Select Your Language

Notifications

webdunia
webdunia
webdunia
webdunia

ಆಗಸ್ಟ್ 15ಕ್ಕೆ ದರ್ಶನ್ 'ಸಂಗೊಳ್ಳಿ ರಾಯಣ್ಣ' ರಿಲೀಸ್ ಡೌಟ್?

ಆಗಸ್ಟ್ 15ಕ್ಕೆ ದರ್ಶನ್ 'ಸಂಗೊಳ್ಳಿ ರಾಯಣ್ಣ' ರಿಲೀಸ್ ಡೌಟ್?
SUJENDRA
ಸ್ವಾತಂತ್ರ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಹುಟ್ಟಿದ ದಿನದಂದೇ ಅಂದರೆ, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ದಿನದಂದೇ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರವನ್ನು ಬಿಡುಗಡೆ ಸಿದ್ಧತೆಗಳು ನಡೆದಿದ್ದವು. ಆದರೆ ಈಗಿನ ಸನ್ನಿವೇಶಗಳನ್ನು ಗಮನಿಸಿದರೆ ಆಗಸ್ಟ್ 15ಕ್ಕೆ ಚಿತ್ರ ತೆರೆಗೆ ಬರುವ ಸಾಧ್ಯತೆಗಳು ಕ್ಷೀಣಿಸುತ್ತಿವೆ.

ಇದಕ್ಕೆ ಕಾರಣ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು. ತುಂಬಾ ಕಷ್ಟಪಟ್ಟು ಇತ್ತೀಚೆಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ತನ್ನ ಡಬ್ಬಿಂಗ್ ಮುಗಿಸಿದ್ದಾರೆ. ಐತಿಹಾಸಿಕ ಪಾತ್ರವಾದ ಕಾರಣ ಡಬ್ಬಿಂಗ್ ಸುಲಭವಾಗಿರಲಿಲ್ಲ. ದರ್ಶನ್‌ಗೆ ಸುಮಾರು 20 ದಿನಗಳೇ ಬೇಕಾದವಂತೆ. ಈಗ ಇತರರ ಡಬ್ಬಿಂಗ್ ಕೂಡ ಮುಗಿದಿದೆ. ಹಾಗೆಂದು ಚಿತ್ರ ಬಿಡುಗಡೆಗೆ ರೆಡಿ ಎಂದಲ್ಲ.

ಕಂಪ್ಯೂಟರ್ ಗ್ರಾಫಿಕ್ಸ್, ಡಿಟಿಎಸ್ ರೀರಿಕಾರ್ಡಿಂಗ್ ಕೆಲಸಗಳು ಇನ್ನಷ್ಟೇ ನಡೆಯಬೇಕಿದೆ. ಇವು ತರಾತುರಿಯಲ್ಲಿ ಮುಗಿಯುವ ಕೆಲಸಗಳಲ್ಲ. ಆದರೂ ಚಿತ್ರತಂಡ ಆಗಸ್ಟ್ 15ರಂದೇ ಬಿಡುಗಡೆ ಮಾಡುವ ಮಾತುಗಳನ್ನಾಡುತ್ತಿದೆ. ಗಾಂಧಿನಗರದ ಮೂಲಗಳ ಪ್ರಕಾರ ಇದು ಸಾಧ್ಯವಿಲ್ಲದ ಮಾತು.

ಆನಂದ್ ಅಪ್ಪುಗೋಳ್ ನಿರ್ಮಾಣದ, ನಾಗಣ್ಣ ನಿರ್ದೇಶನದ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ದರ್ಶನ್ ನಾಯಕ. ಕಿತ್ತೂರು ಚೆನ್ನಮ್ಮ ಪಾತ್ರದಲ್ಲಿ ಜಯಪ್ರದಾ ನಟಿಸಿದ್ದಾರೆ. ನಿಖಿತಾ ತುಕ್ರಾಲ್, ಶ್ರೀನಿವಾಸ ಮೂರ್ತಿ, ಶಶಿಕುಮಾರ್, ಧರ್ಮ, ಉಮಾಶ್ರೀ, ಕರಿಬಸವಯ್ಯ ಮುಂತಾದವರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಆಗಸ್ಟ್ 15ರಂದೇ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿತ್ತು. ಇದಕ್ಕಾಗಿ ಸ್ಯಾಂಡಲ್‌ವುಡ್ ತಯಾರಿಯನ್ನೂ ಮಾಡಿಕೊಂಡಿತ್ತು. 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಚಿತ್ರ ಇದಾಗಿರುವುದರಿಂದ, ಈ ಚಿತ್ರದ ಬಿಡುಗಡೆ ಸಂದರ್ಭದಲ್ಲಿ ಬೇರೆ ಚಿತ್ರಗಳು ಅಡ್ಡಿಯಾಗದಂತೆ ನೋಡಿಕೊಳ್ಳುವ ತೀರ್ಮಾನಕ್ಕೆ ಕೆಲವರು ಬಂದಿದ್ದರು.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೇಶವ ಆದಿತ್ಯ ಅವರ ಪ್ರಕಾರ, ಚಿತ್ರ ಆಗಸ್ಟ್ 15ಕ್ಕೂ ಮೊದಲು ರೆಡಿಯಾಗಲಿದೆ. ಅದಕ್ಕಾಗಿ ತಂತ್ರಜ್ಞರು ಹಗಲಿರುಳು ಶ್ರಮಿಸುತ್ತಿದ್ದಾರೆ. ಹಾಗೆಂದು ಕೆಲವು ಕೆಲಸಗಳನ್ನು ಅಷ್ಟೊಂದು ತರಾತುರಿಯಲ್ಲಿ ಮಾಡಿ ಮುಗಿಸಲಾಗದು ಎನ್ನುತ್ತಾರವರು.

ಇದನ್ನು ನಾಗಣ್ಣ ಕೂಡ ಒಪ್ಪಿಕೊಂಡಿದ್ದಾರೆ. ನಮಗೆ ಚಿತ್ರವನ್ನು ಆಗಸ್ಟ್ 15ರಂದೇ ಬಿಡುಗಡೆ ಮಾಡುವುದು ಮುಖ್ಯವಲ್ಲ. ಅದಕ್ಕಿಂತಲೂ ಹೆಚ್ಚಾಗಿ, ಚಿತ್ರ ನಮಗೆ ತೃಪ್ತಿ ತರಬೇಕು. ಫಲಿತಾಂಶಗಳು ನಮಗೆ ಮುಖ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.

Share this Story:

Follow Webdunia kannada