Select Your Language

Notifications

webdunia
webdunia
webdunia
webdunia

ಕ್ಯೂಬಾ;ಕಾರು ಖರೀದಿ-ಮಾರಾಟಕ್ಕೆ ಗ್ರೀನ್ ಸಿಗ್ನಲ್

ಕ್ಯೂಬಾ;ಕಾರು ಖರೀದಿ-ಮಾರಾಟಕ್ಕೆ ಗ್ರೀನ್ ಸಿಗ್ನಲ್
ಹವಾನಾ , ಶುಕ್ರವಾರ, 30 ಸೆಪ್ಟಂಬರ್ 2011 (16:50 IST)
ಕ್ಯೂಬಾದ ನಾಗರಿಕರು ತಮ್ಮಲ್ಲಿರುವ ಹಳೇ ಕಾರುಗಳನ್ನು ಮಾರಾಟ ಮಾಡಲು ಹಾಗೂ ಖರೀದಿಸಲು ಸರಕಾರ ಅನುಮತಿ ನೀಡಿದ್ದು, 1959ರಲ್ಲಿ ನಡೆದ ಕ್ಯೂಬಾ ಕ್ರಾಂತಿಯ ನಂತರ ಇದೇ ಮೊದಲ ಬಾರಿಗೆ ನಾಗರಿಕರಿಗೆ ಈ ಸ್ವಾತಂತ್ರ್ಯ ದೊರೆತಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಕ್ಯೂಬಾದ ಅಧ್ಯಕ್ಷರಾಗಿರುವ ರೌಲ್‌ ಕ್ಯಾಸ್ಟ್ರೋ ಅವರು ದೇಶದ ಆಡಳಿತದಲ್ಲಿ ಸುಧಾರಣೆಗೆ ಮುಂದಾಗಿದ್ದು, ಕಮ್ಯುನಿಸ್ಟ್‌ ನೇತೃತ್ವದ ದ್ವೀಪ ರಾಷ್ಟ್ರದಲ್ಲಿ ಇದೇ ಮೊದಲ ಬಾರಿಗೆ ಜನರಿಗೆ ಆರ್ಥಿಕ ಸ್ವಾತಂತ್ರ್ಯ ನೀಡುವ ನಿಟ್ಟಿನಲ್ಲಿ ಅಧ್ಯಕ್ಷರು ಈ ಕ್ರಮ ಕೈಗೊಂಡಿದ್ದಾರೆ.

ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಸರಕಾರ ಕ್ಯೂಬಾದಲ್ಲಿರುವ ನಾಗರಿಕರು ಹಾಗೂ ವಿದೇಶೀಯರು ಸರಕಾರದ ಪೂರ್ವನುಮತಿಯಿಲ್ಲದೇ ಕಾರುಗಳ ಖರೀದಿ ಹಾಗೂ ಮಾರಾಟ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಸರಕಾರದ ಆದೇಶವು ಶನಿವಾರದಿಂದ ಜಾರಿಯಾಗಲಿದ್ದು, ಕಾರು ಕೊಳ್ಳುವ ಅಥವಾ ಮಾರುವುದಕ್ಕೆ ಮಿತಿಯನ್ನು ನಿಗದಿಪಡಿಸಲಾಗಿಲ್ಲ. ಆದರೆ ಕಳೆದ ಐದು ದಶಕಗಳಿಂದಲೂ ಕಾರಿನ ಮಾಲೀಕರಾಗಲು ಇದ್ದ ನಿರ್ಬಂಧ ತೆರವಾಗಿರುವುದರಿಂದ ಕ್ಯೂಬಾದ ಜನರು ಸರಕಾರದ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕ್ಯೂಬಾ ಆಡಳಿತವು ಕೈಗೊಂಡಿರುವ 300 ಸುಧಾರಣೆಗಳ ಪೈಕಿ ಕಾರು ಮಾರಾಟಕ್ಕೆ ಅನುಮತಿಯೂ ಸೇರಿದ್ದು, ಅಧ್ಯಕ್ಷ ಕ್ಯಾಸ್ಟ್ರೋ ಅವರು ಕಳೆದ ಏಪ್ರಿಲ್‌ನಲ್ಲಿ ಮಂಡಿಸಿದ್ದ ಈ ಸುಧಾರಣಾ ಕ್ರಮಕ್ಕೆ ಕಮ್ಯುನಿಸ್ಟ್‌ ಪಕ್ಷದ ಕಾಂಗ್ರೆಸ್‌ ಅನುಮೋದನೆ ನೀಡಿತ್ತು. ಪ್ರಸ್ತಾಪಿತ ಸುಧಾರಣಾ ಕ್ರಮದಲ್ಲಿ ಹೆಚ್ಚಿನ ಖಾಸಗಿ ಸಹಭಾಗಿತ್ವ ಹಾಗೂ ಸರಕಾರದ ನಿಯಂತ್ರಣವನ್ನು ಸೀಮಿತಗೊಳಿಸಲಾಗಿದೆ.

ಈಗ ಕ್ಯೂಬಾದಲ್ಲಿರುವ ಕಾರುಗಳು 1959ರಲ್ಲಿ ನಡೆದ ಕ್ರಾಂತಿಗೂ ಮುನ್ನ ಅಂದರೆ 1950ರ ದಶಕದಲ್ಲಿ ಖರೀಸಲಾಗಿದ್ದು, ಈ ಪೈಕಿ ಬಹುತೇಕ ಕಾರುಗಳು ಅಮೆರಿಕದಲ್ಲಿ ನಿರ್ಮಾಣವಾಗಿವೆ.

ಕ್ಯೂಬಾದಲ್ಲಿ ಸೋವಿಯತ್‌ ನಿರ್ಮಾಣದ ಬಹುತೇಕ ಕಾರುಗಳಿವೆ. ಸೋವಿಯತ್‌ ಒಕ್ಕೂಟವು ಕ್ಯೂಬಾದ ಅತಿದೊಡ್ಡ ಮಿತ್ರ ರಾಷ್ಟ್ರವಾಗಿದ್ದರಿಂದ ಕ್ಯೂಬಾಕ್ಕೆ ಈ ಕಾರುಗಳನ್ನು ಕೊಡುಗೆಯಾಗಿ ನೀಡಿತ್ತು. ಅಧಿಕಾರಿಗಳು, ಕ್ರೀಡಾ ಪಟುಗಳು, ಕಲಾವಿದರು ಹಾಗೂ ವಿದೇಶಗಳಿಂದ ಆಗಮಿಸಿದ ವೈದ್ಯರು ಸರಕಾರದ ಅನುಮತಿಯೊಂದಿಗೆ ಈ ಕಾರುಗಳ ಬಳಕೆ ಮಾಡುತ್ತಿದ್ದರು.

Share this Story:

Follow Webdunia kannada