Select Your Language

Notifications

webdunia
webdunia
webdunia
webdunia

ಅಂತ್ಯಸಂಸ್ಕಾರ ಮಾಡಬೇಕೆಂದುಕೊಂಡಾಗ ಸತ್ತವನೇ ಎದುರು ನಿಂತಿದ್ದ!

ಅಂತ್ಯಸಂಸ್ಕಾರ ಮಾಡಬೇಕೆಂದುಕೊಂಡಾಗ ಸತ್ತವನೇ ಎದುರು ನಿಂತಿದ್ದ!
ಹರಾರೆ , ಗುರುವಾರ, 3 ಸೆಪ್ಟಂಬರ್ 2015 (12:48 IST)
ಜಿಂಬಾಂಬ್ವೆಯ ಹರಾರೆಯ ನಿವಾಸಿ ವ್ಯಕ್ತಿಯೊಬ್ಬನ ಜೀವನದಲ್ಲಿ ಈ ಹಿಂದೆ ಯಾರ ಜತೆಯೂ ನಡೆಯದ ಘಟನೆ ನಡೆಯಿತು. ಸಂಕಷ್ಟಕ್ಕೆ ಸಿಲುಕಿದ್ದ ಆತ ಎರಡು ದಿನಗಳ ಬಳಿಕ ಮನೆಗೆ ಮರಳಿದಾಗ ತನ್ನದೇ ಅಂತಿಮ ಸಂಸ್ಕಾರಕ್ಕೆ ತಯಾರಿ ನಡೆಸುತ್ತಿರುವುದನ್ನು ನೋಡಿ ದಂಗಾಗಿ ಹೋಗಿದ್ದಾನೆ. ಆದರೆ ಸತ್ತನೆಂದುಕೊಂಡಿದ್ದವ ಕಣ್ಣೆದುರು ನಿಂತಿದ್ದನ್ನು ನೋಡಿದ ಪರಿವಾರದವರ ಕಣ್ಣೀರು ಪನ್ನೀರಾಗಿ ಬದಲಾಗಿದೆ. 

ಅಷ್ಟಕ್ಕೂ ನಡೆದಿದ್ದಾದರೂ ಏನಂತೀರಾ? ಮುಂದೆ ಓದಿ... ಐರಿಶ್ ಮೂಲದ ಕಿಂಗ್‌‌‌ವಿಮ್ ಎಂಬಾತ ಕೆಲಸ ಮುಗಿಸಿ ಕಾರಿನಲ್ಲಿ ಹಿಂತಿರುಗುತ್ತಿದ್ದಾಗ ವ್ಯಕ್ತಿಯೊಬ್ಬ ಲಿಫ್ಟ್ ಕೇಳಿದ್ದಾನೆ. ದಾರಿ ಮಧ್ಯೆ ವಾಂತಿ ಬರುವಂತೆ ನಾಟಕವಾಡಿದ ಅಪರಿಚಿತನನ್ನು ಕಾರಿಂದ ಕೆಳಗಿಳಿಸಿ ಸಹಾಯ ಮಾಡಲು ಮುಂದಾದ ಕಿಂಗ್‌ವಿಮ್ ಮೇಲೆ ದಾಳಿ ಹಲ್ಲೆ ಕಾರ್, ಪರ್ಸ್‌‌‌, ಮೊಬೈಲ್ ಫೋನ್ ಸೇರಿದಂತೆ ಆತನ ಬಳಿ ಇದ್ದ ಎಲ್ಲ ವಸ್ತುಗಳನ್ನು ದೋಚಿಕೊಂಡು ಆತ ಪರಾರಿಯಾಗಿದ್ದಾನೆ. ಪ್ರಜ್ಞೆ ಕಳೆದುಕೊಂಡಿದ್ದ ಕಿಂಗ್‌ವಿಮ್ ಎದ್ದು ಕುಳಿತು ಅಪರಿಚಿತನೊಬ್ಬನಿಂದ ಡ್ರಾಪ್ ಪಡೆದುಕೊಳ್ಳಲು ಯಶಸ್ವಿಯಾಗಿದ್ದಾನೆ. ಆದರೆ ಆತ ಡ್ರಾಪ್ ನೀಡಿದ್ದು ಆತನ ಊರಿನಿಂದ ಅತಿ ದೂರದಲ್ಲಿರುವ ಪ್ರದೇಶವೊಂದರಲ್ಲಿ. ಆ ಊರ ಜನರಿಗೆ ತನ್ನ ಪರಿಸ್ಥಿತಿ ಹೇಳಿಕೊಂಡಾಗ ಅವರು ಆತನಿಗೆ ತೊಡಲು ಬಟ್ಟೆ ಮತ್ತು ಸ್ವಲ್ಪ ಹಣವನ್ನು ನೀಡಿದ್ದಾರೆ. ಅಂತೂ ಘಟನೆ ನಡೆದ ನಾಲ್ಕು ದಿನಗಳ ಬಳಿಕ ಆತ ತನ್ನ ಮನೆಗೆ ತಲುಪಿದ್ದಾನೆ. 
 
ಆದರೆ ಆತ ಮನೆಯ ಹತ್ತಿರ ಬರುತ್ತಿದ್ದಂತೆ ತನ್ನ ಮನೆಯ ಸುತ್ತ ಸಾವಿರಾರು ಜನರು ನೆರೆದಿದ್ದುದನ್ನು ನೋಡಿ ಏನೋ ಅಪಾಯವಾಗಿದೆ ಎಂದು ಕಂಗಾಲಾಗಿದ್ದಾನೆ. ಮುಂದೆ ಬಂದು ನೋಡಲಾಗಿ ಪತ್ನಿ ಹಾಗೂ ಮಗ ಈತನ ಪೋಟೋ ಮುಂದೆ ಕುಳಿತು ಎದೆ ಬಡಿದುಕೊಂಡು ಅಳುತ್ತಿದ್ದರು. 
 
ಅಷ್ಟೇ ಅಲ್ಲದೇ ಆತನ ಭಾವಚಿತ್ರ ತೂಗಿ ಹಾಕಲಾದ ಶವ ಪೆಟ್ಟಿಗೆಯೊಂದು ಅವರ ಮುಂದಿತ್ತು. ಅದರಲ್ಲಿ ಶವ ಕೂಡ ಇತ್ತು.
 
ಇದೆಲ್ಲವನ್ನೂ ನೋಡಿ ಆಶ್ಚರ್ಯಗೊಂಡ ಕಿಂಗ್‌‌ವಿಮ್‌‌ ತನ್ನದೇ ಅಂತ್ಯಸಂಸ್ಕಾರಕ್ಕೆ ತಯಾರಿ ನಡೆಸಲಾಗುತ್ತಿದೆ ಎಂದು ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ. ನಿಧಾನವಾಗಿ ಆತ ತನ್ನ ಪತ್ನಿ ಮತ್ತು ಮಗನನ್ನು ಸ್ಪರ್ಶಿಸಿದ್ದಾನೆ. ಅಳುತ್ತಿದ್ದವರು ತಲೆ ಎತ್ತಿ ನೋಡಿದಾಗ ಕಂಡ ದೃಶ್ಯ ಸಾವಿನ ಮನೆಯ ವಾತಾವರಣವನ್ನು ಹಬ್ಬದ ವಾತಾವರಣಕ್ಕೆ ಬದಲಾಯಿಸಿದೆ. ಕುಟುಂಬದ ಸದಸ್ಯರು ಕಿಂಗ್‌ವಿಮ್‌ನನ್ನು ತಬ್ಬಿಕೊಂಡು ಕುಣಿದಾಡಿದ್ದಾರೆ. 
 
ಅಷ್ಟಕ್ಕೂ ಸತ್ತವನು ಹೇಗೆ ಎದ್ದು ಬಂದ ಎಂದು ತನಿಖೆ ನಡೆಸಿದ ಪೊಲೀಸರು ಬಿಚ್ಚಿಟ್ಟ ಸತ್ಯವೇನೆಂದರೆ ಕಿಂಗ್‌‌ವಿಮ್‌‌ನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಕಳ್ಳ  ಅತೀ ವೇಗವಾಗಿ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾನೆ. ಅಪಘಾತ ಎಷ್ಟು ಘೋರವಾಗಿತ್ತೆಂದರೆ ಶವದ ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಶವವನ್ನು ಪರಿಶೀಲಿಸಿದಾಗ ಸಿಕ್ಕ ಗುರುತಿನ ಚೀಟಿ  ಕಿಂಗ್‌‌ವಿಮ್‌ನದಾಗಿತ್ತು . ತಕ್ಷಣ ಆತನ ಮನೆಯವರಿಗೆ ಸುದ್ದಿ ಮುಟ್ಟಿಸಿದ ಪೊಲೀಸರು ಶವವನ್ನು ಆತನ ಮನೆಗೆ ತಲುಪಿಸಿದ್ದಾರೆ.
 
ಮನೆಯ ಯಜಮಾನನ ಅಚಾನಕ್ ಸಾವಿನಿಂದ ಶೋಕತಪ್ತರಾದ ಕುಟುಂಬದ ಸದಸ್ಯರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಆತನೇ ಕಣ್ಣಮುಂದೆ ಬಂದು ನಿಂತಿದ್ದರಿಂದ ಎಲ್ಲವೂ ಸುಖಾಂತ್ಯ ಕಂಡಿದೆ. 
 
ಈ ಘಟನೆ ಸ್ವಲ್ಪ ಕಾಲ ಹಳೆಯದಾಗಿದ್ದು ಕಿಂಗ್‌ವಿಮ್ ತನ್ನ ಜೀವನದಲ್ಲಾದ ಈ ವಿಲಕ್ಷಣ ಘಟನೆಯ ಕುರಿತು ಸಾಮಾಜಿಕ ಜಾಲತಾಣದಲ್ಲೀಗ ಹಂಚಿಕೊಂಡಿದ್ದಾನೆ. 

Share this Story:

Follow Webdunia kannada