Select Your Language

Notifications

webdunia
webdunia
webdunia
webdunia

ಚೆನ್ನೈ ಮಹಾನಗರದಲ್ಲಿ ಮೊಳಗಲಿದೆ ಕನ್ನಡದ ಕಹಳೆ

ಚೆನ್ನೈ ಮಹಾನಗರದಲ್ಲಿ ಮೊಳಗಲಿದೆ ಕನ್ನಡದ ಕಹಳೆ
ಚೆನ್ನೈ , ಶುಕ್ರವಾರ, 17 ಸೆಪ್ಟಂಬರ್ 2010 (12:24 IST)
ತಮಿಳುನಾಡು ರಾಜ್ಯ ಘಟಕದ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಚೆನ್ನೈನ ಕರ್ನಾಟಕ ಸಂಘಗಳ ಸಹಯೋಗದಲ್ಲಿ ಪ್ರಥಮ ಮತ್ತು ಸಾಂಸ್ಕೃತಿಕ ಸಮಾವೇಶ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ನಗರದ ಹಬಿಬುಲ್ಲಾ ರಸ್ತೆಯಲ್ಲಿರುವ ಡಾ.ಯು.ರಾಮರಾವ್ ಕಲಾ ಮಂಟಪದಲ್ಲಿ, ಸೆಪ್ಟೆಂಬರ್ 18ರಂದು ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಸಮಾವೇಶದ ಅಧ್ಯಕ್ಷತೆಯನ್ನು ಮದರಾಸು ವಿಶ್ವವಿದ್ಯಾಲಯ ಕನ್ನಡ ವಿಭಾಗದ ನಿವೃತ್ತ ಮುಖ್ಯಸ್ಥರಾದ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆಯವರು ವಹಿಸಲಿದ್ದಾರೆ.ಸಮಾವೇಶದಲ್ಲಿ ಪ್ರೊ..ಎಮ್.ಮರಿಯಪ್ಪ ಭಟ್ ವೇದಿಕೆ, ಕೇಫ ಮಹಾಮಂಟಪ ಮತ್ತು ಆರ್‌.ಎನ್.ಜಯಗೋಪಾಲ್ ಮಹಾದ್ವಾರವನ್ನು ನಿರ್ಮಿಸಲಾಗಿದೆ.

ಸೆಪ್ಟೆಂಬರ್ 18 ರಂದು ಬೆಳಿಗ್ಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾದ ಕೆ.ಪಿ ಆಚಾರ್ಯ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರಾದ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಅಂದು ಸಂಜೆ 5 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾದ ಡಾ.ನಲ್ಲೂರು ಪ್ರಸಾದ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಶ್ರೀಕೃಷ್ಣ ಭಟ್ ಅರ್ತಿಕಜೆ, ಮುಖ್ಯ ಅತಿಥಿಗಳಾಗಿ ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು ಉಪಸ್ಥಿತರಿರಲಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ.ಉಡುಪಿಯ ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮಿಜಿ ಆಶೀರ್ವಚನ ನೀಡಲಿದ್ದಾರೆ.

ತಮಿಳುನಾಡು ರಾಜ್ಯ ಘಟಕದ ಗೌರವ ಕಾರ್ಯದರ್ಶಿ ಡಾ.ತಮಿಳ್ ಸೆಲ್ವಿ ವಂದನಾರ್ಪಣೆ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಸೆಪ್ಟೆಂಬರ್ 19 ರಂದು ಬೆಳಿಗ್ಗೆ ಸಾಹಿತ್ಯ ಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯ ಲೋಕಕ್ಕೆ ತಮಿಳುನಾಡಿನ ಕೊಡುಗೆ ಎನ್ನುವ ವಿಷಯ ಕುರಿತಂತೆ ಚರ್ಚೆ ನಡೆಯಲಿದೆ.

ಪುತ್ತೂರಿನ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ವಿ.ಬಿ.ಅರ್ತಿಕಜೆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಕನ್ನಡ ನಿಘಂಟು ಕ್ಷೇತ್ರಕ್ಕೆ ತಮಿಳುನಾಡಿನ ಕೊಡುಗೆ ವಿಷಯ ಕುರಿತಂತೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಗೋಪಾಲಕೃಷ್ಣ ಉಪನ್ಯಾಸ ನೀಡಲಿದ್ದಾರೆ.

ಕನ್ನಡ ಸಂಶೋಧನಾ ಕ್ಷೇತ್ರಕ್ಕೆ ತಮಿಳುನಾಡಿನ ಕೊಡುಗೆ ವಿಷಯ ಕುರಿತಂತೆ ಮದರಾಸು ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ತಮಿಳ್ ಸೆಲ್ವಿ ಹಾಗೂ ಚೆನ್ನೈನ ಎಂ.ಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಕೆ.ವಿಶ್ವನಾಥ ಉಪನ್ಯಾಸ ನೀಡಲಿದ್ದಾರೆ.

ತಮಿಳುನಾಡಿನಲ್ಲಿ ಕನ್ನಡ ಸೃಜನಶೀಲ ಸಾಹಿತ್ಯದ ಬಗ್ಗೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ತುಳುವಿಭಾಗದ ಮುಖ್ಯಸ್ಥರಾದ ಡಾ.ಶಿವಕುಮಾರ್ ಭರಣ್ಯ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ಗೀತಾ ಲಹರಿ ಕಾರ್ಯಕ್ರಮ, ಹಾಸ್ಯ ಲಹರಿ, ಸಂವಾದ ಮತ್ತು ಕವಿಗೋಷ್ಠಿ ಕಾರ್ಯಕ್ರಮಗಳು ನಡೆಯಲಿವೆ.

ಸಂಜೆ 5.30ಗಂಟೆಗೆ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ತಮಿಳುನಾಡು ರಾಜ್ಯ ಘಟಕದ ಗೌರವ ಕಾರ್ಯದರ್ಶಿಗಳಾದ ಡಾ.ತಮಿಳ್ ಸೆಲ್ವಿ ಸ್ವಾಗತಿಸಲಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಆರ್‌.ವಿ.ಎಸ್.ಸುಂದರಂ ಸಮಾರೋಪ ಭಾಷಣ ಮಾಡಲಿದ್ದಾರೆ.

ಸಮ್ಮೇಳನದ ಅಧ್ಯಕ್ಷರಾದ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ.ಕೃಷ್ಣ ಭಟ್ ಅರ್ತಿಕಜೆ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ತಮಿಳುನಾಡಿನ ಮಾಜಿ ಆರೋಗ್ಯ ಮಂತ್ರಿಗಳಾದ ಎಚ್‌.ವಿ.ಹಂದೆ ಹಾಗೂ ತಮಿಳುನಾಡಿನ ಖ್ಯಾತ ಕವಿಗಳಾದ ಪೇರರಸು ಪದ್ಮಶ್ರೀ ಡಾ.ವೈರಮುತ್ತು ಭಾಗವಹಿಸಲಿದ್ದಾರೆ.

Share this Story:

Follow Webdunia kannada