Select Your Language

Notifications

webdunia
webdunia
webdunia
webdunia

ವಾರದೊಳಗೆ ಬಿಲ್ಡಿಂಗ್ ಪ್ಲಾನ್, ತಿಂಗಳುಗಟ್ಟಲೆ ಕಾಯುವಂತಿಲ್ಲ

ವಾರದೊಳಗೆ ಬಿಲ್ಡಿಂಗ್ ಪ್ಲಾನ್, ತಿಂಗಳುಗಟ್ಟಲೆ ಕಾಯುವಂತಿಲ್ಲ
Bangalore , ಮಂಗಳವಾರ, 10 ಜನವರಿ 2017 (11:08 IST)
ಒಂದು ಮನೆ ಕಟ್ಟಬೇಕಾದರೂ ತಿಂಗಳುಗಟ್ಟಲೆ ಬಿಲ್ಡಿಂಗ್ ಪ್ಲಾನ್‍ಗಾಗಿ ಕಾಯುವ ಕಾಲಕ್ಕೆ ಕೊನೆಗೂ ವಿದಾಯ ಹೇಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಡೀ ಪ್ರಕ್ರಿಯೆಯನ್ನು ಇಂಜಿಯರ್‍ಗಳಿರುವ ವೃತ್ತಿಪರ ಸಮಿತಿಗೆ ಹೊರ ಗುತ್ತಿಗೆ ನೀಡುವ ಮೂಲಕ ವಾರದೊಳಗೆ ಮನೆಗೆ ಬಿಲ್ಡಿಂಗ್ ಪ್ಲಾನ್ ಸಿಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿದೆ.
 
ಮನೆ ಸೇರಿದಂತೆ ಕಟ್ಟಡ ನಿರ್ಮಾಣ ಕ್ಷೇತ್ರ ಅದರಲ್ಲೂ ಮಧ್ಯಮ ವರ್ಗದವರು ಬೆಚ್ಚಿಬೀಳುವುದು ಸರ್ಕಾರದ ಕೆಂಪು ಪಟ್ಟಿಯ ವಿಳಂಬ ನೀತಿಯಿಂದ ಎಂದರೆ ಅತಿಶಯೋಕ್ತಿ ಆಗುವುದಿಲ್ಲ. ಈ ಕುರಿತು ಗಂಭೀರ ಚಿಂತನೆಯನ್ನು ಕೊನೆಗೂ ನಡೆಸಿರುವ ರಾಜ್ಯ ಸರ್ಕಾರ ಬಿಲ್ಡಿಂಗ್ ಪ್ಲಾನ್‍ನ ಇಡೀ ಪ್ರಕ್ರಿಯೆಯನ್ನು ತಜ್ಞ ಇಂಜಿನಿಯರ್‍ಗಳ ಪ್ಯಾನಲ್‍ಗೆ ಹೊರಗುತ್ತಿಗೆ ನೀಡಲು ನಿರ್ಧರಿಸಿದೆ.
 
ವಿಳಂಬ ಇನ್ನಿಲ್ಲ: ದೊಡ್ಡ ಅಪಾರ್ಟ್‍ಮೆಂಟ್ ಸಂಕೀರ್ಣ ಬಿಡಿ 30-40 ನಿವೇಶನದಲ್ಲಿ ಕಟ್ಟಿಕೊಳ್ಳುವ ಮಧ್ಯಮ ವರ್ಗದವರು ಕೂಡ ಬಿಲ್ಡಿಂಗ್ ಪ್ಲಾನ್‍ಗಾಗಿ ಅಲೆದಾಡಬೇಕಾಗಿತ್ತು. ಭ್ರಷ್ಟಾಚಾರ, ಅಲೆದಾಟ, ಮಾನಸಿಕ ಕಿರುಕುಳದಿಂದಾಗಿ ಮನೆ ಕಟ್ಟಿಬಿಟ್ಟರೆ ಸಾಕು ಎನ್ನುವ ಪರಿಸ್ಥಿತಿ ಇತ್ತು. ಇದನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಏಕಗವಾಕ್ಷಿ ವ್ಯವಸ್ಥೆ ಮತ್ತು ಆನ್‍ಲೈನ್‍ನಲ್ಲಿ ಸ್ಯಾಂಕ್ಷನ್ ಪ್ಲಾನ್ ಮಾಡುವ ಯೋಜನೆಯ ಪ್ರಸ್ತಾಪವನ್ನು ಪರಿಶೀಲನೆ ನಡೆಸುತ್ತಿದೆ.
 
`ಹೊಸ ಯೋಜನೆ ಜಾರಿಗೆ ಬಂದರೆ ಆಗ ಅರ್ಜಿದಾರ ಸ್ಥಳೀಯಾಡಳಿತ ಮಂಡಳಿಯ ಅಧಿಕೃತ ಇಂಜಿನಿಯರಿಂಗ್ ಸಹಿ ಅರ್ಜಿಗೆ ಸಹಿ ಮಾಡಿಸಿ ಸಲ್ಲಿಸಿದರೆ ಒಂದು ವಾರದೊಳಗೆ ಅನುಮೋದನೆ ಸಿಗಲಿದೆ' ಎಂದು ನಗರಾಭಿವೃದ್ಧಿ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ವಿಳಂಬ ನೀತಿಯಿಂದಾಗಿಯೇ ನಗರಾಡಳಿತ ಮಂಡಳಿ ಅದರಲ್ಲೂ ಮುಖ್ಯವಾಗಿ ಬಿಬಿಎಂಪಿ ಕಚೇರಿಯಲ್ಲಿ ಅನುಮೋದನೆಗಾಗಿ ನೂರಾರು ಅರ್ಜಿಗಳು ಕಾಯುತ್ತಿವೆ ಎಂದು ಮೂಲಗಳು ತಿಳಿಸಿವೆ.
 
ಏಕಗವಾಕ್ಷಿ ವ್ಯವಸ್ಥೆ: ಗಗನಚುಂಬಿ ಮತ್ತು ವಾಣಿಜ್ಯ ಕಟ್ಟಡಗಳಿಗೂ ಸ್ಯಾಂಕ್ಷನ್ ಪ್ಲಾನ್ ಮತ್ತು ಆಕ್ಯುಪೆನ್ಸಿ ಸರ್ಟಿಫೀಕೆಟ್ ನೀಡುವ ಪ್ರಕ್ರಿಯೆಯನ್ನೂ ಸರಳಗೊಳಿಸಲು ನಗರಾಭಿವೃದ್ಧಿ ಇಲಾಖೆ ಚಿಂತನೆ ನಡೆಸಿದೆ. ಏಕಗವಾಕ್ಷಿ ವ್ಯವಸ್ಥೆಯ ಮೂಲಕ ಅಪಾರ್ಟ್‍ಮೆಂಟ್ ಸೇರಿದಂತೆ ಎಲ್ಲಾ ಕಟ್ಟಡಗಳ ಸ್ಯಾಂಕ್ಷನ್ ಪ್ಲಾನ್ ಮತ್ತು ಆಕ್ಯುಪೆನ್ಸಿ ಸರ್ಟಿಫೀಕೆಟ್ ನೀಡಲು ಯೋಜನೆ ರೂಪಿಸುತ್ತಿದೆ. `ದೊಡ್ಡ ಕಟ್ಟಡಗಳಿಗೆ ಸ್ಯಾಂಕ್ಷನ್ ಪ್ಲಾನ್ ನೀಡುವುದು ತುಂಬಾ ಸಂಕೀರ್ಣ ವಿಷಯವಾಗಿದ್ದರಿಂದ ಹೆಚ್ಚು ಕಾಲ ಬೇಕಾಗುತ್ತದೆ. ಆರಂಭಿಕವಾಗಿ ಚಿಕ್ಕ ಯೂನಿಟ್‍ಗಳಿಗೆ ಈ ರೀತಿ ಏಕಗವಾಕ್ಷಿ ಯೋಜನೆಯನ್ನು ಅಳವಡಿಸಿಕೊಳ್ಳುತ್ತಿದ್ದೇವೆ' ಎಂದು ನಗರಾಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿ ಎ.ವಿ. ರಮೇಶ್ ಹೇಳಿದರು. 
 
ಪ್ರಸಕ್ತ ಮನೆ ಕಟ್ಟಲು ಬಯಸುವವರು ಮೊದಲಿಗೆ ಸ್ಯಾಂಕ್ಷನ್ ಪ್ಲಾನ್‍ಗಾಗಿ ಸ್ಥಳೀಯ ನಗರಾಡಳಿತ ಮಂಡಳಿಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಇದು ಪ್ಲಾನ್ ಅಪ್ರೂವಲ್ ಕಮಿಟಿ (ಪಿಎಸಿ)ಗೆ ಹೋಗುತ್ತಿತ್ತು. ಅಲ್ಲಿ ದಾಖಲೆಗಳ ಸಮಗ್ರ ಪರಿಶೀಲನೆಯ ಬಳಿಕ ಅನುಮೋದನೆ ಸಿಗುತ್ತಿತ್ತು. ಇದು ಹಲವು ಸಂದರ್ಭದಲ್ಲಿ ವಿಳಂಬ ಮತ್ತು ಭ್ರಷ್ಟಾಚಾರಕ್ಕೆ ಕಾರಣವಾಗಿತ್ತು.
 
ಈ ಪ್ರಸ್ತಾವನೆಯನ್ನು ರಿಯಾಲ್ಟಿ ಕ್ಷೇತ್ರ ವ್ಯಾಪಕವಾಗಿ ಸ್ವಾಗತಿಸಿದೆ. `ರಿಯಾಲ್ಟಿಯ ದೀರ್ಘಕಾಲದ ಬೇಡಿಕೆಯಾದ ಏಕಗವಾಕ್ಷಿ ಯೋಜನೆಯನ್ನು ಸಮಗ್ರವಾಗಿ ಜಾರಿಗೆ ತರುವ ನಿಟ್ಟಿನ ಯಾವುದೇ ಕ್ರಮ ಸ್ವಾಗತಾರ್ಹ. ಎಲ್ಲಾ ರೀತಿಯ ಕಟ್ಟಡಗಳಿಗೂ ಆನ್‍ಲೈನ್ ದಾಖಲೆ ಸಲ್ಲಿಕೆ ಕಡ್ಡಾಯಗೊಳಿಸಬೇಕು. ದಾಖಲೆ ಪರಿಶೀಲನೆಯೇ ವಿಳಂಬಕ್ಕೆ ಕಾರಣವಾಗುವುದನ್ನು ತಪ್ಪಿಸಬೇಕು. ಇದರಿಂದ ಸಾಲದ ಮೇಲಿನ ಬಡ್ಡಿಯ ಮೊತ್ತದಲ್ಲಿ ಗಣನೀಯ ಇಳಿಕೆಯಾಗಿ ಆ ಮೂಲಕ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ' ಎಂದು ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್ ಹರಿ ಅಭಿಪ್ರಾಯಪಟ್ಟಿದ್ದಾರೆ.
 
`ಅನುಮೋದನೆ ವಿಳಂಬದಿಂದ ಮನೆ ಖರೀದಿ ಅಥವಾ ನಿರ್ಮಾಣ ವೆಚ್ಚ ಹೆಚ್ಚಾಗುತ್ತಿದೆ. ಅನುಮೋದನೆಗಳನ್ನು ಶೀಘ್ರ ನೀಡುವ ನಿಟ್ಟಿನಲ್ಲಿ ಸರ್ಕಾರದ ಈ ತೀರ್ಮಾನ ಖಚಿತವಾಗಿಯೂ ಮಧ್ಯಮ ವರ್ಗದವರಿಗೆ ಪರೋಕ್ಷವಾಗಿ ನೆರವು ನೀಡಲಿದೆ' ಎಂದು ಬ್ರಿಗೇಡ್ ಗ್ರೂಪ್‍ನ ಸಿಇಒ ಓಂ ಅಹುಜಾ ಹೇಳಿದ್ದಾರೆ.
 
ಮಾದರಿ ಬೈಲಾ: ಕೇಂದ್ರ ಸರ್ಕಾರವು ಮಾದರಿ ಬಿಲ್ಡಿಂಗ್ ಬೈಲಾ 2016ನ್ನು ಈಗಾಗಲೇ ಸಿದ್ಧಪಡಿಸಿದೆ. ಇದನ್ನು ಅಳವಡಿಸಿಕೊಂಡು ಬಿಲ್ಡಿಂಗ್ ಪ್ಲಾನ್‍ಗೆ ತ್ವರಿತವಾಗಿ ಅನುಮೋದನೆ ದೊರೆಯುವಂತೆ ಮಾಡಲು ರಾಜ್ಯಗಳಿಗೆ ಕೇಂದ್ರ ಈಗಾಗಲೇ ಸಲಹೆ ನೀಡಿದೆ. ಈ ಮಾದರಿ ಬೈಲಾ ಪ್ರಕಾರ, ವೃತ್ತಿಪರರ ಸಮಿತಿಯೊಂದು ಡೀಮ್ಡ್ ಬಿಲ್ಡಿಂಗ್ ಪರ್ಮಿಟ್ ಸಿದ್ಧಪಡಿಸಬೇಕು. ಸಮಿತಿಯಲ್ಲಿ ಕಟ್ಟಡ ನಿರ್ಮಾಣ ಇಂಜಿನಿಯರ್, ಸರ್ವಿಸ್ ಇಂಜಿನಿಯರ್ ಮತ್ತು ಪ್ರೂಪ್ ಕನ್ಸಲ್ಟೆಂಟ್‍ಗಳು ಇರಬೇಕಾಗುತ್ತದೆ. ಆ ಬಳಿಕವೇ ಅರ್ಜಿಯನ್ನು ಸ್ಥಳೀಯ ನಗರಾಡಳಿತ ಮಂಡಳಿಗೆ ಅವಶ್ಯಕ ದಾಖಲೆಗಳೊಂದಿಗೆ ಸಲ್ಲಿಸಬೇಕು. 10 ದಿನಗಳ ಒಳಗೆ ನಗರಾಡಳಿತ ಮಂಡಳಿ ಅರ್ಜಿಯನ್ನು ಪರಿಶೀಲಿಸಿ, ಈಗಾಗಲೇ ಪರಿಶೀಲನೆ ನಡೆಸಿದ ವೃತ್ತಿಪರರ ಸಮಿತಿಗೆ ಮಾಹಿತಿ ನೀಡಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 
ಒಟ್ಟಿನಲ್ಲಿ ಈ ಹೊಸ ಏಕಗವಾಕ್ಷಿ ಯೋಜನೆ ಖಚಿತವಾಗಿಯೂ ಬಿಲ್ಡಿಂಗ್ ಪ್ಲಾನ್ ಪಡೆಯುವ ಪ್ರಕ್ರಿಯೆಯನ್ನು ಸಾಕಷ್ಟು ಸರಳಗೊಳಿಸಲಿದೆ. ಪದೇ ಪದೇ ಕಚೇರಿಗೆ ಅಲೆದಾಡುವ ಪ್ರಯಾಸವನ್ನು ಅರ್ಜಿದಾರರಿಗೆ ತಪ್ಪಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗೃಹ ಸಾಲ ಬಡ್ಡಿದರ ಇಳಿಕೆ `2022ರ ವೇಳೆಗೆ ಎಲ್ಲರಿಗೂ ಸೂರು'