Select Your Language

Notifications

webdunia
webdunia
webdunia
webdunia

ಅರ್ಥವ್ಯವಸ್ಥೆಯ ಕೆಟ್ಟ ಕಾಲ ಮುಗಿದಿದೆ: ಮಾಂಟೆಕ್ ಸಿಂಗ್

ಅರ್ಥವ್ಯವಸ್ಥೆಯ ಕೆಟ್ಟ ಕಾಲ ಮುಗಿದಿದೆ: ಮಾಂಟೆಕ್ ಸಿಂಗ್
ನವದೆಹಲಿ , ಸೋಮವಾರ, 31 ಆಗಸ್ಟ್ 2009 (16:28 IST)
ಭಾರತದ ಅರ್ಥವ್ಯವಸ್ಥೆಯು ಮುಂಬರುವ ಅವಧಿಗಳಲ್ಲಿ ಇನ್ನಷ್ಟು ಸುಧಾರಣೆ ಕಾಣುವ ನಿರೀಕ್ಷೆಗಳಿವೆ ಎಂದಿರುವ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಕೆಟ್ಟ ಕಾಲ ಮುಗಿದು ಹೋಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಸೋಮವಾರ ಸರಕಾರವು ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯಲ್ಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ದೇಶವು ಶೇ.6.1ರ ಪ್ರಗತಿ ದರ ದಾಖಲಿಸಿದ ವರದಿಯನ್ನು ಬಿಡುಗಡೆ ಮಾಡಿತ್ತು.

ಭಾರತದ ಆರ್ಥಿಕ ಪರಿಸ್ಥಿತಿಯು ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಮುಂಬರುವ ತಿಂಗಳುಗಳಲ್ಲಿ ಇನ್ನಷ್ಟು ಸುಧಾರಣೆ ಕಾಣಲಿದೆ. 2010ರ ಮಾರ್ಚ್ 31ಕ್ಕೆ ಕೊನೆಗೊಳ್ಳುವ ಈ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪಾದನೆ ದರವು ಶೇ.6.5ನ್ನೂ ಮೀರುವ ಸಾಧ್ಯತೆಗಳಿವೆ ಎಂದು ಮಾಂಟೆಕ್ ತಿಳಿಸಿದ್ದಾರೆ.

ಸರಕಾರವು ಈ ವರ್ಷ ತನ್ನ ಸಾಲ ನೀತಿಗಳನ್ನು ಬದಲಾಯಿಸುವ ಅಗತ್ಯವಿಲ್ಲ ಎಂದಿರುವ ಹಣಕಾಸು ಕಾರ್ಯದರ್ಶಿ ಮಾಂಟೆಕ್, ಲಿಕ್ವಿಡಿಟಿಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಬದಲಾವಣೆಗಳ ಸಾಧ್ಯತೆಗಳಿರುತ್ತದೆ ಎಂದರು.

ಆದರೂ 11ನೇ ಪಂಚವಾರ್ಷಿಕ ಯೋಜನೆ (2007-12)ಯಲ್ಲಿ ಸಾಧಿಸಲುದ್ದೇಶಿಸಿರುವ ಶೇ.9ರ ಅಭಿವೃದ್ಧಿ ದರಕ್ಕೆ ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಬರಗಾಲವು ನಿಯಂತ್ರಣ ಹೇರಬಹುದು ಎಂಬ ಭೀತಿಯನ್ನೂ ಮಾಂಟೆಕ್ ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದ್ದಾರೆ.

2007-08ರ ಸಾಲಿನಲ್ಲಿ ಶೇ.9ರ ಪ್ರಗತಿ ದರ ಹೊಂದಿದ್ದ ಭಾರತವು ಕಳೆದ ವರ್ಷ ಶೇ.6.7ಕ್ಕೆ ಕುಸಿತ ಕಂಡಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.6.5ರ ಪ್ರಗತಿಯನ್ನು ದಾಖಲಿಸುವ ಉದ್ದೇಶವನ್ನು ಹೊಂದಲಾಗಿದೆ.

Share this Story:

Follow Webdunia kannada