ಐಪಿಎಲ್ ಟೇಬಲ್ ಟಾಪರ್ ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ತಮ್ಮ ಐದನೇ ಪಂದ್ಯವನ್ನು ಭಾನುವಾರ ಆಡುತ್ತಿದ್ದು, ಸತತ ನಾಲ್ಕು ಗೆಲುವುಗಳ ಅಭಿಯಾನವನ್ನು ಮುಂದುವರಿಸಲು ನಿರ್ಧರಿಸಿದೆ. ನಾಯಕ ಶೇನ್ ವಾಟ್ಸನ್ ಗಾಯಗೊಂಡಿದ್ದರಿಂದ ನಾಲ್ಕು ಪಂದ್ಯಗಳಲ್ಲಿ ಸ್ಟೀವನ್ ಸ್ಮಿತ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದು, 8 ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದಾರೆ. ಎರಡು ಬಾರಿಯ ಐಪಿಎಲ್ ಚಾಂಪಿಯನ್ನರಾದ ಸಿಎಸ್‌ಕೆ ಕೂಡ ಹಿಂದೆ ಬೀಳದೇ ಆಡಿದ ಮೂರೂ ಪಂದ್ಯಗಳಲ್ಲಿ ಜಯಗಳಿಸಿದೆ.
ಮೊಟೆರಾದಲ್ಲಿ ಎರಡನೇ ಪಂದ್ಯವಾಡುತ್ತಿರುವ ರಾಜಸ್ಥಾನದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎಲ್ಲಾ ಪಂದ್ಯಗಳಲ್ಲಿ ಮಿಂಚಿದ್ದು ಬೌಲಿಂಗ್ ಕೂಡ ಸವಾಲಿನದ್ದಾಗಿದೆ. ಅಜಿಂಕ್ಯಾ ರಹಾನೆ ಸನ್ ರೈಸರ್ಸ್ ವಿರುದ್ಧ 62 ರನ್ ಬಾರಿಸಿದ್ದರೆ ಸ್ಮಿತ್ ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 79 ರನ್ ಹೊಡೆದಿದ್ದರು. ನ್ಯೂಜಿಲೆಂಡ್ ಮೀಡಿಯಂ ಪೇಸರ್ ಟಿಂ ಸೌತೀ, ದ.ಆಫ್ರಿಕಾದ ಕ್ರಿಸ್ ಮೋರಿಸ್, ಆಸ್ಟ್ರೇಲಿಯಾದ ಜೇಮ್ಸ್ ಫಾಕ್ನರ್ ಮತ್ತು ಭಾರತದ ಧವಲ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ ಬೌಲಿಂಗ್‌ಗೆ ಬಲ ತುಂಬಿದ್ದಾರೆ.
ಸ್ಪಿನ್ನರ್ ಪ್ರವೀಣ್ ತಾಂಬೆ ನಿಯಮಿತವಾಗಿ ವಿಕೆಟ್ ಕಬಳಿಸಿದ್ದಾರೆ. ಸಿಎಸ್‌ಕೆ ಚೀಪಾಕ್‌ನಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಒಂದು ರನ್ ರೋಚಕ ಜಯದ ಬಳಿಕ ಅದರ ಹಾದಿ ಸುಗಮವಾಗಿ ಸಾಗಿದೆ.
ನ್ಯೂಜಿಲೆಂಡ್ ಓಪನರ್ ಬ್ರೆಂಡನ್ ಮೆಕಲಮ್ ಸನ್ ರೈಸರ್ಸ್ ವಿರುದ್ಧ ಸೀಸನ್ ಮೊದಲ ಶತಕವನ್ನು ಬಾರಿಸಿದ್ದರಿಂದ ಮೇಲಿನ ಕ್ರಮಾಂಕಕ್ಕೆ ಸರಿಯಾದ ಸ್ಫೂರ್ತಿ ಸಿಕ್ಕಿದೆ. ಬೌಲಿಂಗ್ ವಿಭಾಗದಲ್ಲಿ ಆಶಿಶ್ ಶರ್ಮಾ, ಈಶ್ವರ್ ಪಾಂಡೆ, ಮೋಹಿತ್ ಶರ್ಮಾ ಮತ್ತು ಡ್ವೇನ್ ಬ್ರೇವೋ ಬಲ ತುಂಬಿದ್ದಾರೆ. ನಂ. 1 ಮತ್ತು ನಂ.2 ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಹಣಾಹಣಿಗೆ ಇಳಿದಿದ್ದು, ಇದು ನಿಜವಾಗಲೂ ಬಲಾಢ್ಯತೆಯ ಕದನವಾಗಲಿದೆ.