ಲಕ್ಷದ್ವೀಪದ ಜನರು ದಿನಕ್ಕೆ 300 ಗ್ರಾಂ ಮೀನು ತಿನ್ನುತ್ತಾರೆ. ಅದು ಹರಿಯಾಣದ ಜನರು ಒಂದು ವರ್ಷಕ್ಕೆ ತಿನ್ನುವ ಮೀನಿನ ಪ್ರಮಾಣ! ಇತ್ತೀಚಿನ ಮಾಹಿತಿಯ ಪ್ರಕಾರ, ರಾಷ್ಟ್ರೀಯ ಮೀನು ಸೇವನೆಯ ಪ್ರಮಾಣ ವಾರ್ಷಿಕ ಸರಾಸರಿ 6.46 ಕೆಜಿ.
ಲಕ್ಷದ್ವೀಪ ಪ್ರಥಮ
2019-20ರಲ್ಲಿ ಲಕ್ಷದ್ವೀಪದ ಜನರು105.6 ಕೆಜಿ ಮೀನು ಸೇವನೆ ಮಾಡಿದ್ದಾರೆ, ಇದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜನರಿಗಿಂತ ಹತ್ತಿರ ಹತ್ತಿರ ಎರಡು ಪಟ್ಟು ಹೆಚ್ಚಿದ್ದು, ಆ ಎರಡೂ ದ್ವೀಪಗಳ ಮಂದಿ ವರ್ಷಕ್ಕೆ 59 ಕೆಜಿ ಮೀನು ತಿನ್ನುತ್ತಾರೆ.
ಹರಿಯಾಣದ ಜನರು ಸಮುದ್ರ ತೀರದಿಂದ ದೂರದ ಪ್ರದೇಶದಲ್ಲಿರುವುದರಿಂದ ಅವರು ಮೀನು ತಿನ್ನುವುದು ಕಡಿಮೆ ಎಂದು ಯೋಚಿಸಿದರೆ, ಅದೇ ರೀತಿ ಇರುವ ತ್ರಿಪುರಾದ ಮಂದಿ ಅದಕ್ಕೆ ಅಪವಾದ - 2019-20ರಲ್ಲಿ ಅವರು ವಾರ್ಷಿಕ 25.45 ಕೆಜಿ ಮೀನು ತಿಂದಿದ್ದು, ಮೂರನೇ ಸ್ಥಾನದಲ್ಲಿದ್ದಾರೆ.
ಇತ್ತೀಚೆಗೆ ಲೋಕಸಭೆಯಲ್ಲಿ ಕೇಳಲ್ಪಟ್ಟ ಪ್ರಶ್ನೆಯೊಂದಕ್ಕೆ ಉತ್ತರ ರೂಪದಲ್ಲಿ ಈ ಮಾಹಿತಿಗಳನ್ನು ನೀಡಲಾಯಿತು. ಮೀನು ತಿನ್ನುವುದರಲ್ಲಿ ಹಿಂದೆ ಬಿದ್ದಿರುವುದು ಕೇವಲ ಹರಿಯಾಣ ಮಾತ್ರವಲ್ಲ. ಅದರ ಸುತ್ತಮುತ್ತಲಿನ ಕೆಲವು ರಾಜ್ಯಗಳ ಕಥೆಯು ಕೂಡ ಇದೆ - ದೆಹಲಿಯ ನಾಗರಿಕರು ವರ್ಷಕ್ಕೆ ಸರಾಸರಿ 0.47 ಕೆಜಿ ಮೀನು ತಿನ್ನುತ್ತಾರೆ, ಪಕ್ಕದ ಉತ್ತರಾಖಂಡ ಮತ್ತು ರಾಜಸ್ಥಾನ ಮಂದಿ ಅನುಕ್ರಮವಾಗಿ ವಾರ್ಷಿಕ ಸರಾಸರಿ 0.7 ಕೆಜಿ ಮತ್ತು 0.86 ಕೆಜಿ ಮೀನು ಸೇವಿಸುತ್ತಾರೆ.
ಇನ್ನು ಪಂಜಾಬ್ನಲ್ಲಿ ಅಮೃತ್ಸರಿ ಫಿಶ್ ಟಿಕ್ಕಾ ಅಲ್ಲಿನ ಮಾಂಸಹಾರಿಗಳಿಗೆ ಅಚ್ಚುಮೆಚ್ಚು. ಅಲ್ಲಿನ ಜನ ಮೀನು ತಿನ್ನುವುದರಲ್ಲಿ ಹಿಂದೆ ಬಿದ್ದಿಲ್ಲ ಎಂಬುದನ್ನು ಇದರಿಂದಲೇ ತಿಳಿಯಬಹುದು. ಅವರು ವಾರ್ಷಿಕ ಸರಾಸರಿ 16.47 ಕೆಜಿ ಮೀನು ತಿನ್ನುತ್ತಾರೆ. ಅದೇ ರೀತಿ ಸಿಕ್ಕಿಂ ಜನರನ್ನು ಹೊರತುಪಡಿಸಿ ಈಶಾನ್ಯ ರಾಜ್ಯಗಳ ಬಹುಪಾಲು ಮಂದಿ ಮೀನು ಪ್ರಿಯರು. ಕೇರಳವನ್ನು ಹಿಮ್ಮೆಟ್ಟಿಸಿದ ಛತ್ತೀಸ್ಗಡ
ಗೋವಾ ಮತ್ತು ಪಶ್ಚಿಮ ಬಂಗಾಳದಂತಹ ಜನಪ್ರಿಯ ಮೀನು ಪ್ರಿಯ ರಾಜ್ಯಗಳ ಜನರ ಮೀನು ಸೇವನೆ ಕುರಿತ ಅಂಕಿಅಂಶಗಳು ಲಭ್ಯವಿಲ್ಲ. ಕೇರಳದ ಮಂದಿ ವಾರ್ಷಿಕ 19.59 ಕೆಜಿ ಮೀನು ಸೇವಿಸುತ್ತಾರೆ. ಛತ್ತೀಸ್ಗಡ ರಾಜ್ಯವು ಈ ವಿಷಯದಲ್ಲಿ ಅವರನ್ನು ಹಿಮ್ಮೆಟ್ಟಿಸಿದ್ದು, ವಾರ್ಷಿಕ 19.7 ಕೆಜಿ ಮೀನು ತಿನ್ನುವ ಮೂಲಕ 4ನೇ ಸ್ಥಾನದಲ್ಲಿದೆ.
ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ, ವಾರ್ಷಿಕ ಸರಾಸರಿ ಮೀನು ಸೇವನೆಯಲ್ಲಿ ಎರಡಂಕಿ ಹೋದಿರುವ ರಾಜ್ಯಗಳೆಂದರೆ ಪಾಂಡಿಚೇರಿ (18.8 ಕೆಜಿ), ಒಡಿಸ್ಸಾ (16.24 ಕೆಜಿ), ಅಸ್ಸಾಂ (11.89 ಕೆಜಿ), ಕರ್ನಾಟಕ (11.66 ಕೆಜಿ), ಉತ್ತರ ಪ್ರದೇಶ (10.87 ಕೆಜಿ) ಮತ್ತು ಮಣಿಪುರ (10.5 ಕೆಜಿ).
2019-20 ರಲ್ಲಿ ದೇಶದಲ್ಲಿ 141.64 ಲಕ್ಷ ಟನ್ ಮೀನು ಹಿಡಿಯಲಾಗಿದೆ. ಆಂಧ್ರಪ್ರದೇಶದಲ್ಲಿ 41.74 ಲಕ್ಷ ಟನ್ ಮೀನು ಹಿಡಿಯಲಾಗಿದ್ದು, ಅದು ದೇಶದ ಮೀನು ಉತ್ಪಾದನೆಯಲ್ಲಿ ಶೇಕಡಾ 30ರಷ್ಟು ಕೊಡುಗೆ ನೀಡುತ್ತದೆ. ಅದರ ನಂತರದ ಸಾಲಿನಲ್ಲಿ ಪಶ್ಚಿಮ ಬಂಗಾಳ (17.82 ಲಕ್ಷ ಟನ್) ಮತ್ತು ಗುಜರಾತ್ (8.59 ಲಕ್ಷ ಟನ್ ) ರಾಜ್ಯಗಳಿವೆ.