Select Your Language

Notifications

webdunia
webdunia
webdunia
webdunia

ಹೈಟಿ ರಕ್ಷಣಾ ಕಾರ್ಯಕ್ಕೆ ತೆರೆ; ಸತ್ತವರು 1,10,000

ಹೈಟಿ ರಕ್ಷಣಾ ಕಾರ್ಯಕ್ಕೆ ತೆರೆ; ಸತ್ತವರು 1,10,000
ಪೋರ್ಟ್ ಅವ್ ಪ್ರಿನ್ಸ್ , ಶನಿವಾರ, 23 ಜನವರಿ 2010 (17:35 IST)
ಇತ್ತೀಚೆಗಷ್ಟೇ ಹೈಟಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ರಕ್ಷಣಾ ಕಾರ್ಯಗಳು ಮುಕ್ತಾಯಗೊಂಡಿದೆ ಎಂದು ಸರಕಾರ ಘೋಷಿಸಿದೆ. ಅದೇ ಹೊತ್ತಿಗೆ ದುರ್ಘಟನೆಯಿಂದಾಗಿ ಸತ್ತವರ ಸಂಖ್ಯೆ 1,10,000 ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ತಿಳಿಸಿದೆ.

ಜನವರಿ 12ರ ಮಂಗಳವಾರ ಸಂಭವಿಸಿದ 7.0 ರಿಕ್ಟರ್ ಮಾಪನದಲ್ಲಿ ತೋರಿಸಿದ ಭೂಕಂಪದ ಸಂತ್ರಸ್ತರ ಹುಡುಕಾಟ ಮತ್ತು ರಕ್ಷಣಾ ಕಾರ್ಯಗಳು ಸಂಪೂರ್ಣಗೊಂಡಿವೆ ಎಂದು ಸರಕಾರ ಹೇಳಿದೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಶೋಧ ಮತ್ತು ರಕ್ಷಣಾ ತಂಡಗಳು 132 ಮಂದಿಯನ್ನು ಅವಶೇಷಗಳಡಿಯಿಂದ ಜೀವಂತವಾಗಿ ರಕ್ಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭೂಕಂಪದಲ್ಲಿ ಸತ್ತವರ ಅಧಿಕೃತ ಮಾಹಿತಿಗಳನ್ನು ಪ್ರಕಟಿಸಿರುವ ಹೈಟಿ ಆಂತರಿಕ ಸಚಿವಾಲಯವು 1,11,499 ಜನ ಸತ್ತಿರುವುದನ್ನು ಖಚಿತಪಡಿಸಿದೆ. ಇದಕ್ಕೂ ಮೊದಲು 75,000 ಮಂದಿ ಸತ್ತಿರಬಹುದು ಎಂದು ಸರಕಾರ ಅಂದಾಜಿಸಿತ್ತು.

ಭೂಕಂಪದಲ್ಲಿ 1,93,891 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. 6,09,000ಗೂ ಹೆಚ್ಚು ಸಂತ್ರಸ್ತರು 500ರಷ್ಟು ನಿರಾಶ್ರಿತ ಶಿಬಿರಗಳಲ್ಲಿ ಪ್ರಸಕ್ತ ವಾಸಿಸುತ್ತಿದ್ದಾರೆ ಎಂದೂ ಸರಕಾರ ಹೇಳಿದೆ.

ಈ ನಡುವೆ ಅಕ್ಕಿ ಅಪಹರಿಸಲು ಯತ್ನಿಸುತ್ತಿದ್ದ ಇಬ್ಬರ ಮೇಲೆ ಹೈಟಿ ಪೊಲೀಸರು ಗುಂಡು ಹಾರಿಸಿದ್ದು, ಅವರಲ್ಲೊಬ್ಬ ಸಾವನ್ನಪ್ಪಿದ್ದಾನೆ. ಐದು ಗೋಣಿಚೀಲಗಳಲ್ಲಿ ಅಕ್ಕಿ ಅಪಹರಣಕ್ಕೆ ಅವರು ಯತ್ನಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಐಫೋನ್ ಹೊಂದಿದ್ದ ಅಮೆರಿಕಾದ ಚಿತ್ರ ನಿರ್ಮಾಪಕರೊಬ್ಬರು ಅದರ ಸಹಾಯದಿಂದ ಬದುಕುಳಿದ ಘಟನೆ ವರದಿಯಾಗಿದೆ.

ಡಾನ್ ವೂಲೀ ಎಂಬವರು ಭೂಕಂಪದಿಂದಾಗಿ ಕಟ್ಟಡದೊಳಗೆ ಸಿಕ್ಕಿ ಬಿದ್ದಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರು 66 ಗಂಟೆಗಳಿಗೂ ಹೆಚ್ಚು ಕಾಲ ಅವಶೇಷಗಳೊಳಗೆ ಉಳಿಯಬೇಕಾಗಿತ್ತು. ಈ ಸಂದರ್ಭದಲ್ಲಿ ಐಫೋನ್‌ನ ವೈದ್ಯಕೀಯ ಸಾಫ್ಟ್‌ವೇರ್ ಸಹಾಯದಿಂದ ಅವರು ತನ್ನ ದೇಹಕ್ಕೆ ಅಗತ್ಯ ಶುಶ್ರೂಷೆಗಳನ್ನು ಮಾಡಿಕೊಂಡಿದ್ದರು ಎಂದು ವರದಿಗಳು ತಿಳಿಸಿವೆ.

Share this Story:

Follow Webdunia kannada