1999ರಿಂದ 2002ರ ವರೆಗಿನ ಅವಧಿಯಲ್ಲಿ 10 ಪುರುಷರನ್ನು ಮದುವೆಯಾಗಿ ಆ ಪೈಕಿ ಹಲವರಿಗೆ ಡೈವೋರ್ಸ್ ನೀಡಿ, ತನ್ನ ಮದುವೆ ದಾಖಲೆ ಪತ್ರಗಳಲ್ಲಿ ತಾನು ಈ ಮೊದಲು ಮದುವೆಯೇ ಆಗಿಲ್ಲವೆಂದು ಸುಳ್ಳು ಘೋಷಣೆ ಮಾಡಿದ್ದಕ್ಕಾಗಿ ಇದೀಗ ಜೈಲು ಶಿಕ್ಷೆಗೆ ಗುರಿಯಾಗಲಿರುವ 39 ವರ್ಷ ಪ್ರಾಯದ ಲಿಯಾನಾ ಕ್ರಿಸ್ಟಿನಾ ಬ್ಯಾರಿಯೆಂಟೋಸ್ ಎಂಬ ಮಹಿಳೆಯ ಜಾತಕ ನೋಡಿದರೆ ಯಾರಾದರೂ ಬೆಚ್ಚಿ ಬೀಳಬೇಕು.
ಒಂದೆಡೆ ಮದುವೆ, ಇನ್ನೊಂದೆಡೆ ಡೈವೋರ್ಸ್, ಮತ್ತೂಂದೆಡೆ ಕೋರ್ಟಿನತ್ತ ದಾಪುಗಾಲು ಹೀಗೆ ಲಿಯಾನಾ 2002ರಲ್ಲಿ ಪೂರ್ತಿಯಾಗಿ ಬ್ಯುಸಿಯಾಗಿದ್ದಳು.
ವಿಚಿತ್ರವೆಂದರೆ 1999ರಲ್ಲಿ ಲಿಯಾನ ಮೊತ್ತ ಮೊದಲ ಬಾರಿಗೆ ಮದುವೆಯಾದದ್ದು ವ್ಯಾಲೆಂಟೈನ್ ದಿನದಂದು - ಲಾಂಗ್ ಐಲ್ಯಾಂಡ್‌ನಲ್ಲಿ. ಅದಾಗಿ ಕೇವಲ ಹದಿನೈದೇ ದಿನಗಳ ಬಳಿಕ ಲಿಯಾನಾ, ರಾಕ್‌ಲ್ಯಾಂಡ್ ಕೌಂಟಿಯಲ್ಲಿ ಮತ್ತೂಬ್ಬನನ್ನು ಮದುವೆಯಾದಳು.
ಅದಾಗಿ ಮತ್ತೆ ಕೇವಲ ಹದಿಮೂರೇ ದಿನಗಳ ಬಳಿಕ ಪುನಃ ಲಾಂಗ್ ಐಲ್ಯಾಂಡ್‌ನಲ್ಲಿ ಇನ್ನಿಬ್ಬರು ಪುರುಷರನ್ನು ಪ್ರತ್ಯೇಕವಾಗಿ ಮದುವೆಯಾದಳು !
ಈ ನಡುವೆ ತಾನು 3 ವರ್ಷಗಳ ಹಿಂದೆ ಮದುವೆಯಾದವನಿಂದ ಲಿಯಾನಾಗೆ ಡೈವೋರ್ಸ್ ಬಂತು. ಕೋರ್ಟಿನಲ್ಲಿ ಆ ಡೈವೋರ್ಸ್ ಕೇಸನ್ನು ನಿಭಾಯಿಸುತ್ತಿದ್ದಂತೆಯೇ 2002ರಲ್ಲಿ ನ್ಯೂಯಾರ್ಕ್‌ನ 3 ಬೇರೆ ಬೇರೆ ಪಟ್ಟಣಗಳಲ್ಲಿ ಲಿಯಾನಾ ಮೂವರನ್ನು ಪ್ರತ್ಯೇಕವಾಗಿ ಮದುವೆಯಾಳು.
ಒಟ್ಟಾರೆಯಾಗಿ 1999ರಿಂದ 2002ರ ಅಂತ್ಯದೊಳಗೆ ಲಿಯಾನಾ ಒಟ್ಟು 10 ಪುರುಷರನ್ನು ಮದುವೆಯಾಗಿರುವುದಾಗಿ ದಾಖಲೆಗಳು ಹೇಳುತ್ತವೆ.
ಈಗ 39ರ ವಯಸ್ಸಿನವಳಾಗಿರುವ ಲಿಯಾನಾಗೆ ಈ ಶುಕ್ರವಾರ ಕೂಡ ಮಹತ್ವದ ದಿನವಾಗಿದೆ. ಕಾರಣ ಆಕೆ ಬ್ರಾಂಕ್ಸ್ ಪಟ್ಟಣದಲ್ಲಿ ವಿವಾಹ ಸಂಬಂಧಿ ಸುಳ್ಳು ಮತ್ತು ವಂಚನೆ ಕೇಸಿನಲ್ಲಿ ಜೈಲು ಶಿಕ್ಷೆಗೆ ಗುರಿಯಾಗುವವಳಿದ್ದಾಳೆ !
ಬ್ರಾಂಕ್ಸ್ ಕೋರ್ಟಿನ ಪ್ರಾಸಿಕ್ಯೂಟರ್ ಹೇಳುವಂತೆ ಲಿಯಾನಾ 2010ರಲ್ಲಿ ವ್ಯಕ್ತಿಯೊಬ್ಬನನ್ನು ಮದುವೆಯಾಗುವಾಗ ತಾನು ಈ ಮೊದಲು ಮದುವೆ ಆದದ್ದೇ ಇಲ್ಲವೆಂಬ ಕಾನೂನು ಘೋಷಣಾ ಪತ್ರಕ್ಕೆ ಸಹಿ ಹಾಕಿದ್ದಳು. ಆಕೆಗೀಗ ಅದೇ ಮುಳುವಾಗಿದೆ.
ಲಿಯಾನಾ ತಾನು ಮದುವೆಯಾಗಿದ್ದ 10 ಪುರುಷರು ಯಾವ ಯಾವ ದೇಶಕ್ಕೆ ಸೇರಿದವರೆಂಬುದು ಕೂಡ ಗೊತ್ತಾಗಿಲ್ಲ. ವಿವಾಹವಾಗುವ ಪುರುಷನು ಹುಟ್ಟಿದ ದೇಶ ಯಾವುದೆಂಬುದನ್ನು ಘೋಷಣಾ ಪತ್ರದಲ್ಲಿ ನಮೂದಿಸುವುದು ಕಾನೂನು ಪ್ರಕಾರ ಕಡ್ಡಾಯ. ಲಿಯಾನಾ ಮದುವೆಯಾದ ಗಂಡಸರ ಕೊನೆ ಹೆಸರುಗಳು ಇಂತಿವೆ: ಗರ್‌ಬ್ರಿಲ್, ಅಲ್ಲಂ, ರೆಹ್ಮಾನ್, ಕೋರಿಡ್ಜ್, ಗಾಟೆಪ್, ಪ್ಯಾರಿಲೋ, ಝೆಲಾಡ್‌ಜೇ, ರಾಜ್‌ಪೂತ್, ಖೋರ್‌ಬಲಾಡ್ಜ್ ಮತ್ತು ಕೀಟಾ.
ಲಿಯಾನಾ ಮದುವೆಯಾಗಿರುವ ಈ ಪುರುಷರ ವಿರುದ್ಧ ಯಾವುದಾದರೂ ಕ್ರಿಮಿನಲ್ ಕೇಸುಗಳಿವೆಯೇ ಎಂಬ ಬಗ್ಗೆ ಆಂತರಿಕ ಭದ್ರತಾ ಇಲಾಖೆಯ ಬಳಿಯೂ ಯಾವುದೇ ದಾಖಲೆಗಳಿಲ್ಲ.
ಲಿಯಾನಾ ತಾನು 3ರಿಂದ 9ನೇ ಗಂಡನನ್ನು ಮದುವೆಯಾಗುವ ಸಂದರ್ಭದಲ್ಲೇ 1, 2, 5 ಮತ್ತು 7ನೇ ಗಂಡನಿಗೆ ಡೈವೋರ್ಸ್ ಕೊಟ್ಟಿದ್ದಾಳೆ.
ಲಿಯಾನಾ ಮದುವೆಯಾದ 5ನೇ ಗಂಡನ ಹಾಲಿ ಪತ್ನಿ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯು ಲಿಯಾನಾಳ ಮದುವೆ ಹುಚ್ಚಿನ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾಳೆ.
ಬ್ರಾಂಕ್ಸ್ ಪಟ್ಟಣದಲ್ಲಿ ಲಿಯಾನಾ ವಾಸಿಸಿಕೊಂಡಿದ್ದ ಅಪಾರ್ಟ್‌ಮೆಂಟ್‌ನ ಬಾಡಿಗೆಯನ್ನು ಹಲವು ತಿಂಗಳಿಂದ ಬಾಕಿ ಇಟ್ಟಿದ್ದು ಅಲ್ಲಿಂದ ಸದ್ದಿಲ್ಲದೆ ನ್ಯೂಯಾರ್ಕ್‌ಗೆ ಹೋದ ಆಕೆ ಅಲ್ಲಿ ಮತ್ತೆ ಮದುವೆಯಾಟವನ್ನು ಮುಂದುವರಿಸಿದ್ದಳು.
ಹೋದಲ್ಲೆಲ್ಲ ಮದುವೆಯಾಗುವುದು, ಮದುವೆಯಾಗಲೆಂದೇ ವಲಸೆ ಹೋಗುವುದು, ತಾನು ವ್ಯವಹರಿಸಿದ ಪುರುಷರೊಂದಿಗೆ ಸರಾಗವಾಗಿ ಮದುವೆಯಾಗುವುದು, ಬಳಿಕ ಡೈವೋರ್ಸ್ ನೀಡುವುದು, ಮನೆ ಬಾಡಿಗೆ ಕೊಡದೆ ನಾಪತ್ತೆಯಾಗುವುದು ಮುಂತಾಗಿ ಚಿತ್ರ ವಿಚಿತ್ರ ಖಯಾಲಿಯನ್ನು ಹೊಂದಿರುತ್ತಾ ಇದೀಗ ಜೈಲಿನತ್ತ ಹೆಜ್ಜೆ ಹಾಕಲು ಮುಂದಾಗಿರುವ ಲಿಯಾನಾ, ಎಲ್ಲರಂಥವಳಲ್ಲ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ ?