Select Your Language

Notifications

webdunia
webdunia
webdunia
webdunia

ಸಿಹಿ-ಕಹಿಯಲ್ಲಿ ಸಮಭಾಗಿಗಳು: 'ಚಂದ್ರು ಮತ್ತು ಗೀತಾ'

ಸಿಹಿ-ಕಹಿಯಲ್ಲಿ ಸಮಭಾಗಿಗಳು: 'ಚಂದ್ರು ಮತ್ತು ಗೀತಾ'
EVENT
ಇದು ಸುಮಾರು ಎರಡು ದಶಕಗಳಷ್ಟು ಹಿಂದಿನ ಮಾತು. ಆಗೆಲ್ಲಾ ಚಂದನ ವಾಹಿನಿಯನ್ನು (ಡಿಡಿ 9) ಬಿಟ್ಟರೆ ಬೇರಾವುದೇ ಖಾಸಗಿ ವಾಹಿನಿಗಳಿರಲಿಲ್ಲ. ವಾರಕ್ಕೊಮ್ಮೆ ಶುಕ್ರವಾರದಂದು ಪ್ರಸಾರವಾಗುತ್ತಿದ್ದ ಚಿತ್ರಮಂಜರಿ ಹಾಗೂ ಶನಿವಾರ ಪ್ರಸಾರವಾಗುತ್ತಿದ್ದ ಕನ್ನಡ ಚಲನಚಿತ್ರವನ್ನು ನೋಡಲು ಜನರು ಹಾತೊರೆಯುತ್ತಿದ್ದ ಕಾಲವದು. ಮುದ್ರಣ ಮಾಧ್ಯಮದಲ್ಲಿ ಮಾತ್ರವೇ ಧಾರಾವಾಹಿಯ ಸವಿಯನ್ನು ಕಂಡಿದ್ದ ಜನರಿಗೆ ದೂರದರ್ಶನದ ಮ‌ೂಲಕ ಧಾರಾವಾಹಿಯ ರುಚಿ ಹತ್ತಿಸಿದವರು ನಿರ್ದೇಶಕ ಎಚ್‌.ಎಂ.ಕೆ. ಮ‌ೂರ್ತಿ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅದೇ 'ಸಿಹಿ-ಕಹಿ' ಧಾರಾವಾಹಿ. ಈ ಧಾರಾವಾಹಿಯ ಮ‌ೂಲಕ ಬಣ್ಣದ ಲೋಕದ ಹಲವು ಮಂದಿ ಬೆಳಕನ್ನು ಕಂಡರೆಂದು ಹೇಳಬಹುದು. ಅವರ ಪೈಕಿ ಹೆಸರಿಸಬಹುದಾದ ಕಲಾವಿದ ದಂಪತಿಗಳೆಂದರೆ ಚಂದ್ರು ಮತ್ತು ಗೀತಾ. ತಮಗೆ ಹೆಸರು ನೀಡಿದ ಆ ಧಾರಾವಾಹಿಯನ್ನು ಅನುದಿನವೂ ಸ್ಮರಿಸಲೋ ಎಂಬಂತೆ ಈ ಇಬ್ಬರು ತಂತಮ್ಮ ಹೆಸರುಗಳ ಹಿಂದೆ 'ಸಿಹಿ-ಕಹಿ'ಯನ್ನು ಸೇರಿಸಿಕೊಂಡಿದ್ದಾರೆ; ಆಫ್‌ಕೋರ್ಸ್‌, ಇದು ಅವರು ಈ ಮಾಧ್ಯಮದಲ್ಲಿ ಎದುರಿಸಿದ ಪರಿಸ್ಥಿತಿಯನ್ನು ಸೂಚಿಸುವ ಪದವೂ ಹೌದು!

ಹೀಗೆ ಕಲಾಜೀವನವನ್ನು ಪ್ರಾರಂಭಿಸಿದ ಈ ಇಬ್ಬರು ತಮ್ಮದೇ ನೆಲೆಗಟ್ಟಿನಲ್ಲಿ ಚಲನಚಿತ್ರಗಳಲ್ಲಿ ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುತ್ತಾ ಹೋದರು. ಹಾಸ್ಯದ ಹೆಸರಿನಲ್ಲಿ ಅಪಹಾಸ್ಯದ ಪಾತ್ರಗಳಲ್ಲೂ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಚಂದ್ರುರವರಿಗೆ ಒಮ್ಮೊಮ್ಮೆ ಒದಗಿಬರುತ್ತಿತ್ತು. ಇಂಥ ಸಂದರ್ಭಗಳಲ್ಲೆಲ್ಲಾ ಅವರು ಮೌನವಾಗಿ ರೋದಿಸುತ್ತಿದ್ದುದುಂಟು. ಇತ್ತ ಗೀತಾರವರು ಚಲನಚಿತ್ರಗಳಲ್ಲಿನ ಅಭಿನಯದ ಜೊತೆಜೊತೆಗೆ ಕಂಠದಾನ ಕಲಾವಿದೆಯಾಗಿಯೂ ಹೆಸರು ಮಾಡಿದರು.

ಈ ದಂಪತಿಗಳು 'ಫೈನಲ್‌ ಕಟ್‌ ಪ್ರೊಡಕ್ಷನ್ಸ್‌' ಸಂಸ್ಥೆಯನ್ನು ಹುಟ್ಟುಹಾಕಿದಾಗ ಅದು ಅವರಿಗೊಂದು ತಿರುವು ನೀಡಿತೆಂದೇ ಹೇಳಬೇಕು. 'ಪಾ.ಪ. ಪಾಂಡು', 'ಪರಮಪದ', 'ಸಿಲ್ಲಿ-ಲಲ್ಲಿ' ಇವೇ ಮೊದಲಾದ ಧಾರಾವಾಹಿಗಳು ಈ ಇಬ್ಬರಿಗೂ ರೆಕಗ್ನಿಷನ್‌ ನೀಡಿದವು. ಈ ಇಬ್ಬರೂ ಈಗ ಸುಖಿಗಳು. ಆದರೆ ಈ ಎರಡು ತುದಿಗಳ ನಡುವೆ ಅವರು ಸಾಗಿಸಿದ ಹೋರಾಟದ ಬದುಕಿದೆಯಲ್ಲಾ? ಅದೇ ಒಂದು ಚಲನಚಿತ್ರಕ್ಕಾಗುವಷ್ಟು ಸರಕನ್ನು ಹೊಂದಿದೆ.

ಸಂಪೂರ್ಣವಾಗಿ ಕಿರುತೆರೆ ಧಾರಾವಾಹಿ ನಿರ್ಮಾಣದೆಡೆಗೆ ತೊಡಗಿಸಿಕೊಂಡಿರುವ ಚಂದ್ರು ಆಗೊಮ್ಮೆ-ಈಗೊಮ್ಮೆ ಚಿತ್ರಗಳಲ್ಲಿ ನಟಿಸುತ್ತಾರೆ. ಅವರು ಸುವರ್ಣ ವಾಹಿನಿಯಲ್ಲಿ ಸಾದರಪಡಿಸುತ್ತಿರುವ 'ಬೊಂಬಾಟ್‌ ಭೋಜನ' ಅಡುಗೆ ಕಾರ್ಯಕ್ರಮವಂತೂ ಸೂಪರ್‌ಹಿಟ್‌. ತಿಂಡಿ ಮತ್ತು ಊಟವನ್ನು ಹೇಗೆ ಅನುಭವಿಸಿಕೊಂಡು ತಿನ್ನಬೇಕು ಎಂಬುದನ್ನು ಚಂದ್ರುರವರನ್ನು ನೋಡೇ ನಾವು ಕಲಿತದ್ದು ಎಂದು ಈಗಲೂ ಕೆಲವು ವೀಕ್ಷಕರು ಹೇಳುವುದುಂಟು.

ಸಿಹಿ-ಕಹಿ ದಂಪತಿಗಳ ಕೊಡುಗೆ ಕಲಾಭಿಮಾನಿಗಳಿಗೆ ಇನ್ನೂ ಬಹಳಷ್ಟು ದಿನ ಸಿಗುತ್ತಲೇ ಇರಲಿ.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!

Share this Story:

Follow Webdunia kannada