ಕಠ್ಮಂಡು: ನೇಪಾಳದ ಪ್ರಧಾನಿ ಶೇರ್ ಬದೂರ್ ದೆವುಬಾ ಆಹ್ವಾನದ ಮೇರೆಗೆ ನೇಪಾಳಕ್ಕೆ ಪ್ರವಾಸ ತೆರಳಿರುವ ಪ್ರಧಾನಿ ನರೇಂದ್ರ ಮೋದಿ, ನೇಪಾಳದ ಪ್ರಧಾನಿ ಜೊತೆ ಮಾಯಾ ದೇವಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು.
ಭಗವಾನ್ ಬುದ್ಧನ ಜನ್ಮಸ್ಥಳವಾದ ಬೌದ್ಧ ಧರ್ಮದ ಪವಿತ್ರ ಸ್ಥಳಗಳಲ್ಲಿ ಒಂದಾದ ಲುಂಬಿನಿಗೆ ಬುದ್ಧಪೂರ್ಣಿಮೆ ದಿನ ಭೇಟಿ ನೀಡಲು ಪ್ರಧಾನಿ ನರೇಂದ್ರ ಮೋದಿ ಇಂದು (ಮೇ.16) ನೇಪಾಳಕ್ಕೆ ಆಗಮಿಸಿದ್ದಾರೆ. ಈ ಭೇಟಿಯ ವೇಳೆ ಜಲವಿದ್ಯುತ್, ಅಭಿವೃದ್ಧಿ ಮತ್ತು ಸಂಪರ್ಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸಲು ಅವರು ನೇಪಾಳ ಪ್ರಧಾನಿ ಬಹದ್ದೂರ್ ದೇವುಬಾ ಅವರೊಂದಿಗೆ ಸಭೆ ನಡೆಸಿದ್ದಾರೆ.
ಉತ್ತರ ಪ್ರದೇಶದ ಕುಶಿನಗರದಿಂದ ಭಾರತೀಯ ವಾಯುಪಡೆಯ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮೋದಿ ಮತ್ತು ಅವರ ಪರಿವಾರದವರು ನೇಪಾಳಕ್ಕೆ ಆಗಮಿಸಿದರು. ನೇಪಾಳದಲ್ಲಿ ಬಂದಿಳಿದೆ. ಬುದ್ಧ ಪೂರ್ಣಿಮೆಯ ವಿಶೇಷ ಸಂದರ್ಭದಲ್ಲಿ ನೇಪಾಳದ ಅದ್ಭುತ ಜನರ ನಡುವೆ ಇರಲು ಸಂತೋಷವಾಗಿದೆ. ಲುಂಬಿನಿಯಲ್ಲಿನ ಕಾರ್ಯಕ್ರಮಗಳನ್ನು ಎದುರು ನೋಡುತ್ತಿದ್ದೇನೆ ಎಂದು ನೇಪಾಳಕ್ಕೆ ತೆರಳಿದ ನಂತರ ಮೋದಿ ಟ್ವೀಟ್ ಮಾಡಿದ್ದರು.
ಲುಂಬಿನಿಗೆ ಆಗಮಿಸಿದ ಮೋದಿ ಅವರನ್ನು ನೇಪಾಳ ಪ್ರಧಾನಿ ದೇವುಬಾ ಸ್ವಾಗತಿಸಿದರು. ನಂತರ ಪವಿತ್ರ ಮಾಯಾದೇವಿ ದೇವಸ್ಥಾನದಲ್ಲಿ ಮೋದಿ ಪ್ರಾರ್ಥನೆ ಸಲ್ಲಿಸಿದರು. ಮೋದಿ ಐತಿಹಾಸಿಕ ದೇವಾಲಯಕ್ಕೆ ಭೇಟಿ ನೀಡಿದಾಗ ದೇವುಬಾ ಅವರ ಜೊತೆಗಿದ್ದರು. ಲುಂಬಿನಿಯ ಪವಿತ್ರ ಮಾಯಾ ದೇವಿ ದೇವಾಲಯದಲ್ಲಿ ಪ್ರಾರ್ಥನೆಯೊಂದಿಗೆ ನೇಪಾಳ ಭೇಟಿಯನ್ನು ಪ್ರಾರಂಭಿಸುತ್ತಿದ್ದೇನೆ' ಎಂದು ಪ್ರಧಾನ ಮಂತ್ರಿಗಳ ಕಚೇರಿ ಟ್ವೀಟ್ ಮಾಡಿದೆ.