Select Your Language

Notifications

webdunia
webdunia
webdunia
webdunia

ಬಡ್ಡಿ ದರ ಏರಿಕೆ: ಕುಸಿದ ವಾಹನೋದ್ಯಮ

ಬಡ್ಡಿ ದರ ಏರಿಕೆ: ಕುಸಿದ ವಾಹನೋದ್ಯಮ
ನವದೆಹಲಿ , ಭಾನುವಾರ, 12 ಮೇ 2013 (12:06 IST)
PTI
ಆರ್ಥಿಕ ಹಿಂಜರಿತ, ಬಡ್ಡಿದರ ಏರಿಕೆ ಮೊದಲಾದ ಸಂಗತಿಗಳಿಂದ ಕಳೆದ 6 ತಿಂಗಳಿಂದ ಕಾರು ಮಾರಾಟ ನಿರಂತರ ಕುಸಿತ ಕಾಣುತ್ತಿದೆ. ಏಪ್ರಿಲ್‌ನಲ್ಲಿ ಮತ್ತೆ ಶೇ 10.43ರಷ್ಟು ಇಳಿಕೆ ಕಂಡಿದೆ.

ಏಪ್ರಿಲ್‌ನಲ್ಲಿ ಒಟ್ಟಾರೆ 1,50,789 ಕಾರುಗಳು ಮಾರಾಟವಾಗಿವೆ. ಆದರೆ, ಇದು 2002ರ ಮಾರ್ಚ್, ಜುಲೈ ನಂತರ ದಾಖಲಾಗಿರುವ ಒಂದು ತಿಂಗಳಲ್ಲಿನ ಕನಿಷ್ಠ ಮಾರಾಟ ಪ್ರಮಾಣವಾಗಿದೆ ಎಂದು ಭಾರತೀಯ ವಾಹನ ತಯಾರಿಕಾ ಉದ್ಯಮಗಳ ಒಕ್ಕೂಟ (ಎಸ್‌ಐಎಎಂ) ಹೇಳಿದೆ.

`ಕಳೆದ ಆರು ತಿಂಗಳಿಂದ ಮಾರುಕಟ್ಟೆ ಯಾವುದೇ ರೀತಿಯಲ್ಲಿ ಚೇತರಿಕೆ ಕಂಡಿಲ್ಲ. ನವೆಂಬರ್‌ನಿಂದ ಕಾರು ಮಾರಾಟ ಕುಸಿಯುತ್ತಿದೆ. ಬಜೆಟ್‌ನಲ್ಲಿ ಕೂಡ ಉದ್ಯಮಕ್ಕೆ ಯಾವುದೇ ಉತ್ತೇಜನ ಲಭಿಸಿಲ್ಲ' ಎಂದು `ಎಸ್‌ಐಎಎಂ' ಸಹಾಯಕ ನಿರ್ದೇಶಕ ಸುಗತೊ ಸೆನ್ ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

`ಪೆಟ್ರೋಲ್ ಬೆಲೆಯಲ್ಲಿ ರೂ 3 ಕಡಿತವಾಗಿರುವುದು ಸಕಾರಾತ್ಮಕ ಬೆಳವಣಿಗೆ. ಇದರಿಂದ ಮುಂಬರುವ ತಿಂಗಳಲ್ಲಿ ಸಣ್ಣ ಕಾರುಗಳಿಗೆ ಬೇಡಿಕೆ ಸ್ವಲ್ಪ ಹೆಚ್ಚಬಹುದು. ಹೊಸ ಕಾರುಗಳಾದ ಹೋಂಡಾ `ಅಮೇಜ್', ಜನರಲ್ ಮೋಟಾರ್ಸ್‌ನ `ಎಂಜಾಯ್' ಮಾರುಕಟ್ಟೆಗೆ ಉತ್ತೇಜನ ನೀಡಬಹುದು. ಆದರೆ, ಬಡ್ಡಿ ದರ ಏರಿಕೆಯು ಗ್ರಾಹಕರ ಒಟ್ಟಾರೆ ಆತ್ಮವಿಶ್ವಾಸವನ್ನೇ ತಗ್ಗಿಸಿದೆ' ಎಂದು ಸೆನ್ ಅಭಿಪ್ರಾಯಪಟ್ಟಿದ್ದಾರೆ.

ಏಪ್ರಿಲ್‌ನಲ್ಲಿ ಮಾರುತಿ ಸುಜುಕಿ 76,509 ಕಾರು ಮಾರಾಟ ಮಾಡಿ ಶೇ 4.89ರಷ್ಟು ಪ್ರಗತಿ ದಾಖಲಿಸಿದೆ. ಹುಂಡೈ ಮೋಟಾರ್ ಇಂಡಿಯಾ 32,364 ಕಾರು ಮಾರಾಟ ಮಾಡಿ ಶೇ 7.53ರಷ್ಟು ಕುಸಿತ ಕಂಡಿದೆ. ಟಾಟಾ ಮೋಟಾರ್ಸ್‌ನ ಮಾರಾಟ ಶೇ 52.07ರಷ್ಟು ಕುಸಿದಿದೆ. ಟಾಟಾ ಮೋಟಾರ್ಸ್‌ನ 8,918 ಕಾರು ಮಾರಾಟವಾಗಿವೆ.

ದ್ವಿಚಕ್ರ ವಾಹನಗಳ ಒಟ್ಟಾರೆ ಮಾರಾಟ ಏಪ್ರಿಲ್‌ನಲ್ಲಿ ಶೇ 2.06ರಷ್ಟು ಕುಸಿದಿದೆ. 8,43,889 ವಾಹನಗಳು ಮಾರಾಟವಾಗಿವೆ. ಹೀರೋ ಮೋಟೊ ಕಾರ್ಪ್ ಶೇ 12.5ರಷ್ಟು ಕುಸಿತ ದಾಖಲಿಸಿದೆ. ಬಜಾಜ್ ಆಟೋ 1,99,838 ವಾಹನ ಮಾರಾಟ ಮಾಡಿದ್ದು ಅಲ್ಪ ಕುಸಿತ ಕಂಡಿದೆ. ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ 1,15,536 ವಾಹನ ಮಾರಾಟ ಮಾಡಿ ಶೇ 48.76ರಷ್ಟು ಪ್ರಗತಿ ದಾಖಲಿಸಿದೆ. `ಟಿವಿಎಸ್' ಮೋಟಾರ್ ಮಾರಾಟ ಶೇ 12.45ರಷ್ಟು ಕುಸಿದಿದೆ. ಒಟ್ಟಾರೆ 2,61,475 ಸ್ಕೂಟರ್‌ಗಳು ಮಾರಾಟವಾಗಿದ್ದು, ಶೇ 14.72ರಷ್ಟು ಪ್ರಗತಿ ಕಂಡಿದೆ.

Share this Story:

Follow Webdunia kannada