Select Your Language

Notifications

webdunia
webdunia
webdunia
webdunia

ಮೋದಿ ಪ್ರಧಾನಿ: ಪಾಕ್ ದೇಶದ ರಾಜಕೀಯದಲ್ಲಿ ಹೊಸ ತಿರುವು

ಮೋದಿ ಪ್ರಧಾನಿ: ಪಾಕ್ ದೇಶದ ರಾಜಕೀಯದಲ್ಲಿ ಹೊಸ ತಿರುವು
ಇಸ್ಲಾಮಾಬಾದ್‌ , ಭಾನುವಾರ, 18 ಮೇ 2014 (13:20 IST)
ಭಾರತದಲ್ಲಿ ರಚನೆಯಾಗಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರದೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ವಹಿಸಬೇಕು ಎಂದು ಪಾಕಿಸ್ತಾನದ ಪತ್ರಿಕೆ  ‘ದಿ ನ್ಯೂಸ್‌’ ಪಾಕ್‌ ಸರ್ಕಾರಕ್ಕೆ ಸಲಹೆ ಮಾಡಿದೆ.
 
‘ಮೋದಿ ಯಾವುದೇ ವಿವಾದಕ್ಕೆ ಅವಕಾಶ ನೀಡದೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವುದರಿಂದ ಅವರು ಜಾಗತಿಕ ಮಟ್ಟದಲ್ಲಿ ಪ್ರಭಾವ ಬೀರಲಿದ್ದಾರೆ. ಆದರೆ ನಾವು ಅವರೊಂದಿಗೆ ವ್ಯವಹರಿಸುವಾಗ ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಬೇಕು’ ಎಂದು ಪತ್ರಿಕೆಯು ತನ್ನ ಸಂಪಾದಕೀಯದಲ್ಲಿ ಬರೆದಿದೆ.
 
ಪಾಕಿಸ್ತಾನವು ಯಾವುದೇ ಒತ್ತಡಕ್ಕೆ  ಬಲಿಯಾಗಬಾರದು ಅಥವಾ ತನ್ನ ಹಿತಾಸಕ್ತಿಗಳ ವಿಚಾರಗಳಲ್ಲಿ ರಾಜಿ ಮಾಡಿಕೊಳ್ಳಬಾರದು. ಇದೇ ಸಂದರ್ಭದಲ್ಲಿ ವಿನಾ ಕಾರಣ ಆಕ್ರೋಶಕ್ಕೂ ಒಳಗಾಗಬಾರದು ಎಂದೂ ಅದು ಅಭಿಪ್ರಾಯಪಟ್ಟಿದೆ. ‘ಮೋದಿ ಅವರ ಚುನಾವಣಾ ಪ್ರಚಾರವು ಪಾಕಿಸ್ತಾನಕ್ಕೆ ಎಚ್ಚರಿಕೆ ಗಂಟೆ’ ಎಂದು ಪತ್ರಿಕೆ ಹೇಳಿದೆ.
 
ಆದರೆ, ಗೆಲುವಿನ ಸಮೀಪಕ್ಕೆ ಬಂದಾಗ ಮೋದಿ ಅವರ ಮಾತಿನಲ್ಲಿ ಮೃದುತ್ವ ಇತ್ತು ಮತ್ತು ರಾಜಕೀಯವಾಗಿ ತಪ್ಪುಗಳನ್ನು ತಿದ್ದಿಕೊಂಡಿದ್ದರು ಎಂದೂ ಪತ್ರಿಕೆ ಬರೆದಿದೆ.
 
‘ಪಾಕಿಸ್ತಾನ ಕುರಿತಂತೆ ಮೋದಿ ಅವರ ಕೊನೆಯ ಹೇಳಿಕೆ: ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲದಿರುವುದರಿಂದ ಅದು ಹೇಗೆ ನಮ್ಮೊಂದಿಗೆ ವ್ಯವಹರಿಸುತ್ತದೆಯೋ ಆ ರೀತಿಯಲ್ಲಿ ನಾವೂ ವ್ಯವಹರಿಸುತ್ತೇವೆ’ ಎಂದು ಪತ್ರಿಕೆ ಹೇಳಿದೆ. ಇದು ಸ್ವಾಗತಾರ್ಹ ಬದಲಾವಣೆಯಾಗಿದ್ದರೂ, ಬಿಜೆಪಿಯ ಚರಿತ್ರಾರ್ಹ ಜಯದ ಪರಿಣಾಮವನ್ನು ಪಾಕಿಸ್ತಾನ ಪರಿಗಣಿಸಬೇಕು ಎಂದೂ ಸಂಪಾದಕೀಯ ಅಭಿಪ್ರಾಯ ಪಟ್ಟಿದೆ.
 
.

Share this Story:

Follow Webdunia kannada