Select Your Language

Notifications

webdunia
webdunia
webdunia
webdunia

ಚಾರ್ಜರ್ಸ್ ಜಯದ ಕ್ರೆಡಿಟ್ ಯುವಬಳಗಕ್ಕೆ: ಗಿಲ್‌ಕ್ರಿಸ್ಟ್

ಚಾರ್ಜರ್ಸ್ ಜಯದ ಕ್ರೆಡಿಟ್ ಯುವಬಳಗಕ್ಕೆ: ಗಿಲ್‌ಕ್ರಿಸ್ಟ್
ಜೋಹಾನ್ಸ್‌ಬರ್ಗ್ , ಸೋಮವಾರ, 25 ಮೇ 2009 (15:39 IST)
PTI
ಕಳೆದ ವರ್ಷ ಕೊನೆಯ ಸ್ಥಾನದಲ್ಲಿದ್ದ ಡೆಕ್ಕನ್ ಚಾರ್ಜರ್ಸ್ ಈ ಬಾರಿ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದ್ದು ವಿಜಯೋತ್ಸಾಹದ ಗುಂಗಿನಲ್ಲಿದೆ. ಈ ನಡುವೆ, ತಂಡದ ಅಭೂತಪೂರ್ವ ಯಶಸ್ಸಿಗೆ ಕಾರಣ ತಂಡದಲ್ಲಿನ ಯುವ ಪ್ರತಿಭೆಗಳು ಎಂದು ನಾಯಕ ಗಿಲ್‌ಕ್ರಿಸ್ಟ್ ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಸುಲಭವಾಗಿ ನಮ್ಮನ್ನು ಸದೆಬಡಿಯಬಹುದಿತ್ತು. ಯುವ ಪ್ರಗ್ಯಾನ್ ರಾಯಲ್ಸ್ ಪರ ಮನೀಷ್ ಪಾಂಡೆ ಹಾಗೂ ವ್ಯಾನ್ ಡಿ ಮೆರ್ವೆ ಅವರ ವಿಕೆಟ್ ಕಬಳಿಸುವ ಮೂಲಕ ಜಯದ ದಾರಿಯನ್ನು ನಮಗೆ ತೆರೆದಿಟ್ಟರು. ತಂಡದ ಜಯದ ಕ್ರೆಡಿಟ್ಟು ಯುವ ಆಟಗಾರರಿಗೇ ಸಲ್ಲಬೇಕು ಎಂದು ಗಿಲ್ ವಿವರಿಸಿದರು.

ಹರ್ಮೀತ್ ಕೂಡಾ ಚಿನ್ನದಂತಹ ಹುಡುಗ. ನಮ್ಮ ಪರವಾಗಿ ಏಳು ಮ್ಯಾಚ್‌ಗಳನ್ನು ಆಡಿದ ಹರ್ಮೀತ್ ಫೈನಲ್‌ನಲ್ಲೂ ನಮಗೆ ವರವಾದ. ಉತ್ತಮವಾಗಿ ಬೌಲಿಂಗ್ ಮಾಡಿದ ಆತ ಕೊನೆಯಲ್ಲಿ ಅತ್ಯುತ್ತಮ ಕ್ಯಾಚನ್ನು ಹಿಡಿದ. ನಮ್ಮ ತಂಡದ ಎಲ್ಲ ಯುವ ಆಟಗಾರರು ಉತ್ತಮವಾಗಿ ತಮ್ಮ ಪ್ರತಿಭೆಯನ್ನು ಬಳಸಿಕೊಂಡಿದ್ದಾರೆ ಎಂಬುದರಲ್ಲಿ ಸಂಶಯವೇ ಇಲ್ಲ. ಬೆಳೆಯಬೇಕೆನ್ನುವ ಹಸಿವನ್ನು ಹಾಗೂ ಕಲಿತುಕೊಳ್ಳುವ ಆಸಕ್ತಿಯನ್ನು ಅವರು ಪಂದ್ಯದುದ್ದಕ್ಕೂ ತೋರಿದ್ದಾರೆ ಎಂದರು.

ಕಳೆದ ಬಾರಿ ತುಂಬ ಹತಾಶರಾಗಿದ್ದ ನಮ್ಮ ತಂಡ ಈ ಬಾರಿ ವಿಜಯಮಾಲೆ ಧರಿಸಿದೆ. ಇದೇ ತರಹದ ವೇದನೆಯನ್ನು ಕಳೆದ ಬಾರಿ ರಾಯಲ್ ಚಾಲೆಂಜರ್ಸ್ ಕೂಡಾ ಅನುಭವಿಸಿದ್ದರು. ಹಾಗೆ ನೋಡುವುದಿದ್ದರೆ, ಕಳೆದ ಬಾರಿಯಲ್ಲಿ ನಮ್ಮ ಹಾಗೂ ಅವರ ಪರಿಸ್ಥಿತಿ ಒಂದೇ ತೆರನಾಗಿತ್ತು. ಈಬಾರಿ ಅದೇ ರಾಯಲ್ ಚಾಲೆಂಜರ್ಸ್ ಅತ್ಯುತ್ತಮವಾಗಿ ಆಡಿ ಮೇಲೆ ಬಂದಿದೆ. ಫೈನಲ್‌ನಲ್ಲಿ ನಮ್ಮ ಎದುರಾಳಿಯಾಗಿ ಹೊರಹೊಮ್ಮಿದ್ದು ಅವರ ದೊಡ್ಡ ಸಾಧನೆಯೇ. ಇದು ರಾಯಲ್ ಚಾಲೆಂಜರ್ಸ್‌ಗಳ ಅಭೂತಪೂರ್ವ ಯಶಸ್ಸು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಒಟ್ಟಾರೆ ಐಪಿಎಲ್ ತುಂಬ ಚೆನ್ನಾಗಿತ್ತು. ಇದೊಂದು ಅದ್ಭುತ ಅನುಭವ. ಐಪಿಎಲ್ ಹಾಗೂ ಕ್ರಿಕೆಟ್ ಸೌತ್ ಆಫ್ರಿಕಾಗಳು ಕಡಿಮೆ ಅವಧಿಯನ್ನು ಅತ್ಯುತ್ತಮವಾಗಿ ಇಂಥದ್ದೊಂದು ಬೃಹತ್ ಪಂದ್ಯಾವಳಿಯನ್ನು ಸಂಘಟಿಸಿದ್ದು ನಿಜಕ್ಕೂ ಗ್ರೇಟ್ ಎಂದರು.

ಅಲ್ಲದೆ, ಕಳೆದ ವರ್ಷ ಕೊನೆಯ ಸ್ಥಾನದಲ್ಲಿದ್ದ ನಮ್ಮ ಮೇಲೆ ವಿಶ್ವಾಸವಿಟ್ಟು ನಂತರವೂ ನಮಗೆ ಸಹಕಾರ ನೀಡಿದ ನಮ್ಮ ತಂಡದ ಮಾಲಿಕರಾದ ಟಿ.ವೆಂಕಟರಾಮ್ ರೆಡ್ಡಿ ಅವರಿಗೂ ನಾನು ಧನ್ಯವಾದ ಅರ್ಪಿಸಲೇಬೇಕು ಎಂದರು.

ಗಿಲ್‌ಕ್ರಿಸ್ಟ್ ಐಪಿಎಲ್ ಪಂದ್ಯಾವಳಿಯ ಗೋಲ್ಡನ್ ಪ್ಲೇಯರ್ ಆಫ್‌ ದಿ ಲೀಗ್ ಎಂಬ ಗೌರವಕ್ಕೆ ಪಾತ್ರರಾದರು. ಗಿಲ್ ಪಂದ್ಯಾವಳಿಯಲ್ಲಿ ಒಟ್ಟು 495 ರನ್‌ಗಳನ್ನು ಪೇರಿಸಿದ್ದು, ಐಪಿಎಲ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ.

Share this Story:

Follow Webdunia kannada