Select Your Language

Notifications

webdunia
webdunia
webdunia
webdunia

ದೇಸೀ ಗೂಗಲ್ ಅರ್ಥ್ 'ಭುವನ್' ಹೇಗಿದೆ? ಒಂದು ಸ್ಥೂಲ ನೋಟ

ದೇಸೀ ಗೂಗಲ್ ಅರ್ಥ್ 'ಭುವನ್' ಹೇಗಿದೆ? ಒಂದು ಸ್ಥೂಲ ನೋಟ
ನವದೆಹಲಿ , ಶನಿವಾರ, 22 ಆಗಸ್ಟ್ 2009 (19:27 IST)
ಜನಪ್ರಿಯ 'ಗೂಗಲ್ ಅರ್ಥ್'ಗೆ ಪೈಪೋಟಿ ನೀಡುವ ರೀತಿಯಲ್ಲಿ 'ಇಸ್ರೋ' ಸಹಯೋಗದೊಂದಿಗೆ 'ಭುವನ್' ಬಿಡುಗಡೆ ಮಾಡುವ ಮೂಲಕ ಭಾರತವು ಆಧುನಿಕ ಜಗತ್ತಿಗೆ ತಾನೇನೆಂಬುದನ್ನು ತೋರಿಸಿಕೊಟ್ಟಿದೆಯಾದರೂ, ಬಳಕೆದಾರರು ಸಮಾಧಾನಗೊಂಡಿಲ್ಲ. ಕಾರಣ ಕ್ಷಣಕ್ಷಣಕ್ಕೆ ಎದುರಾಗುವ ಹಲವಾರು ತಾಂತ್ರಿಕ ಸಮಸ್ಯೆಗಳು.

ವೈಮಾನಿಕ ನೋಟಕ್ಕಿಂತಲೂ ತೀರಾ ಹತ್ತಿರವಾಗಿ ಭೂಮಿಯನ್ನು ತೋರಿಸುವ ಸಾಮರ್ಥ್ಯ 'ಭುವನ್' ಹೆಗ್ಗಳಿಕೆ. ಗೂಗಲ್ ಅರ್ಥ್ ನಾಶಕ್ಕೆ ಇದು ನಾಂದಿ ಎಂದೂ ಕೆಲವು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದರಲ್ಲಿರುವ ಕೆಲವು ಸಮಸ್ಯೆಗಳನ್ನು ಪರಿಹರಿಸಬೇಕೆನ್ನುವುದು ಒಕ್ಕೊರಲಿನ ಅಭಿಪ್ರಾಯ.
PR


ಬೌಸರ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ..
ಗೂಗಲ್ ಅರ್ಥ್‌ನ್ನು ಡೌನ್‌ಲೋಡ್ ಮಾಡಿಕೊಂಡು ಆಫ್‌ಲೈನ್‌ನಲ್ಲೂ ವೀಕ್ಷಿಸಬಹುದಾಗಿದೆ. ಆದರೆ ಭುವನ್ ಬ್ರೌಸರ್‌ನಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದರ ತಾಂತ್ರಿಕತೆಗಳು ಕೇವಲ ವಿಂಡೋಸ್‌ನ್ನು ಮಾತ್ರ ಬೆಂಬಲಿಸುತ್ತವೆ. ಇಂಟರ್ನೆಟ್ ಎಕ್ಸ್‌ಪ್ಲೋರರ್ 6 ಅಥವಾ ಅದಕ್ಕಿಂತ ಮುಂದುವರಿದ ಆವೃತ್ತಿಗಳಲ್ಲಿ ಮಾತ್ರ ವೀಕ್ಷಿಸಬಹುದಾಗಿದೆ.

ಗೂಗಲ್ ಅರ್ಥ್ ಡೆಸ್ಕ್‌ಟಾಪ್ ಅಪ್ಲಿಕೇಷನ್ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರೆ, ಭುವನ್ ಬ್ರೌಸರ್ ಪ್ಲಗ್-ಇನ್ ಬಳಸಿಕೊಳ್ಳುತ್ತದೆ. ಬಳಕೆದಾರ ತನ್ನ ಖಾತೆಯನ್ನು ತೆರೆದು ಪ್ಲಗ್-ಇನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದರ ಪ್ಲಗ್-ಇನ್ 11 ಎಂ.ಬಿ.ಯಾಗಿರುವ ಕಾರಣ ಸಮಯ ವ್ಯರ್ಥವಾಗುತ್ತಿದೆ ಎಂಬ ಭಾವನೆ ಸಾಮಾನ್ಯ.

ಖಾತೆ ತೆರೆಯಲೇಬೇಕು..
ಸೈಟ್ ತುಂಬಾ ನಿಧಾನವಾಗಿ ಕಾರ್ಯನಿರ್ವಹಿಸುತ್ತಿರುವುದು ಮತ್ತೊಂದು ಹಿನ್ನಡೆ. ಅಲ್ಲದೆ ನೀವು ಭುವನ್ ಖಾತೆ ತೆರೆಯಬೇಕಾದರೆ ವಿಳಾಸ, ಉಪಯೋಗ ಮುಂತಾದ ಹಲವು ವಿವರಗಳನ್ನು ಕೇಳುತ್ತದೆ. ಇಷ್ಟೆಲ್ಲ ಮಾಹಿತಿ ನೀಡಿ ಭುವನ್‌ನಲ್ಲಿ ನೋಡಲೇಬೇಕಾದ ಅಂಶಗಳೇನಿವೆ ಎಂದಾಗ ನಿರಾಸೆ ಮೂಡದಿರದು. ಯಾಕೆಂದರೆ ಗೂಗಲ್ ಅರ್ಥ್ ಯಾವುದೇ ವೈಯಕ್ತಿಕ ಮಾಹಿತಿ ಬಯಸದೆ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ.

ಎದುರಾಗುವ ಸಮಸ್ಯೆಗಳು..
ಆಗಸ್ಟ್ 12ಕ್ಕೆ ಬಿಡುಗಡೆಯಾದಾಗ ಮತ್ತು ಈಗಲೂ ಭುವನ್ ಸೈಟ್ ವೀಕ್ಷಣೆ ದುರ್ಗಮವೆನಿಸುತ್ತಿದೆ. ಆಗಾಗ ಬ್ರೌಸರ್ ಕ್ಲೋಸ್ ಆಗುವುದು, ಸಂಪರ್ಕ ತಪ್ಪಿ ಹೋಗುವುದು ಮುಂತಾದ ಸಮಸ್ಯೆಗಳು ಆಗಾಗ ತೊಂದರೆ ಕೊಡುತ್ತದೆ. ನಾವು ರಾಜ್ಯ, ಜಿಲ್ಲೆ ಅಥವಾ ತಾಲೂಕುಗಳನ್ನು ನೋಡಲು ಬಯಸಿದಾಗ ವಿಫಲತೆಯ ಅನುಭವವಾಗುವುದೇ ಹೆಚ್ಚು. ಬೇಕೆಂದಾದ ಶೋಧ ಬಾರ್ ಕೂಡ ಸತತವಾಗಿ ಕಾಣ ಸಿಗುವುದಿಲ್ಲ.

ಗುರುತು ಹಾಕಲಾಗದು..
ಬಳಕೆದಾರರು ತಮ್ಮ ಮನೆ, ಶಾಲೆ, ಗ್ರಾಮ ಅಥವಾ ನಗರಗಳನ್ನು ಗುರುತು ಹಾಕಲು ಸಾಧ್ಯವಿಲ್ಲ. ಗೂಗಲ್ ಅರ್ಥ್‌ನಲ್ಲಿ ನಮ್ಮ ಪ್ರದೇಶ ಅಥವಾ ಕಟ್ಟಡಗಳನ್ನು ಹೆಸರಿಸುವ ಅವಕಾಶವಿದೆ.

ತೀರಾ ಕಳಪೆ ಚಿತ್ರಗಳು..
ಇತರ ಸಮಸ್ಯೆಗಳೆದುರು ಇದು ಸ್ವಲ್ಪ ಹೆಚ್ಚು ನಿರಾಸೆ ತರುವಂತಹುದು. ಭುವನ್‌ನಲ್ಲಿ ಶ್ರೇಷ್ಠ ಮಟ್ಟದ ಚಿತ್ರಗಳನ್ನು ನೀಡಲಾಗುತ್ತದೆ ಎಂದು ನೀಡಲಾಗಿದ್ದ ಭರವಸೆಯನ್ನು ಈಡೇರಿಸಲಾಗಿಲ್ಲ. ಗೂಗಲ್ ಅರ್ಥ್ ಭೂಮಿಗಿಂತ 200 ಮೀಟರ್ ಮೇಲಿನ ಚಿತ್ರ ನೀಡುತ್ತಿದ್ದರೆ, ನಾವು 10 ಮೀಟರ್‌ ಅಂತರದವರೆಗಿನ ಚಿತ್ರ ನೀಡುತ್ತೇವೆ ಎಂಬ ಮಾತನ್ನು ಕೂಡ ಉಳಿಸಿಕೊಳ್ಳಲಾಗಿಲ್ಲ.

ಮೂಲಭೂತ ಮಾಹಿತಿಗಳ
ಭುವನ್‌ನಲ್ಲಿ ಹವಾಮಾನ, ಜಲಮಟ್ಟ, ಜನಸಂಖ್ಯೆ ಮುಂತಾದ ವಿವಿಧ ಆಡಳಿತಾತ್ಮಕ ಮಾಹಿತಿಯನ್ನು ಸೇರಿಸಲಾಗಿದೆ. ಆದರೆ ಬಳಕೆದಾರರಿಗೆ ಹವಾಮಾನ ವರದಿಯನ್ನು ಪಡೆಯಲಾಗುತ್ತಿಲ್ಲ. ಆಡಳಿತದ ಘಟಕಗಳ ಕುರಿತ ಪಟ್ಟಿ ಮೇಲೆ ಕ್ಲಿಕ್ ಮಾಡಿದಾಗ ಜನಸಂಖ್ಯೆ ಕುರಿತ ಮಾಹಿತಿಯನ್ನು ಪಡೆಯಬಹುದಾಗಿದೆ. ಹಾಗಾಗಿ ವಿಶೇಷ ಬಳಕೆದಾರರಿಗೆ ಕೆಲವು ಆಕರ್ಷಣೆಗಳಿವೆ.

ಭುವನ್‌ನಲ್ಲಿ ಅತಿವೃಷ್ಟಿ-ಅನಾವೃಷ್ಟಿ ಕುರಿತ ಸಮಗ್ರ ಮಾಹಿತಿಯನ್ನು ಮ್ಯಾಪ್ ರೀತಿಯಲ್ಲಿ ನೀಡಲಾಗಿದೆ. ಬಿಹಾರದಲ್ಲಿ ಉಂಟಾಗಿದ್ದ ಕೋಸಿ ನದಿ ಪ್ರವಾಹ ಮತ್ತು ನಂತರದ ಸ್ಥಿತಿಯನ್ನು ಫ್ಲಡ್ ಮ್ಯಾಪ್ ತೋರಿಸುತ್ತದೆ.

ಇಂತಹ ಅತ್ಯುತ್ತಮ ಮಾಹಿತಿಗಳಿಗೆ ಆಗರವಾಗುವ ಮೂಲಕ ಭುವನ್ ಉಪಯೋಗಕಾರಿ ಎನಿಸಿದರೂ ಮಹತ್ವದ ಸುಧಾರಣೆಗಳಾಗಬೇಕಾಗಿದೆ. ಇಲ್ಲಿ ಹೆಸರಿಸಿರುವ ಸಮಸ್ಯೆಗಳೂ ಸೇರಿದಂತೆ ಇತರ ಕೆಲವು ಸೌಲಭ್ಯಗಳನ್ನು ಹೊಂದಿದಲ್ಲಿ ಖಂಡಿತಾ ಗೂಗಲ್ ಅರ್ಥ್‌ನ್ನು ಮೀರಿಸುವ ಸಾಮರ್ಥ್ಯವನ್ನು ಭುವನ್ ಪಡೆದುಕೊಳ್ಳಬಹುದು.

Share this Story:

Follow Webdunia kannada