Select Your Language

Notifications

webdunia
webdunia
webdunia
webdunia

ರಾಜ್‌ಕಪೂರ್ ಚಿತ್ರದಲ್ಲಿ ನಟಿಸಲಿದ್ದ ಲತಾ

ರಾಜ್‌ಕಪೂರ್ ಚಿತ್ರದಲ್ಲಿ ನಟಿಸಲಿದ್ದ ಲತಾ
PTI
ರಾಜ್ ಕಪೂರ್ ಅವರ "ಸತ್ಯಂ ಶಿವಂ ಸುಂದರಂ"ಗೆ ಪ್ರೇರಣೆ ಯಾರು ಗೊತ್ತೇ? ಗಾಯಕಿ ಲತಾ ಮಂಗೇಷ್ಕರ್. 1978ರ ಆರ್.ಕೆ.ಬ್ಯಾನರ್‌ನ ಈ ಚಿತ್ರದಲ್ಲಿ ಲತಾ ಅವರಿಗೆ ಪಾತ್ರ ಕೊಡಿಸಲು ಅವರು ಇಚ್ಛಿಸಿದ್ದರು. ಈ ವಿಷಯ ಬಹಿರಂಗಪಡಿಸಿದವರು ರಾಜ್ ಕಪೂರ್ ಪುತ್ರಿ ರೀತೂ ನಂದಾ.

ತಮ್ಮ ಇತ್ತೀಚೆಗಿನ ಪುಸ್ತಕದಲ್ಲಿ ಅವರು ಈ ವಿಷಯವನ್ನು ಹೊರಗೆಡಹಿದ್ದಾರೆ. ಸಾಮಾನ್ಯ ಮುಖದ, ಆದರೆ ಸುಂದರ ಕಂಠವಿರುವ ಮಹಿಳೆಯೊಬ್ಬಾಕೆಯ ಜತೆ ವ್ಯಕ್ತಿಯೊಬ್ಬ ಪ್ರೇಮಪಾಶದಲ್ಲಿ ಸಿಲುಕುತ್ತಾನೆ. ಈ ಮಹಿಳೆಯ ಪಾತ್ರವನ್ನು ಲತಾ ಅವರಿಂದ ಮಾಡಿಸಬೇಕೆಂಬುದಾಗಿ ನಾನು ಯೋಚಿಸಿದ್ದೆ ಎಂದು ರಾಜ್ ಕಪೂರ್ ಹೇಳಿರುವುದಾಗಿ ಈ ಪುಸ್ತಕದಲ್ಲಿ ತಿಳಿಸಲಾಗಿದೆ. ಪ್ರೇಮ ಮತ್ತು ವಿಶ್ವಾಸಗಳು ಬಾಹ್ಯ ಸೌಂದರ್ಯಕ್ಕಿಂತಲೂ, ಆಂತರಿಕ ಪರಿಶುದ್ಧತೆಗೆ ಸಂಬಂಧಿಸಿದ ಸಂಗತಿ ಎಂದು ರಾಜ್ ಕಪೂರ್ ನಂಬಿದ್ದರು.

"ರಾಜ್ ಕಪೂರ್" ಎಂಬ ಹೆಸರಿನ ಈ ಪುಸ್ತಕದ ಪ್ರಕಾರ, ಲತಾ ಅವರು ಆರಂಭದಲ್ಲಿ ಈ ಪಾತ್ರ ನಿರ್ವಹಿಸಲು ಒಪ್ಪಿದ್ದರು. ಆದರೆ ಕೊನೆಗೆ ಅದನ್ನು ನಿರಾಕರಿಸಿದ್ದರು.

2002ರಲ್ಲೇ ಪ್ರಕಟವಾದ "ರಾಜ್ ಕಪೂರ್ ಸ್ಪೀಕ್ಸ್" ಎಂಬ ಪುಸ್ತಕದ ಹಿಂದಿ ರೂಪಾಂತರವಿದು. ಇದನ್ನು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆಗೊಳಿಸಲಾಗಿತ್ತು.

ರಾಜ್ ಕಪೂರ್ ಮತ್ತು ಸಹ ನಟಿಯರೊಂದಿಗೆ ಅವರಿಗಿದ್ದ ಸಂಬಂಧಗಳು, ವಿಶೇಷವಾಗಿ ನರ್ಗಿಸ್ ಜತೆಗಿನ ಅವರ ಸರಸ-ವಿರಸದ ಬಗೆಗೆ ಈ ಪುಸ್ತಕದಲ್ಲಿ ಬೆಳಕು ಚೆಲ್ಲಲಾಗಿದೆ.

ರಾಜ್ ಕಪೂರ್ ಅವರ ಅಹಮಿಕೆಯ ವರ್ತನೆಗಳು ಮತ್ತು ಸಂಬಂಧದ ಮಧ್ಯೆ ಮೂಡಿದ ಬಲವಾದ ಬಿರುಕು, ರಾಜ್-ನರ್ಗಿಸ್ ಬಾಂಧವ್ಯವನ್ನು ಮರು ಜೋಡಿಸಲಾರದಷ್ಟು ಅಗಲವಾಗಿಸಿತು ಎಂದಿದ್ದಾರೆ ಲೇಖಕಿ.

ಆ ನಂತರ ರಾಜ್ ಕಪೂರ್ ನೆನಪಿಸಿಕೊಳ್ಳುತ್ತಾರೆ- ಮದರ್ ಇಂಡಿಯಾ ಚಿತ್ರದ ಕುರಿತ ನಿರ್ಧಾರವು ನರ್ಗಿಸ್‌ಗೆ ಬಹುಶಃ ಅತ್ಯಂತ ಕಠಿಣತಮವಾಗಿತ್ತು. ಯಾವುದೇ ಭವಿಷ್ಯವಿಲ್ಲದೆಯೇ ರಾಜ್‌ಕಪೂರ್ ಜತೆಗಿನ ಸಂಬಂಧ ಮುಂದುವರಿಸಬೇಕೇ ಅಥವಾ ಆರ್.ಕೆ.ಸ್ಟುಡಿಯೋ ತೊರೆದು ಹೊಸ ಜೀವನ ಆರಂಭಿಸಬೇಕೇ ಎಂಬುದನ್ನು ಆಕೆ ನಿರ್ಧರಿಸಬೇಕಾಗಿತ್ತು ಎಂದಿದ್ದಾರೆ ರೀತು.

ರಾಜ್ ಕಪೂರ್ ಅವರು ಎಂದಿಗೂ ತಮ್ಮ ಸಂಬಂಧದ ಬಗ್ಗೆ ಖಚಿತವಾಗಿ ಹೇಳದಿದ್ದರೂ, ಅವರೊಮ್ಮೆ ಹೇಳಿದ್ದರು "ನಾವು ಒಬ್ಬರನ್ನೊಬ್ಬರು ಅರ್ಥೈಸಿಕೊಂಡಿದ್ದೇವೆ. ಆಕೆಯ ಬಗೆಗೆ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಲಾರೆ. ನನಗೆ ಆಕೆಯೆಂದ್ರೆ ತುಂಬಾನೇ ಇಷ್ಟ. ಇಲ್ಲ, ಅದು ಪ್ರೇಮ ಅಲ್ಲ. ಬಹುಶಃ ಅದೊಂದು ಇಬ್ಬರು ಮಹಾನ್ ಕಲಾವಿದರಿಬ್ಬರ ನಡುವಣ ಭಾವನಾತ್ಮಕ ಬಂಧವಿರಬಹುದು".

Share this Story:

Follow Webdunia kannada