Select Your Language

Notifications

webdunia
webdunia
webdunia
webdunia

ಸಾಯಲೆಂದು ಬೋನಿಗೆ ಬಿದ್ದವನ ಜತೆ ಸಿಂಹಗಳ ಆಟ

ಸಾಯಲೆಂದು ಬೋನಿಗೆ ಬಿದ್ದವನ ಜತೆ ಸಿಂಹಗಳ ಆಟ
ಬಾರ್ಸಿಲೋನಿಯಾ , ಮಂಗಳವಾರ, 9 ಡಿಸೆಂಬರ್ 2014 (11:56 IST)
ಕೆಲವು ದಿನಗಳ ಹಿಂದೆ ದೆಹಲಿಯಲ್ಲೊಬ್ಬ ಯುವಕ ಹುಲಿಯ ಬೋನಿಗೆ ಬಿದ್ದು ಜೀವತೆತ್ತಿದ್ದು ಇನ್ನೂ ಎಲ್ಲರ ಮನಸ್ಸಿನಲ್ಲಿ  ಅಚ್ಚೊತ್ತಿದೆ. ಅಂತಹದೇ ಘಟನೆಯೊಂದು ಸ್ಪೇನ್‌ನಲ್ಲಿ ಸಹ ನಡೆದಿದೆ. ಆದರೆ ಪಂಜರದೊಳಕ್ಕೆ ಬಿದ್ದವನು ಜೀವಂತ ಹೊರಬಂದಿರುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. 

ನಡೆದಿರುವುದು ಇಷ್ಟೇ.. ಮಿಲಿಟರಿ ಸಮವಸ್ತ್ರದ ವೇಷಧಾರಿಯೊಬ್ಬ ಸಿಂಹವಿರುವ ಆವರಣದೊಳಕ್ಕೆ ಹಾರಿದ್ದಾನೆ. ಅಲ್ಲಿ ನೆರೆದಿದ್ದ ಜನರು ಆತ ಜೀವಂತ ಮರಳಿ ಬರಲಾರ ಎಂದು ಭಯ, ಆತಂಕ ಮತ್ತು ಕುತೂಹಲದಿಂದ ನೋಡತೊಡಗಿದ್ದಾರೆ. ಕೆಳಕ್ಕೆ ಬಿದ್ದ ಆತ ಮತ್ತೆ ಬೇಲಿ ಹತ್ತಲು ಪ್ರಯತ್ನಿಸಿದ್ದಾನೆ. ಆದರೆ ಅದಾಗಲೇ ಅಲ್ಲಿಗೆ ಬಂದ ಸಿಂಹಿಣಿಯೊಂದು ಆತನ ಕಾಲು ಹಿಡಿದೆಳೆದು ಹೊಂಡದೊಳಗೆ ಬೀಳಿಸಿದೆ. ಇನ್ನೊಂದು ಸಿಂಹ ಆತನ ಬ್ಯಾಗ್ ತೆಗೆದುಕೊಂಡು ಅಲ್ಲಿಂದ ಓಡಿದರೆ, ಮತ್ತೊಂದು ಸಿಂಹ ಆತ ಆಡುವ ವಸ್ತು ಎಂದುಕೊಂಡು ಆಡಲು ಪ್ರಾರಂಭಿಸಿದೆ . ನಂತರ ಆತನನ್ನು ಎಳೆದುಕೊಂಡು ಸುರಂಗದತ್ತ ಸಾಗಿದೆ.  ತಕ್ಷಣ ಉಳಿದೆರಡು ಸಿಂಹಗಳೂ ಸೇರಿಕೊಂಡಿವೆ. ಮೂರು ಸಿಂಹಗಳು ಆತನಿಗೆ ಸ್ವಲ್ಪಮಟ್ಟಿಗೆ ಗಾಯ ಮಾಡಿವೆ. ನಂತರ ಅವನೊಂದು ಆಡುವ ವಸ್ತು ಎಂಬಂತೆ ಆತನ ಜತೆ ಆಡತೊಡಗಿವೆ.ಒಟ್ಟು 30 ನಿಮಿಷಗಳ ಕಾಲ ಸಿಂಹಗಳು ಆತನ ಜತೆ ಆಡಿವೆ.
 
ಸುದ್ದಿ ತಿಳಿಯುತ್ತಿದ್ದಂತೆ ಪ್ರಾಣಿಸಂಗ್ರಹಾಲಯದ ಸಿಬ್ಬಂದಿ ರಕ್ಷಣೆಗೆ ತೀವ್ರ ಪ್ರಯತ್ನಪಟ್ಟಿದ್ದಾರೆ. ಸಿಂಹಗಳ ಮೇಲೆ ನೀರು ಹಾಯಿಸಿ ಹೆದರಿಸಲು ಪ್ರಯತ್ನಿಸಿದ್ದಾರೆ.
 
ಕೊನೆಗೂ ಆತನನ್ನು ರಕ್ಷಿಸಲಾಗಿದ್ದು ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
 
13 ವರ್ಷಗಳ ಕಾಲ ಸಿವಿಲ್ ಗಾರ್ಡ್ ಆಗಿ ಕೆಲಸ ಮಾಡಿದ್ದ ಆತ  ಈ ವರ್ಷದ ಪ್ರಾರಂಭದಿಂದ ದೀರ್ಘ ರಜೆಯಲ್ಲಿದ್ದಾನೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ  ಇದೇ ವರ್ಷ ಆತನ ಪತ್ನಿ ವಿಚ್ಛೇದನ ಪಡೆದು ದೂರವಾದಳು. ಮಕ್ಕಳ ಪಾಲನೆ ಜವಾಬ್ದಾರಿಯನ್ನು ಸಹ ಆತ ಕಳೆದುಕೊಂಡ. ತಾಯಿಯೂ ಸಹ ಮರಣವನ್ನಪ್ಪಿದಳು. ಈ ಎಲ್ಲದರಿಂದ ನೊಂದಿದ್ದ ಆತ ಹಾದಿಬೀದಿಯಲ್ಲಿ ರಾತ್ರಿ ಕಳೆಯುತ್ತಿದ್ದ ಎಂದು ತಿಳಿದು ಬಂದಿದೆ.  ಇದೇ ಕಾರಣಕ್ಕೆ ಆತ ಸಿಂಹದ ಬಾಯಿಗೆ ಆಹಾರವಾಗಲು ಹೊರಟನೋ ಅಥವಾ ಬೇರೆ ಕಾರಣಗಳಿವೆಯೋ ಎಂದು ತಿಳಿದು ಬಂದಿಲ್ಲ.

Share this Story:

Follow Webdunia kannada