ಕಾರ್ಮಿಕ ಸಂಘಟನೆಗಳ ತೀವ್ರ ಪ್ರತಿಭಟನೆಗೆ ಬೆದರಿದ ಕೇಂದ್ರ ಸರಕಾರ, ನೌಕರರ ಭವಿಷ್ಯ ನಿಧಿ ಠೇವಣಿಯ ಮೇಲೆ 8.8 ಪ್ರತಿಶತ ಬಡ್ಡಿದರವನ್ನು ನೀಡಲು ಸಮ್ಮತಿ ಸೂಚಿಸಿದೆ.
ಕಾರ್ಮಿಕರ ಭವಿಷ್ಯ ನಿಧಿ ಠೇವಣಿಗಳಿಗೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ನಿಗದಿಗೊಳಿಸಿದ್ದ 8.8 ಪ್ರತಿಶತ ಬಡ್ಡಿ ದರದ ಬದಲು 8.7 ಪ್ರತಿಶತ ದರ ನಿಗದಿ ಪಡಿಸಿರುವ ಹಣಕಾಸು ಸಚಿವಾಲಯದ ನೀತಿಯನ್ನು ಖಂಡಿಸಿ ಕಾರ್ಮಿಕ ಸಂಘಟನೆಗಳು ದೇಶವ್ಯಾಪ್ತಿ ಮುಷ್ಕರ ಕೈಗೊಂಡಿದ್ದವು.
ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರ ಕಡಿತಗೊಳಿಸಿರುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ತೀವ್ರ ಪ್ರತಿಭಟನೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಕಾರ್ಮಿಕ ಸಚಿವ ಬಂಡಾರೂ ದತ್ತಾತ್ರೇಯ ಮಂಗಳವಾರ ವಿತ್ತ ಸಚಿವ ಅರುಣ ಜೇಟ್ಲಿ ಅವರೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದ್ದಾರೆ.
ಶೀಘ್ರದಲ್ಲಿ ನಮ್ಮ ಸಚಿವಾಲಯ ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರ ಕುರಿತು ಕೇಂದ್ರ ವಿತ್ತ ಸಚಿವರನ್ನು ಭೇಟಿ ಮಾಡಿ ಮುಂದಿನ ತಿರ್ಮಾಣಗಳನ್ನು ಕೈಗೊಳ್ಳುತ್ತೇವೆ ಎಂದು ಬಂಡಾರೂ ದತ್ತಾತ್ರೇಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಪ್ರಸಕ್ತ ವರ್ಷದ ಫೆಬ್ರುವರಿಯಲ್ಲಿ ನಡೆದ ಸಭೆಯಲ್ಲಿ ನೌಕರರ ಭವಿಷ್ಯ ನಿಧಿ ಠೇವಣಿಯ ಮೇಲೆ 8.8 ಪ್ರತಿಶತ ಬಡ್ಡಿದರ ನಿಗದಿ ಮಾಡುವಂತೆ ಪ್ರಸ್ತಾವನೆ ನೀಡಿತ್ತು.
ದೇಶದ ಆರ್ಥಿಕತೆ ಮತ್ತು ಕೇಂದ್ರದ 7 ನೇ ವೇತನ ಆಯೋಗವನ್ನು ಗಮಣದಲ್ಲಿಟ್ಟುಕೊಂಡು ನೌಕರರ ಭವಿಷ್ಯ ನಿಧಿ ಠೇವಣಿ ಮೇಲಿನ ಬಡ್ಡಿದರವನ್ನು ನಿರ್ಧರಿಸಲಾಗಿತ್ತು ಎಂದು ದತ್ತಾತ್ರೇಯ ಹೇಳಿದ್ದಾರೆ.