ವಿದ್ಯಾಭ್ಯಾಸ, ವೃತ್ತಿ ಜೀವನದಲ್ಲಿ ಏನಾದರೂ ಸಾಧಿಸುವ ಕನಸಿನ ಹಿಂದೆ ಬಿದ್ದಿರುವ ಇಂದಿನ ಯುವ ಜನಾಂಗ 30, 35 ಆದರೂ ಮದುವೆಯಾಗುವುದಕ್ಕೆ ಹಿಂದೇಟು ಹಾಕುತ್ತಾರೆ. ಆದರೆ ಅರ್ಜೆಂಟಿನಾದಲ್ಲಿ 29 ವರ್ಷದ ಮಹಿಳೆಯೊರ್ವರು ಅಜ್ಜಿಯಾಗಿದ್ದಾರೆ. ಆಕೆಯ 14 ವರ್ಷದ ಮಗ ತಾನು ತಂದೆಯಾಗಿ, ಅಮ್ಮನಿಗೆ ಅಜ್ಜಿ ಸ್ಥಾನಕ್ಕೆ ಬಡ್ತಿ ನೀಡಿದ್ದಾನೆ.
29 ವರ್ಷಕ್ಕೆ ಅಜ್ಜಿ ಎನಿಸಿಕೊಂಡಿರುವ ಅವರು ಯಾವ ವಯಸ್ಸಿಗೆ ತಾಯಿಯಾಗಿದ್ದರು. ಯಾವಾಗ ಮದುವೆಯಾಗಿದ್ದಾರೆ. ಎಷ್ಟು ಮಕ್ಕಳನ್ನು ಹೆತ್ತಿದ್ದಾರೆ ಎಂಬ ಪ್ರಶ್ನೆಗಳು ನಿಮ್ಮನ್ನು ಕಾಡುತ್ತಿವೆಯೇ? ಹಾಗಾದರೆ ಮುಂದೆ ಓದಿ.
ಅರ್ಜೆಂಟಿನಾದ ಮೆಂಡೋಜ ರಾಜ್ಯದ ಲೂಸೀ ಡೆಸಿರೀ ಎಂಬ ಮಹಿಳೆ ತನ್ನ ಮಗ 14 ವರ್ಷಕ್ಕೇ ತಂದೆಯಾಗಿದ್ದಾನೆ ಎಂದು ಮಾಧ್ಯಮದ ಬಳಿ ಹೇಳಿಕೊಂಡಿದ್ದಾಳೆ. 'ನನ್ನ ಮಗ ಈಗ ಹೈಸ್ಕೂಲ್ ಓದುತ್ತಿದ್ದು, ಕೌಟುಂಬಿಕ ಮೌಲ್ಯಗಳನ್ನು ಹೊಂದಿರುವ ಆತ ತನ್ನ ಮಗನನ್ನು ನೋಡಿಕೊಳ್ಳುತ್ತಾನೆ. ವಯಸ್ಕ ತಂದೆಯರೇ ಮಕ್ಕಳ ಜವಾಬ್ದಾರಿಯನ್ನು ಹೊತ್ತುಕೊಳ್ಳದೆ ಕಂದಮ್ಮಗಳನ್ನು ಅನಾಥರನ್ನಾಗಿಸುತ್ತಾರೆ. ಆದರೆ ನನ್ನ ಮಗ ಹಾಗಲ್ಲ', ಎಂದು ಮಗನ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾಳೆ.
ತನ್ನ ಮಗ ಹಾಗೂ ಮೊಮ್ಮಗು ಮತ್ತು ಮಗುವಿನ ತಾಯಿಯ ಸಂಬಂಧದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ. ವಿವಾಹವಾಗುವಂತೆ ಅಥವಾ ಜೊತೆಯಲ್ಲಿರುವಂತೆ ಅವರನ್ನು ಒತ್ತಾಯಿಸುವುದಿಲ್ಲ ಎಂದು ಹೇಳುವ ಡೇಸಿರಿ ಹದಿಹರೆಯದ ವಯಸ್ಸಿಗೆ ತಂದೆಯಾಗದಂತೆ ತನ್ನ ಮಗನಿಗೆ ಸಲಹೆ ನೀಡಿದ್ದೆ. ಆದರೆ ಈಗ ಏನೂ ಮಾಡುವ ಹಾಗಿಲ್ಲ. ಹದಿಹರೆಯದ ವಯಸ್ಸಿನಲ್ಲಿ ಇಂತಹ ಜವಾಬ್ದಾರಿಯನ್ನು ಹೊರುವುದು ತುಂಬಾ ಕಷ್ಟ. ಆತನಿಗೆ ಎಲ್ಲ ರೀತಿಯಲ್ಲಿ ಸಹಕಾರ ನೀಡುತ್ತೇನೆ ಎನ್ನುತ್ತಾಳೆ ಅತಿ ಚಿಕ್ಕ ವಯಸ್ಸಿನ ಅಜ್ಜಿ ಡೆಸಿರೀ ನಗುತ್ತ.