ಮೊದಲ ಪ್ರತಿ ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲವೂ ರೆಡಿಯಾಗಲಿದೆ. ನಂತರ ಸೆನ್ಸಾರ್ ಮಂಡಳಿಗೆ ಹೋಗಬೇಕು. ನಮಗೆ ಪ್ರಚಾರಕ್ಕೂ ಸಮಯ ಬೇಕು. ಹಾಗಾಗಿ ಆಗಸ್ಟ್ 24ರ ಶುಕ್ರವಾರ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ -- ಹೀಗೆಂದು ಶಿವಣ್ಣ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆಗಿರುವ ಶ್ರೀಕಾಂತ್ ವಿವರಣೆ ನೀಡಿದ್ದಾರೆ.

ಹಾಗಾಗಿ ಆಗಸ್ಟ್ 10ರ ನಿರೀಕ್ಷೆಯಲ್ಲಿದ್ದ ಶಿವಣ್ಣ ಅಭಿಮಾನಿಗಳು, ಈಗ ಮತ್ತೆರಡು ವಾರ ಹೆಚ್ಚುವರಿಯಾಗಿ ಕಾಯುವುದು ಅನಿವಾರ್ಯ. ತರಾತುರಿಯಲ್ಲಿ ಬಿಡುಗಡೆ ಮಾಡಿ, ಪ್ರೇಮ್ ನಿರ್ದೇಶನದ 'ಜೋಗಯ್ಯ'ದಂತಹ ಫಲಿತಾಂಶ ಬೇಡ ಎಂಬ ಕಾರಣಕ್ಕೆ ಪ್ರತಿ ವಿಭಾಗದಲ್ಲೂ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ. ಈ ಚಿತ್ರದ ಮೇಲೆ ಸ್ವತಃ ಶಿವಣ್ಣನಿಗೂ ಅಪಾರ ನಿರೀಕ್ಷೆಗಳಿವೆ.

ಇನ್ನು ಕೆಲವು ಮೂಲಗಳ ಪ್ರಕಾರ, 'ಶಿವ' ಆಗಸ್ಟ್ 24ಕ್ಕೂ ಬಿಡುಗಡೆಯಾಗುವುದು ಸಂಶಯ. ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡಿರುವ ನಿರ್ಮಾಪಕರು, ಗಣೇಶ ಚೌತಿಯಂದೇ ಬಿಡುಗಡೆ ಮಾಡಬಹುದು. ಆದರೆ ಇದು ಖಚಿತವಲ್ಲ.

Share this Story:

Follow Webdunia kannada