ಆರ್ಥಿಕ ಅಪರಾಧಿಗಳಿಗೆ ಸುರಕ್ಷಿತ ಸ್ವರ್ಗ ಕಲ್ಪಿಸುವುದನ್ನು ನಿವಾರಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ 20 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿದರು. ಪರಿಣಾಮಕಾರಿ ವಿತ್ತೀಯ ಆಡಳಿತ ನಿರ್ವಹಣೆಗೆ ಭ್ರಷ್ಟರ ವಿರುದ್ಧ ಕಾರ್ಯೋನ್ಮುಖರಾಗುವ ಪೂರ್ಣ ಬದ್ಧತೆ ಅಗತ್ಯವಿರುತ್ತದೆ ಎಂದು ಪ್ರಧಾನಿ ಸ್ಪಷ್ಟಪಡಿಸಿದರು.
ಭ್ರಷ್ಟಾಚಾರ, ಕಪ್ಪು ಹಣ ಮತ್ತು ತೆರಿಗೆ ವಂಚನೆ ವಿರುದ್ಧ ಹೋರಾಟವು ಪರಿಣಾಮಕಾರಿ ಹಣಕಾಸು ಆಡಳಿತಕ್ಕೆ ಮುಖ್ಯವಾಗಿದೆ ಎಂದು ಚೀನಾನಗರದಲ್ಲಿ ಜಿ 20 ಶೃಂಗಸಭೆಯ ಎರಡನೇ ದಿನ ಪ್ರಧಾನಿ ಹೇಳಿದರು. ಇದನ್ನು ಸಾಧಿಸಲು ಆರ್ಥಿಕ ಅಪರಾಧಿಗಳಿಗೆ ಸುರಕ್ಷಿತ ಸ್ವರ್ಗ ನಿವಾರಿಸಬೇಕು, ಹಣಕಾಸು ಅಕ್ರಮವೆಸಗುವವರನ್ನು ಗುರುತಿಸಿ ಬೇಷರತ್ತಾಗಿ ಗಡೀಪಾರು ಮಾಡಬೇಕು ಮತ್ತು ಭ್ರಷ್ಟರ ಕೃತ್ಯಗಳನ್ನು ಮುಚ್ಚಿ ಹಾಕುವ ವಿಪರೀತ ಬ್ಯಾಂಕಿಂಗ್ ಗೋಪ್ಯತೆಗಳನ್ನು ಹಾಗೂ ಸಂಕೀರ್ಣ ಅಂತಾರಾಷ್ಟ್ರೀಯ ನಿಯಂತ್ರಣಗಳನ್ನು ಮುರಿಯಬೇಕು ಎಂದು ಪ್ರಧಾನಿ ಪ್ರತಿಪಾದಿಸಿದರು.
ಸ್ಥಿರವಾದ ಜಾಗತಿಕ ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಯು ಬೆಳವಣಿಗೆಗೆ ನಿರ್ಣಾಯಕವಾಗಿದ್ದು, ಇದು ಸಮಗ್ರ ಮತ್ತು ಸುಸ್ಥಿರ ಬೆಳವಣಿಗೆಗೆ ಉತ್ತೇಜಿಸುತ್ತದೆ ಎಂದು ಪ್ರಧಾನಿ ಪ್ರತಿಪಾದಿಸಿದರು.