Select Your Language

Notifications

webdunia
webdunia
webdunia
webdunia

ಇನ್ನು ಮಂಗಳಮುಖಿಯರೂ ಎಲ್ಐಸಿ ಏಜೆಂಟರಾಗಲಿದ್ದಾರೆ

ಇನ್ನು ಮಂಗಳಮುಖಿಯರೂ ಎಲ್ಐಸಿ ಏಜೆಂಟರಾಗಲಿದ್ದಾರೆ
ಚೆನ್ನೈ , ಭಾನುವಾರ, 17 ಅಕ್ಟೋಬರ್ 2010 (15:48 IST)
ಲೈಂಗಿಕ ಅಲ್ಪಸಂಖ್ಯಾತರಾಗಿರುವ ಮಂಗಳಮುಖಿಯರಿಗೆ ಸಮಾಜದ ವಿವಿಧ ವರ್ಗಗಳು ಸಹಾಯ ಹಸ್ತ ಚಾಚಲು ಮುಂದಾಗುತ್ತಿವೆ. ಆ ಸಾಲಿಗೆ ಎಲ್ಐಸಿ ಜೀವ ವಿಮಾ ಕಂಪನಿಯೂ ಸೇರ್ಪಡೆಯಾಗಲಿದೆ.

ಹೌದು, ಎಲ್ಐಸಿಯು ತನ್ನ ಏಜೆಂಟರನ್ನಾಗಿ ಹಿಜಡಾಗಳನ್ನು ಕೂಡ ನೇಮಕಗೊಳಿಸಲಿದೆ. ಆದರೆ ಇದು ಪ್ರಸಕ್ತ ಪ್ರಸ್ತಾವನೆಯಲ್ಲಿರುವುದು ಚೆನ್ನೈಯಲ್ಲಿ ಮಾತ್ರ ಎಂದು ಪತ್ರಿಕಾ ವರದಿಯೊಂದು ಹೇಳಿದೆ.

ವರದಿಗಳ ಪ್ರಕಾರ ಮಂಗಳಮುಖಿಯರನ್ನು ಏಜೆಂಟರನ್ನಾಗಿ ನೇಮಕ ಮಾಡುವ ಮೊದಲು ಪರೀಕ್ಷೆಯೊಂದನ್ನು ಸಂಘಟಿಸಲಾಗುತ್ತದೆ. ಅದರಲ್ಲಿ ಮೊದಲ ಹಂತದಲ್ಲಿ 30 ಮಂಗಳಮುಖಿಯರನ್ನು ಎಲ್ಐಸಿ ಏಜೆಂಟರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಏಜೆಂಟರಾಗ ಬಯಸುವ ನಗರ ಪ್ರದೇಶಗಳ ಮಂಗಳಮುಖಿಯರ ವಿದ್ಯಾಭ್ಯಾಸ ಪಿಯುಸಿ, ಹಳ್ಳಿಗರಾದರೆ ಎಸ್ಎಸ್ಎಲ್‌ಸಿ ಮಾಡಿದರೆ ಸಾಕಾಗುತ್ತದೆ.

ತಮಿಳುನಾಡಿನ ಇತರ ಜಿಲ್ಲೆಗಳಲ್ಲೂ ಎಲ್ಐಸಿ ಏಜೆಂಟರನ್ನಾಗಿ ಮಂಗಳಮುಖಿಯರನ್ನು ನೇಮಕಗೊಳಿಸುವ ಪ್ರಕ್ರಿಯೆಯನ್ನು ಶೀಘ್ರದಲ್ಲೇ ವಿಸ್ತರಿಸಲಾಗುತ್ತದೆ.

ಲೈಂಗಿಕ ಅಲ್ಪಸಂಖ್ಯಾತರೆಂದು ಸಮಾಜದಲ್ಲಿ ಶೋಷಣೆಗೊಳಗಾಗುತ್ತಿರುವ ವರ್ಗಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಈ ಕ್ರಮಕ್ಕೆ ಎಲ್ಐಸಿ ಮುಂದಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ನಿರ್ದೇಶಕ ಆರ್. ವಾಸುಕಿ ತಿಳಿಸಿದ್ದಾರೆ.

ಇದರ ಜತೆಗೆ ಇಲ್ಲಿ ಪರಿಗಣಿಸಿರುವ ಮತ್ತೊಂದು ವ್ಯಾಪಾರಿ ಅಂಶವೆಂದರೆ ಮಂಗಳಮುಖಿಯರಿಗೆ ಪೊಲೀಸರು, ಅಂಗಡಿ ಮಾಲಕರು ಮತ್ತು ಇತರ ನೌಕರರ ಪರಿಚಯ ಹೆಚ್ಚಿರುವುದು. ಆ ಮೂಲಕ ಪಾಲಿಸಿಗಳನ್ನು ಹೆಚ್ಚು ಮಾಡಿಕೊಳ್ಳಬಹುದು ಎನ್ನುವುದು ಎಲ್ಐಸಿ ಚಿಂತನೆ.

Share this Story:

Follow Webdunia kannada