Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್ "ಪಿಚ್ಚರ್"

ವೆಬ್‌ದುನಿಯಾ ವಾರದ ಬ್ಲಾಗ್
ಅಭಿಮನ್ಯು
ಈ ಬಾರಿ ವೆಬ್ ಲೋಕದಲ್ಲಿ ವಿಹರಿಸುತ್ತಿದ್ದಾಗ ಎತ್ತಿಕೊಳ್ಳಲೇಬೇಕೆಂದು ಅನ್ನಿಸಿದ್ದು "ಪಿಚ್ಚರ್" ಹೆಸರಿನ ಬ್ಲಾಗು. ಹೆಸರೇ ಹೇಳುವಂತೆ ಇದರಲ್ಲಿನ ವಿಷಯಗಳು ಬಹುತೇಕ ಚಿತ್ರರಂಗಕ್ಕೆ ಮೀಸಲು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಪಿಚ್ಚರ್ ಬ್ಲಾಗಿನ ಒಡೆಯ ಕೂಡ ಸಿನಿಮಾ ಪತ್ರಕರ್ತ.

ಚಿತ್ರರಂಗದ ಆಗು ಹೋಗುಗಳು, ಗಾಂಧಿನಗರದ ಒಳಗಿನ ತುಡಿತಗಳು ಇಲ್ಲಿ ನವಿರಾಗಿ ಅಕ್ಷರ ರೂಪ ಪಡೆದು, ಥಳುಕು ಬಳುಕಿನ ಲೋಕವನ್ನು ಬಿಚ್ಚಿಡುತ್ತವೆ.

ಈ ಬ್ಲಾಗಿನಲ್ಲಿ (pichchar.wordpress.com) ಇತ್ತೀಚೆಗೆ ಬಿಡುಗಡೆಯಾದ "ಆ ದಿನಗಳು" ಚಿತ್ರದ ವಿಮರ್ಶೆಯಲ್ಲಿ ಲೇಖಕರು ಚಿತ್ರದ ಕಥೆಗೆ ಮೂಲ ಹೇತುವಾಗಿರುವ ಶ್ರೀಧರ್ ಅವರ "ದಾದಾಗಿರಿಯ ದಿನಗಳು" ಓದಿ ಅರಗಿಸಿಕೊಂಡು, ಕಥೆಯೊಂದು ಚಿತ್ರ ರೂಪ ಪಡೆಯುವಾಗ ಆಗುವ ಗೊಂದಲಗಳನ್ನು ಎತ್ತಿ ತೋರಿಸಿದ್ದಾರೆ.

ಉದಯವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವ ಇವರು ಪರಮೇಶ್ವರ ಗುಂಡ್ಕಲ್. ಇದರಲ್ಲಿ ಮತ್ತೊಬ್ಬ ಪತ್ರಕರ್ತ ವಿಕಾಸ ನೇಗಿಲೋಣಿಯವರ ಬರಹಗಳೂ ಆಗಾಗ ಇಣುಕುತ್ತಿರುತ್ತವೆ.

ಚಲನಚಿತ್ರದ ಕುರಿತ ಒಟ್ಟಭಿಪ್ರಾಯವನ್ನು ಅವರು ಹೀಗೆ ದಾಖಲಿಸಿದ್ದಾರೆ : "ಇಲ್ಲಿ ಮಚ್ಚು ಇದೆ. ಕೊಚ್ಚುವವರಿಲ್ಲ. ಪ್ರೀತಿ ಇದೆ. ಹುಸಿ ರಮ್ಯತೆ ಹೆಚ್ಚೇನಿಲ್ಲ. ಸಿಟ್ಟು, ಸಣ್ಣತನ, ದ್ವೇಷಗಳೆಲ್ಲ ಇವೆ. ಹೊಡೆದಾಟಗಳಿಲ್ಲ. ಅಮ್ಮ, ತಂಗಿ ಇದ್ದಾರೆ. ಸೆಂಟಿಮೆಂಟಿಗೆ ಜಾಗವಿಲ್ಲ. ಕೊಲೆ ಕೊನೆಗೂ ನಡೆದೇ ಹೋಗುತ್ತದೆ. ಆದರೆ ವೈಭವೀಕರಣ ಇಲ್ಲ! ಭೂಗತ ಜಗತ್ತಿನ ಮೋಸ, ರಾಜಕೀಯ, ಚಿಲ್ಲರೆತನ, ಕ್ರೌರ್ಯ ಎಲ್ಲವೂ ಸರಕಾರಿ ಒಕ್ಕಣೆಯಂತೆ ನಿರ್ಭಾವುಕವಾಗಿ ನಡೆಯುತ್ತವೆ". ಅಂದರೆ ಕ್ರೌರ್ಯ, ಮಚ್ಚು, ಲಾಂಗುಗಳ ವೈಭವೀಕರಣವಿಲ್ಲ, ಚಿತ್ರವು ಭೂಗತ ಲೋಕದ ಮೇಲೆ ಬೆಳಕು ಚೆಲ್ಲುತ್ತದಾದರೂ, ಕ್ಲೀಷೆಗಳಿಲ್ಲ, ಜನಮರುಳಿನ ಕೊಚ್ಚಿ ಕೊಲ್ಲುವ ದೃಶ್ಯಗಳಿಲ್ಲ ಎಂಬುದು ಮನದಟ್ಟಾಗುತ್ತದೆ.

ಹೆಸರು ಪಿಚ್ಚರ್ ಎಂದಿದೆಯಾದರೂ ಬರೇ ಚಲನ ಚಿತ್ರಗಳ ಸ್ಟಫ್‌ಗಷ್ಟೇ ಈ ಬ್ಲಾಗು ಸೀಮಿತವಾಗಿಲ್ಲ. ಇಲ್ಲಿ ಕಥೆ, ಕವನ ಮತ್ತಿತರ ಸಾಹಿತ್ಯ ಪ್ರಕಾರಗಳ ವಿಮರ್ಶೆಯೂ ಗಮನ ಸೆಳೆಯುತ್ತವೆ. ಪೋಲೆಂಡ್ ಭಾಷೆಯ ನೊಬಲ್‌ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆಯೊಂದು "ಅಂತ್ಯ ಸಂಸ್ಕಾರ"ದ ಹೆಸರಿನಲ್ಲಿ ಕನ್ನಡೀಕರಣಗೊಂಡಿರುವುದನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

ಮತ್ತೊಂದು ಲೇಖನ ವಿಕಾಸ ನೇಗಿಲೋಣಿಯವರದು. ಉಡುಪಿ ಶ್ರೀ ಕೃಷ್ಣ ಮಠದಲ್ಲಿನ ದಿನಗಳನ್ನು ನೆನಪಿಸಿಕೊಳ್ಳುವ ಅವರ "ನನ್ನ ಕೃಷ್ಣನ ಕಂಡೀರೇ" ಎಂಬ ಕೃಷ್ಣಾಷ್ಟಮಿ ಪರ್ವಕ್ಕೆ ಪೂರಕವಾದ ಲೇಖನವು, ಒಂದೆಡೆಯಿಂದ ಪೊಡವಿಗೊಡೆಯನ ಪುರವಾದ ಉಡುಪಿಯಲ್ಲಿ ಅಷ್ಟಮಿ ಸಂಭ್ರಮವನ್ನು ಇಂಚಿಂಚಾಗಿ ತೆರೆದಿಡುತ್ತಾ ಬಂದರೆ, ಮತ್ತೊಂದೆಡೆಯಿಂದ ಗೆಳೆಯನ ರೂಪದಲ್ಲಿ ಕೃಷ್ಣನನ್ನು ಎಲ್ಲರಲ್ಲೂ ಕಾಣುವ ತುಡಿತವನ್ನು ಬಿಚ್ಚಿಡುತ್ತದೆ.

ಒಂದು ಕಡೆ ಅವರು ಹೇಳುತ್ತಾರೆ: "ಕೃಷ್ಣನಿಗಿಲ್ಲದ ಮಡಿ ಅಲ್ಲಿ ಕೃಷ್ಣನನ್ನು ಪೂಜಿಸುವವರಿಗಿದೆ, ಅವನಿಗಿಲ್ಲದ ಮೈಲಿಗೆ ಅಲ್ಲಿನ ಮಠಗಳಿಗಿದೆ, ಮಠಗಳಲ್ಲಿ ಪ್ರತ್ಯೇಕ ಕೃಷ್ಣ ವಿಗ್ರಹವನ್ನಿಟ್ಟು ಪೂಜೆ ಮಾಡುವವರಿಗಿದೆ, ಪಾರುಪತ್ಯೆದಾರರಿಗಿದೆ. ಆದರೆ ಕೃಷ್ಣ ಯಾವತ್ತೂ ಸ್ನಾನ ಮಾಡಿಕೊಂಡು ಬರದ ನನ್ನನ್ನು ಬೈಯಲಿಲ್ಲ. ಜ್ವರ ಬಂದಿದೆ ಎಂದು ಬೆಳಿಗ್ಗೆ ನಾಲ್ಕು ಗಂಟೆಗೆ ತಣ್ಣೀರು ಮೀಯುವುದನ್ನು ತಪ್ಪಿಸಿಕೊಂಡು ಕಳ್ಳನಂತೆ ಕನಕನ ಕಿಂಡಿಯಲ್ಲಿ ಬಂದು ನಿಂತರೆ ಕೃಷ್ಣ ಕಣ್ಣಲ್ಲೇ `ಭಲೇ ನಿನ್ನ ಧೈರ್ಯವೇ’ ಎಂದು ತಮಾಷೆ ಮಾಡಿದ್ದನೇನೋ, ಈಗ ನನಗೆ ಹಾಗನಿಸುತ್ತದೆ". ಇದು ವಾಸ್ತವಿಕತೆಯನ್ನು ಎತ್ತಿ ತೋರಿಸುವ ಸಾಲುಗಳು.

ಅಂತೆಯೇ ಅವರು ಇನ್ನೊಂದೆಡೆ, ಎಲ್ಲೆಡೆಯೂ ಕೃಷ್ಣನಿದ್ದಾನೆ ಎಂಬ ತಮ್ಮ ಮನೋಭಾವವನ್ನು ಸಮರ್ಥಿಸುವದು ಹೀಗೆ: "ಈ ಕೃಷ್ಣ ನಮಗೆ ಎಲ್ಲವೂ ಆಗಿ ಕಂಡವನು. ಪುಷ್ಕರಣಿಯಲ್ಲಿ ನಾವು ನೀರಾಡಿ ಬಂದ ಹೊತ್ತಿಗೆ ಆತ ಬರೀಮೈಯ್ಯಲ್ಲಿ ನಿಂತ ಮಗುವಾಗಿರುತ್ತಿದ್ದ. ರಥಬೀದಿ, ಅಷ್ಟಮಠಗಳ ಸಾಲು, ಕಟ್ಟಿಗೆ ರಥ, ಚಿನ್ನದ ರಥ, ಬೆಳ್ಳಿರಥ, ರಾಜಾಂಗಣ, ಅಂಗಡಿ ಮುಂಗಟ್ಟುಗಳ ಸಾಲು, ಸರೋವರಕ್ಕೆ ಹಾಕಿದ ವಿವಿಧ ಮಿಣುಕಿನ ಸೀರಿಯಲ್‌ ಲೈಟ್‌ಗಳ ನಡುವೆ ತೆಪ್ಪವೇರಿಯೋ, ರಥವೇರಿಯೋ ಬರುವ ಕೃಷ್ಣ ನಮಗೆ ಶ್ರೀಮಂತರ ಮನೆಯ ಹುಡುಗನ ಥರ ಕಾಣುತ್ತಿದ್ದ, ಅಪ್ಪ- ಅಮ್ಮ ಬಿಟ್ಟುಕೊಟ್ಟರೆ ಅಲ್ಲೇ ನಮ್ಮೊಡನೆ ಆಟಕ್ಕೆ ಇಳಿದುಬಿಡುವ ಪುಂಡನಂತೆ. ಅದೇ ಗೋವರ್ಧನ ಗಿರಿಯೆತ್ತಿದ ಅಲಂಕಾರದಲ್ಲಿ, ರಾಧೆಯೊಂದಿಗೆ ನಿಂತ ಮಾಧವನ ರೂಪಿನಲ್ಲಿ, ಪೂತನಿಯ ವಿಷ ಹೀರಿದ ಬಾಲಕೃಷ್ಣನ ಕಣ್ಣಲ್ಲಿ, ಶಕಟಾಸುರನನ್ನು ಕೊಂದ ಶಕಪುರುಷನ ಶೌರ್ಯದಲ್ಲಿ ಅವನು ಹರೆಯದವನಂತೆ ಪ್ರಬುದ್ಧನಾಗಿ ತೋರುತ್ತಿದ್ದ. ಗೀತೋಪದೇಶ ಮಾಡುವಾಗ ಅವನು ನಮ್ಮಪ್ಪನ ಹಿತೋಪದೇಶದಂತೆ ಕಾಣುತ್ತಿದ್ದ, ದಶಾವತಾರದ ವಿರಾಡ್ರೂಪ ತೋರುವಾಗ ಮಾತ್ರ ಬೀದಿಯಲ್ಲಿ ನಾವು ಹರವಿಕೊಂಡು ಕುಳಿತ ಆಟಿಕೆಯನ್ನು, ನಮ್ಮ ಹರೆಯದ ಚೆಲ್ಲಾಟವನ್ನೂ, ನಮ್ಮ ಮುಗ್ಧ ಕನಸು- ಕನವರಿಕೆಗಳನ್ನೂ ಮೀರಿ ದೂರ ಹೊರಟು ಹೋಗಿ ವಿಶ್ವವಿಖ್ಯಾತನಾದ `ದೊಡ್ಡ ಮನುಷ್ಯ’ನಂತಾಗಿರುತ್ತಿದ್ದ".

ಮನಮುಟ್ಟುವ ಸಾಲುಗಳುಳ್ಳ ಈ ಬ್ಲಾಗಿಗೆ ತನ್ನದೇ ಆದ ಪ್ರಬುದ್ಧ ಓದುಗರ, ಅಭಿಮಾನಿಗಳ ಬಳಗವಿದೆ. ಬ್ಲಾಗಿನ ವಿನ್ಯಾಸವು ಸರಳವಾಗಿದೆ. ಹೆಸರು ಪಿಚ್ಚರ್ ಎಂದಿರುವುದರಿಂದ ಮತ್ತು ಸಿನಿಮಾ ಲೋಕಕ್ಕೆ ಮೀಸಲಾದ ಬ್ಲಾಗುಗಳು ಕನ್ನಡದಲ್ಲಿ ಕಡಿಮೆ ಇರುವುದರಿಂದ, ಮತ್ತಷ್ಟು ಸಿನಿಮಾ ವಿಷಯಗಳಿಗೆ ಒತ್ತು ಕೊಟ್ಟಲ್ಲಿ, ಹಾಗೂ ಕನಿಷ್ಠ ವಾರಕ್ಕೊಂದು ಲೇಖನ ಈ ಬ್ಲಾಗಿನಲ್ಲಿ ಮೂಡಿಬರುವಂತಾದರೆ ಓದುಗ ಬಳಗ ಹೆಚ್ಚಬಹುದು ಮತ್ತು ಮೆಚ್ಚಬಹುದು.

Share this Story:

Follow Webdunia kannada