Select Your Language

Notifications

webdunia
webdunia
webdunia
webdunia

ರೈಲ್ವೆ ಬಜೆಟ್: ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಿಲ್ಲ

ರೈಲ್ವೆ ಬಜೆಟ್: ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯಿಲ್ಲ
ನವದೆಹಲಿ , ಗುರುವಾರ, 26 ಫೆಬ್ರವರಿ 2015 (09:50 IST)
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 2015-16ನೇ ಸಾಲಿನ ರೈಲ್ವೆ ಬಜೆಟ್ ಎಲ್ಲರ ಚಿತ್ತ ಸೆಳೆಯುತ್ತಿದ್ದು, ಕೇಂದ್ರ ರೈಲ್ವೇ ಖಾತೆ ಸಚಿವ ಸುರೇಶ್ ಪ್ರಭು ಅವರು ಇಂದು ಮಧ್ಯಾಹ್ನ 12 ಗಂಟೆಗೆ ಲೋಕಸಭೆಯಲ್ಲಿ ನಡೆಯುವ ಅಧಿವೇಶನದಲ್ಲಿ ತಮ್ಮ ಚೊಚ್ಚಲ ಬಜೆಟ್ಟನ್ನು ಮಂಡಿಸಲಿದ್ದಾರೆ.  
 
ಮೋದಿ ನೇತೃತ್ವದ ಎನ್ಡಿಎ ಸರ್ಕಾರದ 9 ತಿಂಗಳ ಅವಧಿಯಲ್ಲಿ ಪ್ರಭು ರೈಲ್ವೆ ಇಲಾಖೆಯ ಎರಡನೇ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಇಂದು ಬಜೆಟ್ ಮಂಡಿಸುತ್ತಿದ್ದಾರೆ. 
 
ಬಜೆಟ್ ಬಗ್ಗೆ ಈ ಹಿಂದೆ ಪ್ರತಿಕ್ರಿಯಿಸಿದ್ದ ಸಚಿವರು, ನಮ್ಮ ಬಜೆಟ್‌‌ನಲ್ಲಿ ಪ್ರಯಾಣ ದರದಲ್ಲಿನ ಏರಿಕೆ ಇಳಿಕೆಯಂತಹ ಯಾವುದೇ ಬದಲಾವಣೆಗಳನ್ನು ತರುವುದಿಲ್ಲ. ಹಿಂದಿನ ನೀತಿಯನ್ನೇ ಯಥಾಸ್ಥಿತಿಯಂತೆ ಮುಂದುವರಿಸಲಾಗುವುದು ಎಂದು ಸುಳಿವು ನೀಡಿದ್ದರು. 
 
ಇನ್ನು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ರೈಲ್ವೆ ಇಲಾಖೆಯನ್ನು ಖಾಸಗಿ ಸಹಭಾಗಿತ್ವಕ್ಕೆ ಒಪ್ಪಿಸಲು ಮೋದಿ ಸರ್ಕಾರ ಮುಂದಾಗಿದ್ದು, ರೈಲುಗಳಿಗೆ ಖಾಸಗಿ ಉತ್ಪನ್ನದ ಬ್ರಾಂಡ್‌ನ ಹೆಸರಿಡುವುದು, ಖಾಸಗಿ ಒಡೆತನದಲ್ಲಿಯೇ ಮುನ್ನಡೆಸುವುದು ಸೇರಿದಂತೆ ಇನ್ನಿತರೆ ಬದಲಾವಣೆಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.   
 
ಇಲಾಖೆಯ ಅಡಿಯಲ್ಲಿ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ 300 ಯೋಜನೆಗಳು ಬಾಕಿ ಇದ್ದು, ಅವುಗಳನ್ನು ಅನುಷ್ಠಾನಗೊಳಿಸಲು 1,80,000 ಕೋಟಿ ಅಗತ್ಯವಿದೆ ಎನ್ನಲಾಗಿದೆ. 
 
ಈ ಹಿಂದೆ ರೈಲ್ವೆ ಸಚಿವರಾಗಿದ್ದ ಸದಾನಂದಗೌಡರು ತಮ್ಮ ಚೊಚ್ಚಲ ಬಜೆಟ್ಟನ್ನು ಮಂಡಿಸಿ ಕರ್ನಾಟಕಕ್ಕೆ 8 ರೈಲುಗಳ ಬಂಪರ್ ಕೊಡುಗೆಯನ್ನು ನೀಡಿದ್ದರು. ವಿಪರ್ಯಾಸ ಎಂದರೆ ಆ ರೈಲುಗಳು ಇನ್ನೂ ಹಳಿಯ ಮೇಲೆ ಬಂದಿಲ್ಲ. 
 
ಇಂದು ಬಜೆಟ್ ಮಂಡನೆಗೆ ಸಿದ್ಧರಾಗಿರುವ ಸಚಿವ ಪ್ರಭು ಅವರ ಕಡೆ ಎಲ್ಲರ ಚಿತ್ತ ನೆಟ್ಟಿದ್ದು, ಕರ್ನಾಟಕ ಜನತೆಯೂ ಕೂಡ ಸಚಿವರು ನಮ್ಮ ರಾಜ್ಯಕ್ಕೆ ಯಾವ ರೀತಿಯ ಕೊಡುಗೆ ನೀಡಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಬಜೆಟ್ನಲ್ಲಿ ತತ್ಕಾಲ್ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ. 
 
ಮೋದಿ ಸರ್ಕಾರವು ಈ ಹಿಂದೆ ಮಂಡಿಸಿದ್ದ ಬಜೆಟ್‌ನಲ್ಲಿ ಪ್ರಯಾಣ ದರದಲ್ಲಿ ಶೇ. 14.2 ಹಾಗೂ ಸರಕು ಸಾಗಾಟ ದರ ದರದಲ್ಲಿ 6.8ರಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿತ್ತು. 

Share this Story:

Follow Webdunia kannada