Select Your Language

Notifications

webdunia
webdunia
webdunia
webdunia

ಅಪ್ಪು 'ಅಣ್ಣಾ ಬಾಂಡ್', ಉಪ್ಪಿ 'ಕಠಾರಿ ವೀರ' ಆಫ್ ಸೆಂಚುರಿ

ಅಪ್ಪು 'ಅಣ್ಣಾ ಬಾಂಡ್', ಉಪ್ಪಿ 'ಕಠಾರಿ ವೀರ' ಆಫ್ ಸೆಂಚುರಿ
SUJENDRA
ಒಂದು ಚಿತ್ರದ ಮೇಲೆ ಪ್ರೇಕ್ಷಕರು ಅಪಾರ ನಿರೀಕ್ಷೆ ಇಟ್ಟಿದ್ದರು, ಇನ್ನೊಂದು ವಿವಾದಗಳಿಂದಲೇ ನಿರೀಕ್ಷೆ ಹುಟ್ಟಿಸಿತ್ತು. ಎರಡೂ ಚಿತ್ರಗಳು ಒಬ್ಬರಲ್ಲ ಒಬ್ಬರಿಂದ ಬೈಸಿಕೊಂಡವು. ಹಾಗಿದ್ದೂ ಈ ವರ್ಷದ ಪ್ರಮುಖ ಹಿಟ್ ಚಿತ್ರಗಳ ಸಾಲಿಗೆ ಇವೆರಡೂ ಸೇರಿಕೊಂಡಿವೆ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಅಣ್ಣಾ ಬಾಂಡ್' ಮತ್ತು ರಿಯಲ್ ಸ್ಟಾರ್ ಉಪೇಂದ್ರ 'ಕಠಾರಿ ವೀರ ಸುರಸುಂದರಾಂಗಿ' ಚಿತ್ರಗಳು ಆಫ್ ಸೆಂಚುರಿ ಬಾರಿಸಿವೆ.

ವರನಟ ಡಾ. ರಾಜ್‌ಕುಮಾರ್ ಕುಟುಂಬದ ಹೋಮ್ ಬ್ಯಾನರಿನ 80ನೇ ಚಿತ್ರ 'ಅಣ್ಣಾ ಬಾಂಡ್'. ಇಲ್ಲಿ ಪುನೀತ್‌ಗೆ ಪ್ರಿಯಾಮಣಿ ಮತ್ತು ನಿಧಿ ಸುಬ್ಬಯ್ಯ ನಾಯಕಿಯರಾಗಿದ್ದರು. 'ಜಾಕಿ'ಯಲ್ಲಿ ಜಾಕ್‌ಪಾಟ್ ಹೊಡೆದಿದ್ದ ದುನಿಯಾ ಸೂರಿ ನಿರ್ದೇಶಕರು. ಅದೇ ನಿರೀಕ್ಷೆಯನ್ನು ಮೂಡಿಸಿದ್ದ ಸೂರಿ, 'ಅಣ್ಣಾ ಬಾಂಡ್' ತಾಂತ್ರಿಕತೆಗೆ ಕೊಟ್ಟಷ್ಟು ಒತ್ತು ಕಥೆಗೆ ಕೊಡದೆ ಎಡವಿದರು.

ಆದರೂ ಪ್ರೇಕ್ಷಕರು ಕೈ ಬಿಡಲಿಲ್ಲ. ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಚಿತ್ರ ಬಾಕ್ಸಾಫೀಸ್‌ನಲ್ಲಿ ರಾಜನ ಠೀವಿಯಲ್ಲಿ ಮುನ್ನುಗ್ಗಿದೆ. ಮೇ 1ರ ಕಾರ್ಮಿಕರ ದಿನದಂದು ಈ ಚಿತ್ರ ಬಿಡುಗಡೆಯಾಗಿತ್ತು. ಅದಕ್ಕೂ ಹೆಚ್ಚಾಗಿ ಮಂಗಳವಾರದಂದು ಕನ್ನಡ ಚಿತ್ರವೊಂದು, ಅದೂ ರಾಜ್ ಹೋಮ್ ಬ್ಯಾನರಿನ ಚಿತ್ರವೊಂದು ಬಿಡುಗಡೆಯಾಗಿದ್ದು ವಿಶೇಷ ಎನಿಸಿತ್ತು.

ವಿಮರ್ಶಕರ ಟೀಕೆ-ಟಿಪ್ಪಣಿಗಳಿಗೆ ಸೂರಿ ಮಾತ್ರವಲ್ಲ, ಪುನೀತ್ ಅಭಿಮಾನಿಗಳೂ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರಣ, ಅವರಿಗಿಷ್ಟವಾಗುವ ಫೈಟುಗಳು, ಹಾಡುಗಳು ಚಿತ್ರದಲ್ಲಿದ್ದವು. ಪುನೀತ್ ಅಭಿನಯ ಇಷ್ಟವಾಗಿತ್ತು. ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಎಂದು ಪ್ರಶ್ನಿಸುತ್ತಲೇ ಚಿತ್ರವನ್ನು ಗೆಲ್ಲಿಸಿದರು.
webdunia
SUJENDRA

'ಅಣ್ಣಾ ಬಾಂಡ್' ತೆರೆಗೆ ಬಂದ ಹತ್ತು ದಿನಗಳ ನಂತರ ಬಿಡುಗಡೆಯಾಗಿದ್ದು 'ಕಠಾರಿ ವೀರ ಸುರಸುಂದರಾಂಗಿ'. ಉಪ್ಪಿ ನಾಯಕರಾಗಿದ್ದ ಈ ಚಿತ್ರದಲ್ಲಿ ಲಕ್ಕಿ ಸ್ಟಾರ್ ರಮ್ಯಾ ನಾಯಕಿ. ಮುನಿರತ್ನ ನಿರ್ಮಾಣ, ಸುರೇಶ್ ಕೃಷ್ಣ ನಿರ್ದೇಶನವಿತ್ತು. ಇದು ಕನ್ನಡದ ಮೊದಲ ಪೂರ್ಣ ಪ್ರಮಾಣದ 3ಡಿ ಚಿತ್ರ ಎಂಬ ಹೆಗ್ಗಳಿಕೆಯೊಂದಿಗೆ ತೆರೆಗೆ ಬಂದಿತ್ತು.

'ಕಠಾರಿ ವೀರ' ಚಿತ್ರ ಆರಂಭದಿಂದಲೇ ವಿವಾದಗಳನ್ನು ಬಡಿದೆಬ್ಬಿಸುತ್ತಾ ಸುದ್ದಿ ಮಾಡುತ್ತಿತ್ತು. 'ಗಾಡ್‌ಫಾದರ್' ಚಿತ್ರದ ನಿರ್ಮಾಪಕ ಕೆ. ಮಂಜು ಪ್ರತಿಯೊಂದಕ್ಕೂ ತಗಾದೆ ಎತ್ತುತ್ತಿದ್ದರು. ಹಾಗೆ ಅವರಿಬ್ಬರು ಗಲಾಟೆ ಮಾಡಿಕೊಳ್ಳುತ್ತಿದ್ದು ಟಿವಿ ಚಾನೆಲ್‌ಗಳ ಸ್ಟುಡಿಯೋಗಳಲ್ಲಿ. ಅತ್ತ ಟಿವಿಗಳಿಗೆ ಟಿಆರ್‌ಪಿ ಲಾಭ, ಇತ್ತ ನಿರ್ಮಾಪಕರಿಗೆ ಪುಕ್ಕಟೆ ಪ್ರಚಾರ. ಒಂದು ಹಂತದಲ್ಲಿ ಚಿತ್ರರಂಗದ ಗಲಾಟೆ ಬೀದಿಗೆ ಬಂದಿತ್ತು.

ಈ ಗಲಾಟೆಯೇನೋ ಚಿತ್ರ ಬಿಡುಗಡೆಯಾದಾಗ ನಿಂತಿತು. ಆದರೆ ಮತ್ತೆ ಶುರುವಾಗಿದ್ದು ಹಿಂದೂ ಸಂಘಟನೆಗಳ ಆಕ್ಷೇಪ. ಚಿತ್ರದಲ್ಲಿ ಹಿಂದೂ ದೇವಾನುದೇವತೆಗಳಿಗೆ ಅವಮಾನ ಮಾಡಲಾಗಿದೆ ಎಂದು ಅಲ್ಲಲ್ಲಿ ಪೋಸ್ಟರುಗಳಿಗೆ ಬೆಂಕಿ, ಚಿತ್ರಪ್ರದರ್ಶನಕ್ಕೆ ಅಡ್ಡಿ, ಕಲಾವಿದರಿಗೆ ಘೇರಾವ್ ಮುಂತಾದುವು ನಡೆದವು. ಆಕ್ಷೇಪಕಾರಿ ದೃಶ್ಯಗಳಿಗೆ ಕತ್ತರಿ ಹಾಕಬೇಕು ಎಂದು ಒಪ್ಪಿಕೊಂಡ ಬೆನ್ನಿಗೆ, ಮುನಿರತ್ನ ರಕ್ಷಣೆಗೆ ಯಾವುದೋ ಸಂಘಟನೆ ಬಂತು. ನಂತರ ಎಲ್ಲವೂ ಠುಸ್.

ಆದರೂ ಒಟ್ಟಾರೆ ಇದರಿಂದ ನಿರ್ಮಾಪಕರಿಗೆ ನಷ್ಟವಾಗಿಲ್ಲ. ಮೊದಲ 3ಡಿ ಚಿತ್ರ ನಿರ್ಮಿಸಿದ ಮುನಿರತ್ನರನ್ನು ಕನ್ನಡ ಪ್ರೇಕ್ಷಕರು ಕೈ ಬಿಟ್ಟಿಲ್ಲ. 'ಕಠಾರಿ ವೀರ'ನೂ 50 ದಿನಗಳನ್ನು ಪೂರೈಸಿದ್ದಾನೆ. ಆ ಮಟ್ಟಿಗೆ ಉಪೇಂದ್ರ ಮತ್ತು ರಮ್ಯಾ ಕೂಡ ಗೆಲುವಿನ ನಗೆ ಬೀರಿದ್ದಾರೆ.

Share this Story:

Follow Webdunia kannada