ನವದೆಹಲಿ(ಆ.09): ಭಾರತದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದ ಬೆನ್ನಲ್ಲೇ ಬ್ರಿಟನ್ ಸೇರಿದಂತೆ ಹಲವು ದೇಶಗಳು ಭಾರತದ ನಾಗರಿಕರ ಮೇಲೆ ಹೇರಿದ್ದ ಪ್ರಯಾಣದ ನಿರ್ಬಂಧಗಳನ್ನು ತೆರವುಗೊಳಿಸಿದೆ. ಇದರ ಬೆನ್ನಲ್ಲೇ, ವಿಮಾನಯಾನ ಕಂಪನಿಗಳು ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿ ಏರಿಸಿರುವುದು ಟೀಕೆಗೆ ಗುರಿಯಾಗಿದೆ.
ಉದಾಹರಣೆಗೆ ದೆಹಲಿ ಮತ್ತು ಲಂಡನ್ ನಡುವಣ ಪ್ರಯಾಣದ ಎಕಾನಮಿ ಕ್ಲಾಸ್ನ ಟಿಕೆಟ್ ದರವನ್ನು ಬ್ರಿಟಿಷ್ ಏರ್ವೇಸ್ ಭರ್ಜರಿ 3.95 ಲಕ್ಷ ರು.ಗೆ ನಿಗದಿಪಡಿಸಿದೆ. ಈ ಕುರಿತು ಸ್ವತಃ ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಸಂಜೀವ್ ಗುಪ್ತಾ ಟ್ವೀಟ್ ಮಾಡಿದ್ದಾರೆ. ವಿದ್ಯಾರ್ಥಿಗಳು ಕಾಲೇಜು ನೇಮಕಾತಿಗಾಗಿ ವಿದೇಶಕ್ಕೆ ಪ್ರಯಾಣ ಮಾಡುತ್ತಿದ್ದಾರೆ. ಅವರಿಗೆ ಈ ದರ ದುಬಾರಿಯಾಗುತ್ತದೆ. ಈ ದುಬಾರಿ ದರವನ್ನು ನಾಗರಿಕ ವಿಮಾನಯಾನ ಸಚಿವಾಲದ ಗಮನಕ್ಕೆ ತರಲಾಗಿದೆ ಎಂದು ಅವರು ಹೇಳಿದ್ದಾರೆ.
ಅದರ ಬೆನ್ನಲ್ಲೇ ನಾಗರಿಕ ವಿಮಾನಯಾನ ಸಚಿವಾಲಯವು, ವಿವಿಧ ವಿಮಾನಯಾನ ಕಂಪನಿಗಳಿಂದ ಟಿಕೆಟ್ ದರದ ಬಗ್ಗೆ ಸ್ಪಷ್ಟನೆ ಕೇಳಿದೆ. ಬ್ರಿಟನ್ ಮಾತ್ರವಲ್ಲದೆ ಇತರೆ ಹಲವು ದೇಶಗಳ ವಿಮಾನಯಾನ ಸಂಸ್ಥೆಗಳು ಕೂಡಾ ಕಳೆದೊಂದು ತಿಂಗಳಿನಿಂದ ಟಿಕೆಟ್ ದರವನ್ನು ಭಾರೀ ಪ್ರಮಾಣದಲ್ಲಿಲ ಹೆಚ್ಚಿಸಿವೆ ಎಂದು ಈಸ್ಮೈ ಟ್ರಿಪ್ ಹೇಳಿದೆ. ಕಳೆದ ಆಗಸ್ಟ್ನಿಂದ ದೆಹಲಿಯಿಂದ ಅಮೆರಿಕಕ್ಕೆ ಹೋಗುವ ವಿಮಾನದರ 69 ಸಾವಿರದಿಂದ 87 ಸಾವಿರಕ್ಕೆ ಏರಿಕೆಯಾಗಿದೆ. ಮುಂಬೈನಿಂದ ಮಾಸ್ಕೋಗೆ 43000ದಿಂದ 85000ಕ್ಕೆ ಏರಿದೆ