ವಾಕಿಂಗ್ ಗೆ ಹೋಗುವಾಗ ಕೈಯಲ್ಲಿ ನಾಯಿಮರಿಯನ್ನು ಹಿಡಿದುಕೊಂಡು ಹೋಗುವುದು ದೊಡ್ಡ ದೊಡ್ಡ ನಗರಗಳಲ್ಲಿ ಒಂದು ಫ್ಯಾಷನ್. ಆದರೆ ಅಮೇರಿಕಾದ ನಿವಾಸಿಯೊಬ್ಬ ನಾಯಿಮರಿಯ ಬದಲಿಗೆ ಹುಲಿಯ ಜತೆ ಬೀದಿಗಿಳಿದ.
ಒಂದು ವಿಲಕ್ಷಣ ಘಟನೆಗೆ ಕಾರಣನಾದ ಅಮೇರಿಕಾದ ಮನುಷ್ಯನೊಬ್ಬ ಚಿಕಾಗೋ ಉಪನಗರದ ವಾಣಿಜ್ಯ ಪ್ರದೇಶದಲ್ಲಿ ಫೆಬ್ರವರಿ 15 ರಂದು ಹುಲಿ ಮರಿಯನ್ನು ಹಿಡಿದುಕೊಂಡು ಅಡ್ಡಾಡ ತೊಡಗಿದನಲ್ಲದೇ, ಆ ಕ್ರೂರ ಪ್ರಾಣಿಯ ಜತೆ ಒಂದು ಬಾರ್ ಒಳಗೆ ಹೊಕ್ಕಿದ. ಈ ಅನುಚಿತ ವರ್ತನೆಗಾಗಿ ಆತನ ಮೇಲೆ ಕೇಸ್ ದಾಖಲಿಸಲಾಗಿದೆ.
ಜಾನ್ ಬೆಸಿಲ್ ಎಂಬ ಆತ ಇಲಿನಾಯ್ಸ್ ನ ಲಾಕ್ಪೋರ್ಟ್ನ ಪ್ರದೇಶದ 'ಅಂಕಲ್ ರಿಚಿ ಬಾರ್' ಗೆ ಮಂಡಿಯೆತ್ತರದ ಮುದ್ದಾದ ಹುಲಿಮರಿಯ ಜತೆ ಬಂದ.
ಈ ಮೊದಲು ಸಹ ಅವನು ಈ ರೀತಿ ಮಾಡಿದ್ದ ಎಂದು ಸಿಎನ್ಎನ್ ನ ಅಂಗಸಂಸ್ಥೆ ಡಬ್ಲೂ ಬಿ ಬಿ ಎಮ್ ವರದಿ ಮಾಡಿದೆ.
ಆದರೆ ಪೊಲೀಸರಿಗೆ ಇದು ತಮಾಷೆ ಎನಿಸಲಿಲ್ಲ. ಅಪಾಯಕಾರಿ ಪ್ರಾಣಿಯನ್ನು ಸಾರ್ವಜನಿಕ ಪ್ರದೇಶದಲ್ಲಿ ತಂದಿದ್ದಕ್ಕಾಗಿ ಅವರು ಬೆಸಿಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಕೆಲವು ಜನರು ಕಾರಿನ ಮೇಲೆ ಕುಳಿತುಕೊಂಡು ಹುಲಿನಾ ಅದು? ಹುಲಿನಾ ಅದು? ಎಂದು ಕಿರುಚುತ್ತಿದ್ದುದು ಕಂಡು ಬಂತು. ಬಾರ್ ನಲ್ಲಿದ್ದ ಒಬ್ಬ ವ್ಯಕ್ತಿ ಮಾತ್ರ ವಿಡಿಯೋ ಚಿತ್ರೀಕರಣ ಮಾಡaಿಕೊಂಡ ಎಂದು ವರದಿ ತಿಳಿಸಿದೆ.
57 ವರ್ಷದ ಬೆಸಿಲ್ ಕಾಡು ಪ್ರಾಣಿಗಳ ಜತೆ ನಿಕಟತೆಯನ್ನು ಹೊಂದಿದ್ದು, ಕಾಡು ಪ್ರಾಣಿಗಳ ಟ್ರಸ್ಟ್ ನ್ನು ನಡೆಸುತ್ತಿದ್ದಾನೆ.
" ತಾನು 25 ವರ್ಷಗಳಿಂದ ಪ್ರಾಣಿಗಳ ಒಡನಾಟದಲ್ಲಿದ್ದೇನೆ" ಎಂದು ಪ್ರಾಣಿ ಸಂರಕ್ಷಣೆಗಾಗಿ ಆತ ನಡೆಸುತ್ತಿರುವ ವೆಬ್ ಸೈಟಿ ನಲ್ಲಿ ಹೇಳಿಕೊಂಡಿದ್ದಾನೆ.