Select Your Language

Notifications

webdunia
webdunia
webdunia
webdunia

ಸಾರ್ಕ್ ಶೃಂಗಸಭೆ; ಗುರುವಾರ ಸಿಂಗ್-ಗಿಲಾನಿ ಭೇಟಿ

ಸಾರ್ಕ್ ಶೃಂಗಸಭೆ; ಗುರುವಾರ ಸಿಂಗ್-ಗಿಲಾನಿ ಭೇಟಿ
ತಿಂಫು , ಬುಧವಾರ, 28 ಏಪ್ರಿಲ್ 2010 (15:44 IST)
ಭಾರತ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಪಾಕಿಸ್ತಾನ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಗುರುವಾರ ಇಲ್ಲಿ ಮಾತುಕತೆ ನಡೆಸಲಿದ್ದು, ಈ ಸಂದರ್ಭದಲ್ಲಿ ಮುಂಬೈ ಭಯೋತ್ಪಾದನಾ ದಾಳಿ ಪಿತೂರಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಪಾಕಿಸ್ತಾನ ವಿಫಲವಾಗುತ್ತಿರುವ ಬಗ್ಗೆ ಭಾರತ ತನ್ನ ಅಸಂತೃಪ್ತಿಯನ್ನು ವ್ಯಕ್ತಪಡಿಸಲಿದೆ. ಅಲ್ಲದೆ ಗಡಿಯಾಚೆಗಿನ ಭಯೋತ್ಪಾದಕ ಚಟುವಟಿಕೆಯನ್ನು ನಿಯಂತ್ರಿಸಲು ಮನವಿ ಮಾಡಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಕಳೆದ ವರ್ಷ ಜುಲೈನಲ್ಲಿ ಶರ್ಮ್-ಎಲ್-ಶೇಖ್‌ನಲ್ಲಿ ಭೇಟಿಯಾಗಿದ್ದ ಸಿಂಗ್-ಗಿಲಾನಿ ಸುದೀರ್ಘ ಮಾತುಕತೆ ನಡೆಸಿದ್ದರು. ಅದಾದ ನಂತರ ಇತ್ತೀಚೆಗೆ ವಾಷಿಂಗ್ಟನ್‌ನಲ್ಲಿ ನಡೆದ ಪರಮಾಣು ಸುರಕ್ಷತಾ ಶೃಂಗಸಭೆಯಲ್ಲಿ ಅಲ್ಪಾವಧಿಯ ಮಾತುಕತೆ ಕೈಗೊಂಡಿದ್ದರು.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಸಿಂಗ್-ಗಿಲಾನಿ ಭೇಟಿಯು ಗುರುವಾರ ಸಂಜೆಯ ಹೊತ್ತಿಗೆ ನಡೆಯಲಿದೆಯೆಂದು ಸರಕಾರಿ ಮೂಲಗಳು ತಿಳಿಸಿವೆ. ಆ ಮೂಲಕ ಪಾಕಿಸ್ತಾನ ಪ್ರಧಾನಿಯ ಜತೆ ಸಿಂಗ್‌ ಮಾತುಕತೆ ನಡೆಸಲಿದ್ದಾರೆಯೇ ಎಂಬುದರ ಬಗ್ಗೆ ಎದ್ದಿದ್ದ ಊಹಾಪೋಹಗಳಿಗೆ ತೆರೆಬಿದ್ದಿದೆ.

ಮಾತುಕತೆಯ ವೇಳೆ ಗಡಿಯಾಚೆಗಿನ ಉಗ್ರರ ಚಟುವಟಿಕೆಯ ಬಗ್ಗೆ ಭಾರತ ತನ್ನ ತೀವ್ರ ಕಳವಳ ವ್ಯಕ್ತಪಡಿಸಲಿದ್ದು, ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯುವಲ್ಲಿ ಪಾಕ್ ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬುದರ ಬಗ್ಗೆ ಅಸಂತೃಪ್ತಿ ವ್ಯಕ್ತಪಡಿಸಲಿದೆ.

ಅಲ್ಲದೆ ಮುಂಬೈ ದಾಳಿಗೆ ಸಂಬಂಧಿಸಿದಂತೆ ತನಿಖೆ ವರದಿ ಸಲ್ಲಿಸುವಂತೆ ಪಾಕ್‌ನಲ್ಲಿ ಭಾರತ ಪ್ರಧಾನಿ ಮನವಿ ಮಾಡುವ ಸಾಧ್ಯತೆಯಿದೆ.

ಭೂತಾನ್‌ನ ತಿಂಫುವಿನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ರಾಷ್ಟ್ರಗಳ ಸಾರ್ಕ್ ಶೃಂಗ ಸಮ್ಮೇಳನವು ಇಂದು (ಬುಧವಾರ) ಆರಂಭಗೊಂಡಿದೆ.

Share this Story:

Follow Webdunia kannada