ಮಂಗಳೂರು ಮೂಲದ ವಿಜಯಾಬ್ಯಾಂಕ್ 2010ರ ವೇಳೆಗೆ 1 ಲಕ್ಷ ಕೋಟಿ ರೂ.ವ್ಯಾವಹಾರಿಕ ಗುರಿ ಇರಿಸಿದ್ದು, ಪ್ರಸ್ತುತ ಪ್ರತಿಷ್ಠಿತ ಹಣಕಾಸುಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ ಪಿ. ಮಲ್ಯ ಇವರ ಸಾರಥ್ಯದಲ್ಲಿ ಗುರಿಮೀರಿದ ಸಾಧನೆ ನಡೆಸಿದೆ.
ವಿಜಯಾ ಬ್ಯಾಂಕ್ www.vijayabank.com ಮಂಗಳೂರಿನಲ್ಲಿ 1931ರ ಅಕ್ಟೋಬರ್ 31ರಂದು 'ವಿಜಯದಶಮಿ'ಯ ದಿನ ಉದಯವಾಗಿ, ಹೆಸರಿನಲ್ಲಿರುವ ವಿಜಯಾ ಶಬ್ದವು ವಿಜಯದಶಮಿಯನ್ನು ಸಂಕೇತಿಸುತ್ತಿದ್ದು,ಕೆಡುಕಿನ ಮೇಲೆ ಒಳಿತು ಸಾಧಿಸಿದ ಗೆಲುವನ್ನು ಪ್ರತಿನಿಧಿಸುತ್ತದೆ.
ಸ್ಥಾಪಕರು:ಸ್ವಾತಂತ್ರ್ಯ ಹೋರಾಟಗಾರ,ಅಂದಿನ ಮದ್ರಾಸು ಪ್ರಾಂತದ ಸಚಿವರಾಗಿದ್ದ ಅತ್ತಾವರ ಶ್ರೀ ಬಾಲಕೃಷ್ಣ ಶೆಟ್ಟಿಯವರು ಹಾಗೂ ಬಂಟ ಸಮುದಾಯದ ಸಮಾನ ಮನಸ್ಕ ಸಹವರ್ತಿಗಳೊಂದಿಗೆ ಸೇರಿ ಪ್ರಸ್ತುತ ಸಂಸ್ಥೆಯನ್ನು ಆರಂಭಿಸಿದ್ದರು.
ವಿಜಯಾ ಬ್ಯಾಂಕ್‌ನ ಕೇಂದ್ರ ಕಚೇರಿ ಮಂಗಳೂರಿನಲ್ಲಿದೆ, ಆದರೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಬ್ಯಾಂಕ್ ತನ್ನ ಕಾರ್ಪೊರೇಟ್ ಕೇಂದ್ರ ಕಚೇರಿ ಹೊಂದಿದೆ. ಕೃಷಿಯಾಧರಿತ ಸಮುದಾಯದವರಿಂದ ಸ್ಥಾಪಿತವಾದ ಸಂಸ್ಥೆ ಇಂದಿಗೂ ಅದೇ ಮೂಲೋದ್ದೇಶವನ್ನು ಹೊಂದಿದ್ದು,ಸ್ಥಳೀಯ ರೈತಾಪಿಗಳು,ಕೃಷಿಕರು, ಸಣ್ಣ ಹಿಡುವಳಿದಾರರಿಗೆ ನೆರವಾಗುವುದರೊಂದಿಗೆ ಸ್ಥಳೀಯರಲ್ಲಿ ಉಳಿತಾಯ ಮನೋಭಾವ , ಉದ್ಯಮ ಶೀಲತೆಯನ್ನು ಬೆಳೆಸುತ್ತಿದೆ.
ರಾಷ್ಟ್ರೀಕರಣ:ವಿಜಯಾ ಬ್ಯಾಂಕ್ 1980ರಲ್ಲಿ ರಾಷ್ಟ್ರೀಕರಣಗೊಳ್ಳುವುದರೊಂದಿಗೆ ಹೊಣೆಗಾರಿಕೆಯಲ್ಲಿ ಮತ್ತಷ್ಟು ಖಚಿತತೆ ಹೊಂದುವಂತಾಯಿತು. ಆ ಸಂದರ್ಭದಲ್ಲಿ 570 ಶಾಖೆಗಳಿಂದ 700ಕೋಟಿ ವ್ಯವಹಾರ ಸಾಮರ್ಥ್ಯವನ್ನು ಬ್ಯಾಂಕ್ ಹೊಂದಿತ್ತು.ಇದೀಗ 27 ವರ್ಷಗಳ ಬಳಿಕ ಬ್ಯಾಂಕ್ನ ವ್ಯವಹಾರವು 62,000 ಕೋಟಿಗೆ ಏರಿದೆ.ಬ್ಯಾಂಕ್ ತನ್ನ ಅಮೃತ ಮಹೋತ್ಸವವನ್ನು 2006ರಲ್ಲಿ ಆಚರಿಸುವುದರೊಂದು 50,000ಕೋಟಿ ವ್ಯವಹಾರ ನಡೆಸಿದ ಪ್ರಥಮ ಹಣಕಾಸು ಸಂಸ್ಥೆ ಎಂಬ ಹೆಮ್ಮೆಗೆ ಪಾತ್ರವಾಯಿತು.
1 ಲಕ್ಷ ಕೋಟಿ:ಪ್ರಸಕ್ತ 2007 ಮಾರ್ಚ್ ವರೆಗಿನ ಅವಧಿಯಲ್ಲಿ ವಿಜಯಾ ಬ್ಯಾಂಕ್60,000 ಕೋಟಿ ರೂ.ಗಳ ಸಮ್ಮಿಶ್ರ ವ್ಯಾವಹಾರಿಕ ಗಾತ್ರದ ಗುರಿ ಇರಿಸಿತ್ತು, ಆದರೆ,62248 ಕೋಟಿ ರೂ.ಗಳ ಗುರಿ ಮೀರಿದ ಸಾಧನೆ ನಡೆಸಿದೆ. ಬ್ಯಾಂಕ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶ ಪ್ರಕಾಶ್ ಪಿ.ಮಲ್ಯ ಅವರ ಸಮರ್ಥ ಮಾರ್ಗದರ್ಶನದಿಂದ ಇದು ಸಾಧ್ಯವಾಗಿದೆ. ಇನ್ನು ಮೂರು ವರ್ಷಗಳಲ್ಲಿ ಇದು 1 ಲಕ್ಷ ಕೋಟಿ ವಾರ್ಷಿಕ ವ್ಯವಹಾರದ ಪ್ರಗತಿಯ ಗುರಿ ಇರಿಸಿಕೊಂಡಿದ್ದಾರೆ.
ಶಾಖೆ ವಿಸ್ತರಣೆ:ವಿಜಯಾ ಬ್ಯಾಂಕ್ ಪ್ರಸಕ್ತ ಹಣಕಾಸು ವರ್ಷದಲ್ಲಿ ವಿದೇಶಿ ರಾಷ್ಟ್ರಗಳಲ್ಲೂ ತನ್ನ ಶಾಖೆ ತೆರೆಯಲಿದೆ. ಇದಲ್ಲದೆ ಹೊಸ ಶಾಖೆಗಳನ್ನು ದೇಶೀಯವಾಗಿ ಆರಂಭಿಸಿ ಒಟ್ಟು 978ರಿಂದ 1050ಕ್ಕೇರಿಸುವ ಸಿದ್ಧತೆ ಪ್ರಗತಿಯಲ್ಲಿದೆ.
ಕೋರ್ ಬ್ಯಾಂಕಿಂಗ್: ವಿಜಯಾ ಬ್ಯಾಂಕ್ 2004ರಿಂದ ಕೋರ್ ಬ್ಯಾಂಕಿಂಗ್ ಸೌಲಭ್ಯವನ್ನು ಅಳವಡಿಸಿದೆ. ಸಂಸ್ಥೆಯ 464 ವ್ಯಾವಹಾರಿಕ ಶಾಖೆಗಳಲ್ಲಿ ಈ ವ್ಯವಸ್ಥೆ ಲಭ್ಯವಿದೆ.ಬ್ಯಾಂಕ್ ವ್ಯವಹಾರದ 80 ಶೇಕಡ ಭಾಗ ಕೋರ್ ಬ್ಯಾಂಕಿಂಗ್‌ನಲ್ಲಿ ಅಳವಡಿಸಲಾಗಿದೆ.
ಹೊಸತನ:ಹೊಸ ಶಾಖೆಗಳನ್ನು ಕೋರ್ ಬ್ಯಾಂಕಿಂಗ್ ವಿನ್ಯಾಸಕ್ಕೊಳಪಡಿಸಲಾಗುತ್ತಿದೆ ಹಾಗೂ ಸಂಸ್ಥೆಯ90ಶೇಕಡ ಗುರಿ ಸಾಧನೆ ಈ ಮೂಲಕ ನಡೆಯಲಿದೆ. 2008ರ ವೇಳೆಗೆ 675 ಶಾಖೆಗಳನ್ನೂ ಕೋರ್ ಬ್ಯಾಂಕಿಂಗ್ ವಿಧಾನಕ್ಕೆ ಕ್ರಮೀಕರಿಸುವ ಮೂಲಕ ನೂರು ಶೇಕಡ ಸಾಧನೆ ನಡೆಸಲಿದೆ. ಬ್ಯಾಂಕ್ ಈಗ 171ಎಟಿಎಂ ಜಾಲ ಹೊಂದಿದ್ದು,ಮಾರ್ಚ್ ವೇಳೆಗೆ 375ಕ್ಕೆ ವಿಸ್ತರಿಸಲಾಗುವುದು.
ಬ್ಯಾಂಕಿಂಗ್ ವಲಯದಲ್ಲಿ ಪ್ರಥಮ ಬಾರಿಗೆ ಎಟಿಎಂ, ಕ್ರೆಡಿಟ್ ಕಾರ್ಡುಗಳು ಹಾಗೂ ಹಣ ವರ್ಗಾವಣೆಗೆ ಗಣಕೀಕೃತ ಶಾಖೆಗಳನ್ನು ಆರಂಭಿಸಿದ ಪ್ರಥಮ ಬ್ಯಾಂಕ್ ಕೂಡ ಇದಾಗಿದೆ. ಆಧುನೀಕರಣವಿದ್ದರೂ ಗ್ರಾಮೀಣ ಜನರನ್ನು ಮರೆಯದಿರುವ ಬ್ಯಾಂಕ್‌ನ 448 ಶಾಖೆಗಳಲ್ಲಿ 46 ಶೇಕಡ ಗ್ರಾಮೀಣ ಭಾಗಗಳಲ್ಲಿವೆ.
ಆದ್ಯತಾವಲಯ:ಇಕ್ವಿಟಿ ಷೇರುಗಳ ಮೂಲಕ ಸಾರ್ವಜನಿಕ ಹಣ ಸಂಗ್ರಹ ವಿಧಾನವನ್ನು 2000ನೇ ವರ್ಷದಲ್ಲಿ ಆರಂಭಿಸಿದ ಬ್ಯಾಂಕ್ ಪ್ರಯತ್ನಕ್ಕೆ ವಿಪುಲ ಜನ ಬೆಂಬಲ ಲಭಿಸಿದೆ.ಬ್ಯಾಂಕ್‌ನ ಆದ್ಯತಾ ವಲಯದ ಹಣವ್ಯವಹಾರವು ಸಾಲದ 40 ಶೇಕಡವನ್ನು ಹೊಂದಿದೆ. ಪ್ರಸಕ್ತ ಎರಡು ವರ್ಷಗಳ ಅವಧಿಯಲ್ಲಿ ಇದು ಇಮ್ಮಡಿಯಾಗಿದೆ.
ಗ್ರಾಹಕ ಸ್ನೇಹಿ:ಬ್ಯಾಂಕ್‌ನ ಕೊಡುಗೆಗಳಲ್ಲಿ ಗ್ರಾಹಕ ಸ್ನೇಹಿ ಯೋಜನೆಗಳಿದ್ದು, ವ್ಯಾಪಾರ, ಗೃಹನಿರ್ಮಾಣ,ಶಿಕ್ಷಣ,ವಿ-ಕ್ಯಾಶ್,ವಿ-ಎಕ್ಯುಪ್,ವಿ-ರೆಂಟ್, ವಿ-ಮಂಗಲ,ವಿ-ಕನ್ಯಾದಾನ,ವಿ-ಮಾರ್ಟ್‌ಗೇಜ್,ವಿ- ಪ್ರೊಫೆಷನಲ್,ವಿ-ಪೆನ್ಷನ್,ವಿ-ರಕ್ಷಕ್ ಮುಂತದಾ ವ್ಯಕ್ತಿಗತ ಸಾಲ ಆರ್ಥಿಕ ನೆರವು ಯೋಜನೆಗಳನ್ನು ಹೊಂದಿದೆ.
ಅನುತ್ಪಾದಕತೆ: ಅನುತ್ಪಾದಕ ಸ್ವತ್ತುಗಳ ಪ್ರಮಾಣಕಡಿತಗೊಳಿಸಿ ಬ್ಯಾಂಕ್‌ನ ಆದಾಯ ಹೆಚ್ಚಿಸಲಾಗುತ್ತಿದೆ. ಗ್ರಾಹಕರ ಹಿತ ಕಾಪಾಡುವುದೂ ಪ್ರರಮ ಗುರಿಯಾಗಿದೆ.
ಪ್ರಕಾಶ ಮಲ್ಯ ಅಧ್ಯಕ್ಷ: ವಿಜಯಾ ಬ್ಯಾಂಕ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಪ್ರಗತಿಪಥದಲ್ಲಿ ಮುನ್ನಡೆಸುತ್ತಿರುವ ಪ್ರಕಾಶ ಪಿ. ಮಲ್ಯ ಅವರು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನವರು.
1948 ರಲ್ಲಿ ಜನಿಸಿದ ಇವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರ ಹಾಗೂ ಪುಣೆ ಯುಜಿಸಿ ಅಧ್ಯಯನ ಕೇಂದ್ರದಲ್ಲಿ ಪಿಎಚ್‌ಡಿ ಡಾಕ್ಟರೇಟ್ ಪದವಿ ಗಳಿಸಿದರು. ಆ ಬಳಿಕ 1973ರಲ್ಲಿ ಕೆನರಾ ಬ್ಯಾಂಕ್‌ನಲ್ಲಿ ಪ್ರೊಬೆಷನರಿ ಆಫೀಸರ್ ಎಂಬುದಾಗಿ ನಿಯುಕ್ತರಾಗುವ ಮೂಲಕ ಈ ರಂಗ ಪ್ರವೇಶಿಸಿದರು, ಅಲ್ಲಿಂದ 32 ವರ್ಷಗಳವಧಿಯಲ್ಲಿ ಶಾಖಾ ಪ್ರಬಂದಕ, ಜಿಎಂ, ಮುಂತಾದ ಹಲವು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದರು.ಆರುವರ್ಷಗಳ ಕಾಲ ಬ್ಯಾಂಕಿಂಗ್ ಪತ್ರಿಕೆ 'ಶ್ರೇಯಸ್'ಸಂಪಾದಕರಾಗಿದ್ದರು.
ವಿವಿಧ ಹುದ್ದೆಗಳಲ್ಲಿ ನಿಪುಣತೆ ಪ್ರದರ್ಶಿಸಿದ ಮಲ್ಯರನ್ನು 2000ನೇ ವರ್ಷದಲ್ಲಿ ಡಿಜಿಎಂ ಆಗಿ ಪದೋನ್ನತಿ ನೀಡಲಾಯಿತು.2002ರಲ್ಲಿ ಜಿಎಂ ಆಗಿ ದೆಹಲಿಯಲ್ಲಿ ನಿಯುಕ್ತರಾದರು.ಈ ಅವಧಿಯಲ್ಲಿ ಕೆನರಾ ಬ್ಯಾಂಕ್ 70.20ಶೇಕಡ ಗುರಿಮೀರಿದ ಸಾಧನೆ ಪ್ರದರ್ಶಿಸಿತ್ತು.ಬಳಿಕ 2005ರಲ್ಲಿ ಸಿಂಡಿಕೇಟ್ ಬ್ಯಾಂಕ್ ಕಾರ್ಯನಿರ್ವಾಹ ನಿರ್ದೇಶಕರಾದರು.9 ತಿಂಗಳವಧಿಯ ಅಲ್ಲಿನ ಕಾರ್ಯಭಾರದಲ್ಲಿ ಮಹತ್ವದ ಸಾಧನೆಗೈದರು.
2006 ಏಪ್ರಿಲ್‌ನಲ್ಲಿ ವಿಜಯಾ ಬ್ಯಾಂಕ್‌ನ ವರಿಷ್ಠರಾಗಿ ನಿಯುಕ್ತರಾಗುವುದರೊಂದಿಗೆ ಅಮೃತ ಮಹೋತ್ಸವ ಸಂಭ್ರಮದಲ್ಲಿ ಸಕ್ರಿಯರಾದರು. ಮಲ್ಯ ಅವರ ಕಾರ್ಯಕ್ಷಮತೆ ಎಂದರೆ ಬ್ಯಾಂಕ್‌ನ್ನು ಮಂಚೂಣಿಯ ಸಾಲಿಗೆ ತಂದು ನಿಲ್ಲಿಸುವ ಸಾಮರ್ಥ್ಯವಾಗಿದೆ.2007 ಮಾರ್ಚ್‌ನಲ್ಲಿ ಬ್ಯಾಂಕ್ 62,248 ಕೋಟಿ ಗುರಿಮೀರಿದ ಸಾಧನೆಗೂ ಇವರ ಮಾರ್ಗದರ್ಶನವೇ ಕಾರಣ. ಜೂನ್ ವೇಳೆಗೆ ಹೊಸ55 ಶಾಖೆಗಳೊಂದಿಗೆ ಬ್ಯಾಂಕ್ ಗೆ 1000 ಶಾಖೆಗಳ ಗರಿಮೆ ನೀಡಿದರು.
ಪ್ರಸ್ತುತ ಇನ್ನು ಮೂರು ವರ್ಷಗಳಲ್ಲಿ ಬ್ಯಾಂಕ್ ವ್ಯವಹಾರವನ್ನು 1 ಲಕ್ಷ ಕೋಟಿಗೆ ವಿಸ್ತರಿಸುವ ಗುರಿ ಹೊಂದಿದ್ದಾರೆ. ಇವರ ಕಾರ್ಯಕ್ಷಮತೆ, ಸಾಧನೆ, ಬ್ಯಾಂಕಿಂಗ್ ವಲಯದ ಅನುಭವವನ್ನು ಗಮನಿಸಿ ಇವರಿಗೆ ಪ್ರತಿಷ್ಠಿತ 'ಆರ್ಯಭಟ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ