Select Your Language

Notifications

webdunia
webdunia
webdunia
webdunia

ಸ್ವತಂತ್ರ ಭಾರತದ ಅತಂತ್ರ ಪ್ರಜೆ

ಸ್ವತಂತ್ರ ಭಾರತದ ಅತಂತ್ರ ಪ್ರಜೆ
ನಾಗೇಂದ್ರ ತ್ರಾಸಿ

WD
ಭಾರತಕ್ಕೆ ಈ ವರ್ಷ ಸ್ವಾತಂತ್ರ್ಯೋತ್ಸವದ ಷಷ್ಟ್ಯಬ್ದ ಸಂಭ್ರಮ. ಒಬ್ಬ ಮನುಷ್ಯನ ಜೀವಿತಾವಧಿಯ 60 ವರ್ಷ ಪೂರ್ಣಗೊಳ್ಳುವುದೆಂದರೆ ಅದು ಸಾರ್ಥಕ ಬದುಕಿನ ಸಂಭ್ರಮ ಎಂದೇ ಪರಿಗಣಿಸಲಾಗುತ್ತದೆ. ಅದೇ ರೀತಿ ಭಾರತ ಬ್ರಿಟಿಷ್ ಗುಲಾಮಗಿರಿಯ ಕಬಂಧಬಾಹುಗಳ ಶೃಂಖಲೆಯನ್ನು ಕಿತ್ತೊಗೆದು, ಸ್ವಾತಂತ್ರ್ಯ ಪಡೆದುಕೊಂಡು 60 ವರ್ಷಗಳಾಗಿವೆ. ಭಾರತದ ಸ್ವಾತಂತ್ರ್ಯ ಹೋರಾಟದ ಗಾಥೆ ಬಹು ವಿಸ್ತಾರವಾದದ್ದು. ಈ ಸಂಧಿಕಾಲದಲ್ಲಿ ಸ್ವಾತಂತ್ರ್ಯ ಗಳಿಸಿ 60 ವರ್ಷಗಳಾದ ಮೇಲೆ ಅದರ ಪುನರಾವಲೋಕನ ಮಾಡಬೇಕಾಗಿದೆ.

ಭಾರತಕ್ಕೆ ಸ್ವಾತಂತ್ರ್ಯ ಲಭಿಸುವ ಎರಡು ವರ್ಷಗಳ ಮೊದಲಷ್ಟೇ ಎರಡನೇ ಜಾಗತಿಕ ಯುದ್ಧ ಅಂತಿಮಗೊಂಡಿತ್ತು. 1945ರ ಆಗಸ್ಟ್ 6ರಂದು ಅಮೆರಿಕ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಪೈಶಾಚಿಕ ಕೃತ್ಯ ನಡೆಸಿತ್ತು. ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಿದ ಪರಿಣಾಮ ಲಕ್ಷಾಂತರ ಜನ ಬಲಿಯಾಗಿದ್ದರು. ಆಗಸ್ಟ್ 15ರಂದು ಜಪಾನ್ ಅಮೆರಿಕಕ್ಕೆ ಶರಣಾಗುವ ಮೂಲಕ ಎರಡನೇ ಜಾಗತಿಕ ಯುದ್ಧಕ್ಕೆ ತೆರೆ ಬಿದ್ದಿತ್ತು. ಇದೀಗ 62 ವರ್ಷಗಳ ಬಳಿಕ ಅದೇ ಜಪಾನ್ ತನ್ನೆಲ್ಲ ಬೇಗೆ, ನಷ್ಟವನ್ನು ನಿವಾರಿಸಿಕೊಂಡು ಮತ್ತೆ ಜಗತ್ತಿನ ಬಲಶಾಲಿ ದೇಶವಾಗಿ ರೂಪುಗೊಂಡಿದೆ.

ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 60 ವರ್ಷ ಕಳೆಯುತ್ತಿದೆ. ಆದರೂ ಇಲ್ಲಿನ ಬಡತನ ನಿವಾರಣೆಯಾಗಿಲ್ಲ, ಅನಕ್ಷರಸ್ಥರ ಪ್ರಮಾಣ ಕಡಿಮೆಯಾಗಿಲ್ಲ, ರೈತರ ಆತ್ಮಹತ್ಯೆ ಮುಂದುವರಿದಿದೆ. ಸಾವಿರಾರು ಹಳ್ಳಿಗಳು ಇನ್ನೂ ಸರಿಯಾದ ವಿದ್ಯುತ್ ಬೆಳಕು, ರಸ್ತೆ, ಸಾರಿಗೆ ವ್ಯವಸ್ಥೆ ಕಂಡಿಲ್ಲ, ಜನಸಾಮಾನ್ಯರ ಬದುಕಿನ ನಿತ್ಯೋಪಯುಕ್ತ ವಸ್ತುಗಳ ಬೆಲೆ ಇಳಿದಿಲ್ಲ, ಸೂರಿಲ್ಲದ ಲಕ್ಷಾಂತರ ಮಂದಿಯ ಬದುಕು ರಸ್ತೆಗಳಲ್ಲಿಯೇ ಸವೆದು ಹೋಗುತ್ತಿದೆ. ದೇಶವನ್ನು, ಜನರನ್ನು, ಈ ಮಣ್ಣಿನ ಮಕ್ಕಳಾದ ರೈತರನ್ನ ಸುಖದ ಸುಪ್ಪತ್ತಿಗೆಯಲ್ಲಿ ಇಡುತ್ತೇವೆ ಎಂದು ಭರವಸೆ ನೀಡಿ ಅಧಿಕಾರದ ಗದ್ದುಗೆ ಹಿಡಿದ ಯಾವ ಪಕ್ಷಗಳೂ ಈವರೆಗೂ ರೈತನ ಬದುಕನ್ನು ಹಸನಾಗಿಸಿಲ್ಲ ಎಂಬುದು ದುರಂತದ ಸಂಗತಿ.

ಸ್ವಾತಂತ್ರ್ಯ ದೊರೆತು ಅರವತ್ತು ವರ್ಷಗಳ ಬಳಿಕವೂ ಇಂತಹ ಲೋಪದೋಷ ಇದ್ದೇ ಇರುತ್ತವೆ ಎಂಬ ಸಮಜಾಯಿಷಿಕೆಯನ್ನೂ ನೀಡಬಹುದು. ದೇಶದ ಪ್ರಮುಖ ನಗರಗಳು ಐಟಿ-ಬಿಟಿಗಳಿಂದ ನಳನಳಿಸುತ್ತಿರಬಹುದು, ಮೇಲು ಸೇತುಗಳಿಂದ, ಕಾಂಕ್ರೀಟ್ ರಸ್ತೆಗಳಿಂದ ಕಂಗೊಳಿಸುತ್ತಿರಬಹುದು. ಈ ದೇಶದ ಬೆನ್ನೆಲುಬು ರೈತರು ಅಂತ ಅವರಿಗೆ ಪಟ್ಟಕಟ್ಟಿ, 1966ರಲ್ಲಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಜೈ ಜವಾನ್-ಜೈ ಕಿಸಾನ್ ಎಂಬ ಘೋಷಣೆಯನ್ನು ಹೊರಡಿಸಿದ್ದರು. ಆದರೆ ಇಂದು ದೇಶದಲ್ಲಿ 500 ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸುವ ಹುನ್ನಾರದಲ್ಲಿ ಲಕ್ಷಾಂತರ ಎಕರೆ ರೈತರ ಭೂಮಿಯನ್ನು ಕಬಳಿಸಿ, ಕೈಗಾರೀಕರಣ ಮಾಡುವಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಮಣೆ ಹಾಕಲಾಗುತ್ತಿದೆ. ಇದರಿಂದಾಗಿಯೇ ಇಂದು ಶೇ.40ರಷ್ಟು ಮಂದಿ ರೈತಾಪಿ ಬದುಕಿನಿಂದ ಬೇರೆ ಉದ್ಯೋಗದತ್ತ ಸಾಗುತ್ತಿದ್ದಾರೆ. ಎಪಿಎಂಸಿ ಕಾಯ್ದೆ ಬದಲಾವಣೆಯಿಂದ ರೈತರ ಬದುಕನ್ನೇ ಹೊಸಕಿ ಹಾಕುವ ಷಡ್ಯಂತ್ರ ನಡೆಸಲಾಗುತ್ತಿದೆ.ಆ ನಿಟ್ಟಿನಲ್ಲಿಯೇ 2020ರೊಳಗೆ ಭಾರತವನ್ನು ಸೂಪರ್ ಪವರ್ ಮಾಡಲು ಯೋಜನೆ ರೂಪಿಸಿಸುತ್ತಿರುವಾಗಲೇ ಉದ್ಯೋಗ ಸಮಸ್ಯೆಯಿಂದಾಗಿ ಒಂದು ಅಂಕಿ ಅಂಶದ ಪ್ರಕಾರ ತಮಿಳುನಾಡಿನಿಂದ ಶೇ.70, ಪಂಜಾಬ್‌ನಿಂದ ಶೇ.65, ಉತ್ತರಪ್ರದೇಶದಿಂದ ಶೇ.55 ಹಾಗೂ ಉಳಿದೆಡೆಯಿಂದ ಶೇ.30ರಷ್ಟು ಜನರು ವಲಸೆ ಹೋಗಲಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಜನಸಾಮಾನ್ಯರ ಪಾಲಿಗೆ ಮೂಲಭೂತ ಸೌಕರ್ಯವನ್ನು ಕಲ್ಪಿಸುವಲ್ಲಿ ಸರಕಾರಗಳು ಹಿಂದೆ ಬಿದ್ದಿವೆ. ಇಂದು ಕರ್ನಾಟಕ, ಆಂಧ್ರ, ಪಂಜಾಬ್‌ಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿಯುತ್ತಲೇ ಇದೆ. ಬಿಹಾರ, ಗುಜರಾತ್, ಉತ್ತರಪ್ರದೇಶಗಳಲ್ಲಿ ಭ್ರಷ್ಟಾಚಾರ, ಕೊಲೆ, ಸುಲಿಗೆ ತಾಂಡವಾಡುತ್ತಿದೆ. ಮತ್ತೊಂದೆಡೆ ಕುಗ್ರಾಮಗಳಲ್ಲೂ ನಕ್ಸಲೀಯರ ಕಾಟವಾದರೆ, ಕಾಶ್ಮೀರ, ಅಸ್ಸಾಂ, ನಾಗಲ್ಯಾಂಡ್‌ಗಳಲ್ಲಿ ಉಗ್ರರ ಹಾವಳಿಯಿಂದ ಜನಸಾಮಾನ್ಯರ ನೆಮ್ಮದಿಯ ಬದುಕಿಗೂ ಕೊಳ್ಳಿ ಇಟ್ಟಿವೆ.

ಸರಕಾರ, ಜನಪ್ರತಿನಿಧಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ಹಣ, ಜನಬಲ, ರಾಜಕೀಯದ ಡೊಂಬರಾಟದಲ್ಲಿ ಬಡವರ ಕೂಗು ಅರಣ್ಯರೋದನವಾಗಿದೆಯೇ ವಿನಃ ಈ 60 ವರ್ಷಗಳಲ್ಲಿ ಯಾವುದಕ್ಕೂ ಶಾಶ್ವತವಾದ ಪರಿಹಾರ ಸಿಕ್ಕಿಲ್ಲ. ನೆಲ, ಜಲ, ಭಾಷೆ, ಗಡಿ, ಭಯೋತ್ಪಾದನೆ, ಉಗ್ರಗಾಮಿ ಚಟುವಟಿಕೆ, ಕೋಮು ಸಂಘರ್ಷ, ನಕ್ಸಲ್ ಸಮಸ್ಯೆ, ಅಧಿಕಾರ ದಾಹ, ಭ್ರಷ್ಟಾಚಾರ, ಶೋಷಣೆ, ತಾರತಮ್ಯ ಹೀಗೆ ಎಲ್ಲವೂ ಅರುವತ್ತು ವರ್ಷಗಳುದ್ದಕ್ಕೂ ಪೆಡಂಭೂತವಾಗಿ ಜನಸಾಮಾನ್ಯರ ಬದುಕನ್ನು ಇತಿಶ್ರೀಗೊಳಿಸುತ್ತಿವೆ...

ಇದಕ್ಕೆಲ್ಲಾ ಕೊನೆಯಾಗುವುದು ಎಂದು ಎಂಬುದು ಮಾತ್ರ ಪ್ರಶ್ನೆಯಾಗಿಯೇ ಉಳಿದಿದೆ.

Share this Story:

Follow Webdunia kannada