Select Your Language

Notifications

webdunia
webdunia
webdunia
webdunia

ಬ್ಯಾಂಕಾಕ್ ಘರ್ಷಣೆ: ವಿಮಾನ ಸಂಚಾರ ರದ್ದು

ಬ್ಯಾಂಕಾಕ್ ಘರ್ಷಣೆ: ವಿಮಾನ ಸಂಚಾರ ರದ್ದು
ಬ್ಯಾಂಕಾಕ್ , ಬುಧವಾರ, 26 ನವೆಂಬರ್ 2008 (13:33 IST)
ಬ್ಯಾಂಕಾಕ್‌ನ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಸರಕಾರಿ ವಿರೋಧಿ ಧೋರಣೆಯ ಪ್ರತಿಭಟನಾಕಾರರು ವಿಮಾನ ನಿಲ್ದಾಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಪರಿಸ್ಥಿತಿ ಉದ್ರಿಕ್ತಗೊಂಡಿರುವ ಹಿನ್ನೆಲೆಯಲ್ಲಿ ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿವೆ.

ಪೀಪಲ್ಸ್ ಅಲೈಯನ್ಸ್ ಫಾರ್ ಡೆಮೋಕ್ರಸಿ(ಪಿಎಡಿ)ಯ ಮುಸುಧಾರಿ ಸದಸ್ಯರುಗಳು ಸುವರ್ಣಭೂಮಿ ವಿಮಾನ ನಿಲ್ದಾಣದ ಕಂಟ್ರೋಲ್ ಟವರ್‌‌ಗೆ ದಾಳಿ ನಡೆಸಿ, ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ಬ್ಯಾಂಕಾಕ್ ಪೋಸ್ಟ್ ವರದಿ ಹೇಳಿದೆ.

ಈ ಸಂದರ್ಭದಲ್ಲಿ ಥಾಯ್ ಸರಕಾರಿ ಪರ ಬೆಂಬಲಿಗರು ಹಾಗೂ ಪಿಎಡಿ ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನ ನಿಲ್ದಾಣದ ಟರ್ಮಿನಲ್‌ ಒಳಭಾಗದಲ್ಲಿ ಸಣ್ಣ ಪ್ರಮಾಣದ ಬಾಂಬ್ ಸ್ಫೋಟಗೊಂಡ ಪರಿಣಾಮ ಹಲವಾರು ಸರಕಾರಿ ವಿರೋಧಿ ಪ್ರತಿಭಟನಾಕಾರರು ಗಾಯಗೊಂಡಿದ್ದು, ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿರುವುದಾಗಿ ಪ್ರತಿಭಟನಾಕಾರರ ಮುಖಂಡ ಚಾವೋಸ್ ವಿವರಿಸಿದ್ದಾರೆ.

ತುರ್ತು ಪರಿಸ್ಥಿತಿ ಘೋಷಣೆ?: ಕಳೆದ ಹಲವು ದಿನಗಳಿಂದ ಬ್ಯಾಂಕಾಕ್‌ನಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಇದೀಗ ಮತ್ತಷ್ಟು ಉಲ್ಭಣಗೊಂಡಿದೆ. ಥಾಯ್ ಪ್ರಧಾನಿ ಸೋಮ್‌‌ಚಾಯ್ ಅವರು ಪೆರುವಿನಲ್ಲಿ ನಡೆಯುತ್ತಿರುವ ಏಷ್ಯಾ-ಫೆಸಿಫಿಕ್ ಶೃಂಗಸಭೆಯಿಂದ ಬುಧವಾರ ಮಧ್ನಾಹ್ನ ವಾಪಸಾಗಲಿದ್ದು, ಈ ಸಂದರ್ಭದಲ್ಲಿ ಅವರು ತುರ್ತು ಪರಿಸ್ಥಿತಿ ಹೇರುವ ಸಾಧ್ಯತೆ ಇರುವುದಾಗಿ ಊಹಾಪೋಹಗಳು ಹಬ್ಬಿವೆ.

ಪೆರುವಿನಿಂದ ಸ್ವದೇಶಕ್ಕೆ ವಾಪಸಾಗುತ್ತಿರುವ ಪ್ರಧಾನಿಯವರ ವಿಮಾನ ಸುವರ್ಣಭೂಮಿ ವಿಮಾನ ನಿಲ್ದಾಣದಲ್ಲಿ ಇಳಿಯುವುದಿಲ್ಲ, ಬೇರೆ ಸ್ಥಳದಲ್ಲಿ ಇಳಿಯಲಿದೆ ಎಂದು ಸರಕಾರದ ವಕ್ತಾರ ತಿಳಿಸಿರುವುದಾಗಿ ಬ್ಯಾಂಕಾಕ್ ಫೋಸ್ಟ್ ವರದಿ ಹೇಳಿದೆ.

ಬ್ಯಾಂಕಾಕ್‌ನಿಂದ ಹೊರಡುವ ವಿಮಾನ ಸಂಚಾರವನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಸಾವಿರಾರು ಪ್ರಯಾಣಿಕರು ಪರದಾಡುವಂತಾಗಿದೆ. ಲಗೇಜುಗಳೊಂದಿಗೆ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿ ತಿಳಿಗೊಳ್ಳುವುದನ್ನೇ ಎದುರು ನೋಡುತ್ತಿದ್ದಾರೆ.

Share this Story:

Follow Webdunia kannada