Select Your Language

Notifications

webdunia
webdunia
webdunia
webdunia

ವೆಬ್‌ದುನಿಯಾ ವಾರದ ಬ್ಲಾಗ್: ಕುಂಟಿನಿ

ವೆಬ್‌ದುನಿಯಾ ವಾರದ ಬ್ಲಾಗ್: ಕುಂಟಿನಿ
-ಸುನಂವಿ

ನಿರ್ದಿಷ್ಟ ವಿಷಯಗಳಿಲ್ಲದೆಯೇ ವೈಚಾರಿಕ ಲೇಖನ, ಅವಲೋಕನ, ಕವಿತೆ ಹೀಗೆ ವಿವಿಧ ವಿಷಯಗಳನ್ನು ಒಳಗೊಂಡು ಗಮನ ಸೆಳೆಯುವ ಒಂದು ಬ್ಲಾಗು 'ಕುಂಟಿನಿ' (kuntini.blogspot.com). ಈ ಬ್ಲಾಗಿನಲ್ಲಿ ನೀವು ಖಡಕ್ಕಾದ ಹಾಗೂ ಕಟು ನುಡಿಗಳಿರುವ ಲೇಖನಗಳನ್ನು ಓದಬಹುದು. ಮೃದು ಹೃದಯದಿಂದ ಹೊರಹೊಮ್ಮುವ ಚುಟುಕು ಕವಿತೆಗಳನ್ನು ಆನಂದಿಸಬಹುದು. ಕಚಗುಳಿಯಿಡುವ ಹಾಸ್ಯ ಬರಹಗಳನ್ನು ಓದಿ ಆನಂದಿಸಬಹುದು.

ಕುಂಟಿನಿ ಬ್ಲಾಗ್‌ನ ಮಾಲೀಕರಾದ ಗೋಪಾಲಕೃಷ್ಣ ಕುಂಟಿನಿ ಅವರು ತಮ್ಮನ್ನ ಭೂಮಿಯ ಅತ್ಯಂತ ಸುಂದರ ಪುರುಷ ಎಂದು ತಲೆಬರಹ ಹಾಕಿಕೊಂಡಿದ್ದಾರೆ. ಹಾಗೆಯೇ ತಾವು ತುಂಬಾ ಸಿಂಪಲ್ಲು, ಅಷ್ಟೇ ಕೇರಿಂಗು, ಅಷ್ಟು ಪ್ರೀತಿ, ಇಷ್ಟು ಭಾವನೆ ತುಂಬಿಕೊಂಡು, ನಿಮಗಿಷ್ಟವಾಗೋ ಒಂದು ಜೀವ ಎಂದು ಬಣ್ಣಿಸಿಕೊಂಡಿದ್ದಾರೆ. ಕುಂಟಿನಿಯ ಒಳಹೂರಣವನ್ನು ಕೆದಕಿ ನೋಡಿದಾಗ ಅವರ ಈ ಬಣ್ಣನೆ ಸುಳ್ಳೆಂದು ಅನಿಸುವುದಿಲ್ಲ.

ಎರಡು ದೀಪಗಳನ್ನು ಹಚ್ಚಿ
ಕತ್ತಲನ್ನು
ನೋಡಿದೆ.
ಎರಡು ಬೆಳಕಿರಲಿಲ್ಲ.

ಹೀಗೆಂದು ಒಂದೆಡೆ ಉಲಿದಿದ್ದಾರೆ ಕುಂಟಿನಿಯವರು. ಮೇಲಿನ ಸಾಲುಗಳಲ್ಲಿ ಎಂತಹ ಅರ್ಥ! ಅದೇ ಪೋಸ್ಟ್‌ನಲ್ಲಿ ಅವರು ಬರೆದ ಈ ಮುಂದಿನ ಚುಟುಕವನ್ನು ಓದಿ...

ಸೂರ್ಯ ಕಂತಿದ ಮೇಲೆ
ಒಳಗಿನ ಮನೆಯಲ್ಲಿ
ಹುಟ್ಟಿದ ಬೆಳಕು
ಕರೆದೊಯ್ದರೆ
ಜಗವನ್ನೇ ಬೆಳಗುವ
ಬಿಗುಮಾನದಲ್ಲಿ ಸಂಭ್ರಮಿಸಿತು.

ಈ ಸಾಲುಗಳು ಮನುಷ್ಯನ ಮನಸ್ಸಿನ ದುರಹಂಕಾರವನ್ನು ಅನಾಮತ್ತಾಗಿ ಅನಾವರಣಗೊಳಿಸುತ್ತವೆ. ಅನುಭವೀ ಪತ್ರಕರ್ತರಾದ ಗೋಪಾಲಕೃಷ್ಣ ಕುಂಟಿನಿಯವರಿಂದ ಈ ರೀತಿಯ ಬರಹಗಳು ಬರುವುದು ಸಹಜವೇ. ಈ ರೀತಿಯ ಚುಟುಕಗಳು ಅವರ ಬ್ಲಾಗಿನಲ್ಲಿ ಕಾಲಾನುಕಾಲಕ್ಕೆ ಬರುತ್ತಲೇ ಇರುತ್ತವೆ. ಇವುಗಳು ಅವರ ಹಿಂದಿನ ಸಂಗ್ರಹಿತ ಚುಟುಕುಗಳೋ ಅಥವಾ ಈಚೆಗೆ ಬರೆದು ಯಥಾವತ್ತಾಗಿ ಹಾಕಿದವುಗಳೋ ಎಂಬುದನ್ನು ತಿಳಿಯಬೇಕಿದ್ದರೆ ಅವರನ್ನೇ ಕೇಳಬೇಕು.

ಹಿಂದೊಮ್ಮೆ ಅವರು ಕುಡಿನೋಟದ ಬಗ್ಗೆ ಬರೆದ ಬರಹ ಇಲ್ಲಿ ಪ್ರಸ್ತುತಾರ್ಹ. ಜರ್ಮನಿಯಲ್ಲಿ ತರುಣ ತರುಣಿಯರ ಕುಡಿನೋಟದ ಬಗ್ಗೆ ಸಂಶೋಧನೆ ನಡೆಸಿದ್ದರ ಒಂದು ವರದಿಯನ್ನು ಇಟ್ಟುಕೊಂಡು ಅವರು ಕುಡಿನೋಟದ ಬಗ್ಗೆ ಬರೆದ ಸಂಕ್ಷಿಪ್ತ ಹಾಸ್ಯ ಲೇಖನ ನಿಜಕ್ಕೂ ಆಪ್ಯಾಯಮಾನಕರ.

"...ರೆಸ್ಟುರಾದಲ್ಲಿ ಆರನೇ ಟೇಬಲ್‌ನಲ್ಲಿ ಐಸ್‌ಕ್ರೀಂ ಮೆಲ್ಲುತ್ತಿರುವ ಹರೆಯದ ಹುಡುಗಿಗೆ ಬೇಡ ಬೇಡವೆಂದರೂ ಆ ಹ್ಯಾಂಡ್ಸಮ್ ಬಾಯ್‌ನನ್ನು ನೋಡಿ ಬಿಡುವ ತವಕ... ಕುಡಿನೋಟ ಬೀರುವ ಅವನಿಗಾಗಲಿ, ಅವಳಿಗಾಗಲಿ ಅದು ಅರಿವೇ ಇಲ್ಲದ ಪ್ರಕ್ರಿಯೆ. ಅದು ಉಸಿರಾಟದಂತೆ, ಹೃದಯ ಬಡಿತದಂತೆ ಸಹಜ. ಅದೊಂದು ಸಂವಾದ. ಅದಕ್ಕೆ ಕಾಲ ಮಿತಿಯಿಲ್ಲ, ಕಟ್ಟು ಕಟ್ಟಳೆಗಳಿಲ್ಲ. ಮನದ ಭಾಷೆ ನೋಟದ ರೂಹಿನಲ್ಲಿ ಮಾತಿಗಿಳಿಯುವ ಪರಿ ಅದು... ಅದು ಪರಿಶುದ್ಧ, ಅಲ್ಲಿ ಅಸಹಜವಾದುದೇನಿಲ್ಲ, ಅತಿಯಾಗುವುದೂ ಏನಿಲ್ಲ..."

ಈ ಮೇಲಿನ ಪದಗಳಿರುವ ಬರಹದಲ್ಲಿ ಅವರು ಹದಿಹರೆಯದ ಗುಂಗನ್ನು ನಮ್ಮೆದುರು ಬಿಂಬಿಸಿದ್ದಾರೆ. ನಾವೂ ನೀವು ಯಾವಾಗಲೂ ಇಲ್ಲದಿದ್ದರೂ ಯಾವಾಗಾದರೊಮ್ಮೆ ಬೀರಿದ ಅಥವಾ ಸ್ವೀಕರಿಸಿದ ಕುಡಿನೋಟಗಳು ಪಟಪಟನೇ ನಮ್ಮ ಕಣ್ಮುಂದೆ ಮಿಂಚಿಹೋಗುತ್ತವೆ. ಈ ರೀತಿ ಕೆದಕುವ ಬರಹಗಳು ಎಲ್ಲರಿಂದಲೂ ಮೂಡುವುದು ಕಷ್ಟವೇ.

ಕುಂಟಿನಿಯವರು ಆಗೊಮ್ಮೆ ಈಗೊಮ್ಮೆ ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುತ್ತಾರೆ. ಸಲಹೆ ಎಂಬ ವೃಥಾ ವೆಚ್ಚ ಎಂದು ಅವರು ಬರೆದ ಲೇಖನವೊಂದರಲ್ಲಿ ಸಲಹೆಗಳು ಅನಾವಶ್ಯಕವೆಂಬ ವಾದವನ್ನು ಮುಂದಿಡುತ್ತಾರೆ.

ಪ್ರತಿಯೊಬ್ಬರು ಸೆಲ್ಫ್‌ಮೇಡ್ ಆಗಿರುವುದರಿಂದ ಯಾರೂ ಯಾರಿಂದಲೂ ಯಾವುದೇ ಸಲಹೆ ಬಯಸುವುದಿಲ್ಲ. ಸಲಹೆ ಕೇಳಲು ಬರುವವರು ನಿಮ್ಮ ಉತ್ತರದಿಂದ ಆ ಕ್ಷಣದ ಪಲಾಯನಕ್ಕೆ ಒಂದು ಕಂಡುಕೊಳ್ಳುತ್ತಾರೆ ಎಂಬುದು ಕುಂಟಿನಿಯವರ ವಾದ.

"...ಸಲಹೆ ಬೇಕಾದವರು ಅದನ್ನು ಪಾಲಿಸಲೆಂದು ನಿಮ್ಮಿಂದ ಅಪೇಕ್ಷಿಸಿದ್ದಾರೆ ಎಂದು ನೀವು ಭ್ರಮಿಸುತ್ತೀರಿ. ಹಾಗಾಗಿ ಪುಂಖಾನುಪುಂಖವಾಗಿ ಸಲಹೆ ನೀಡಲಾರಂಭಿಸುತ್ತೀರಿ. ನೋಡುತ್ತಾ ನೋಡುತ್ತಾ ಆತ ನಿಮ್ಮ ದಾಸಾನುದಾಸ ಆಗುತ್ತಿದ್ದಾನೆಂದು ನೀವು ಅಂದುಕೊಳ್ಳುತ್ತೀರಿ... ಆದರೆ ಅಸಲಿಗೆ ಆತನ ಮನಸ್ಸು ನಿಮ್ಮ ಉಚಿತ ಸಲಹೆಯ ಸಾಧ್ಯಾಸಾಧ್ಯತೆಯ ಅಥವಾ ಅದರ ಸತ್ಯಾಸತ್ಯತೆಯ ಮೌಲ್ಯಮಾಪನ ಮಾಡುತ್ತಾ ಹೋಗುತ್ತಿರುತ್ತದೆ. ನಿಮ್ಮಿಂದ ಸಲಹೆ ಪಡೆಯಲಾರಂಭಿಸುತ್ತಿರುವಾಗಲೇ ಆತ ತನಗೆ ಎಷ್ಟು ಬೇಕು ಎಂಬುದನ್ನು ನಿರ್ಧರಿಸಿದ್ದಾಗಿದೆ. ಪಾಪ ನಿಮಗೆ ಅದು ಎಲ್ಲಿ ತಾನೆ ಗೊತ್ತಾಗಬೇಕು!"

ಈ ಮೇಲಿನವು ಅವರು ನಮಗೆ ನಿಮಗೆ ನೀಡುತ್ತಿರುವ ಸಲಹೆಗಳಾಗಿವೆ. ಅವನ್ನು ನಾವು ಸ್ವೀಕರಿಸಿದರೆ ಅವರ ವಾದ ಕುಸಿಯುತ್ತದೆ. ಬಿಟ್ಟರೆ ಅವರ ಲೇಖನವಷ್ಟೇ ಸೋಲುತ್ತದೆ, ಆದರೆ ಅವರು ಗೆಲ್ಲುತ್ತಾರೆ.

ಹಾಗೆಯೇ ಮೌನ ವ್ಯಾಖ್ಯಾನಕ್ಕಿಳಿದು ಮೌನಂ ಶರಣಂ ಗಚ್ಛಾಮಿ ಎಂದು ಆರಂಭಿಸುವ ಕುಂಟಿನಿಯವರು ಮಾತು ನಮ್ಮ ಅಗತ್ಯವೇ ಅಲ್ಲ ಎಂದು ಮಾತಿಗಿಳಿಯುತ್ತಾರೆ. ಮೊಬೈಲ್ ಇಟ್ಟುಕೊಂಡವ ಅದಿಲ್ಲದಿದ್ದರೆ ಉಸಿರೇ ಇಲ್ಲವೆಂದು ಪರಿತರಿಸುತ್ತಾನೆ. ಹೀಗಿರುವಾಗ ಮಾತು ಬಲ್ಲವ ಮೌನಕ್ಕೆ ಮೊರೆ ಹೋಗಬೇಕಾದರೆ ಎಷ್ಟು ಪ್ರಯಾಸಪಡಬೇಕಾದೀತು! ಕುಂಟಿನಿಯವರು ಮೌನ ವಹಿಸಲು ಒಂದು ಸಲಹೆ ಮುಂದಿಡುತ್ತಾರೆ. ಮೊದಮೊದಲಲ್ಲಿ ಒಂದೆರಡು ಗಂಟೆ ಆಮೇಲೆ ಒಂದೆರಡು ದಿನ ಆಮೇಲೆ ಒಂದೆರಡು ವಾರ ಮತ್ತೆ ಮತ್ತೆ ಒಂದೆರಡು ತಿಂಗಳು... ಹೀಗೆ.... ಮಾತು ನಿಲ್ಲಿಸಿರಿ ಎಂದು ಹೇಳುತ್ತಾರೆ.

ಮೌನ ಬೇಕೆಂದು ಹೇಳುವ ಕುಂಟಿನಿಯವರ ಬ್ಲಾಗ್ ಮೌನ ವಹಿಸದಿದ್ದರೆ ಸಾಕು!

Share this Story:

Follow Webdunia kannada