Select Your Language

Notifications

webdunia
webdunia
webdunia
webdunia

1919 : ಭಾರತೀಯರು ಶೌರ್ಯ ಮೆರೆದ ವರ್ಷ

ಜಲಿಯನ್‌ವಾಲಾ ಭಾಗ್ ಎಂಬ ರಕ್ತ ಸಿಕ್ತ ಅಧ್ಯಾಯ

1919 : ಭಾರತೀಯರು ಶೌರ್ಯ ಮೆರೆದ ವರ್ಷ
ಮಂಜುನಾಥ ಬಂಡಿ

ND
ಭಾರತದ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿರುವ ಇತಿಹಾಸದ ಪುಟಗಳನ್ನು ತಿರುವಿ ಹಾಕುತ್ತ ಒಂದೊಮ್ಮೆ ಹಿಂದಕ್ಕೆ ಹೆಜ್ಜೆ ಹಾಕಿದರೆ ಸಾಕು, ಅಲ್ಲಿ ನಮಗೆ ಕಾಣಸಿಗುವುದು ಭಾರತೀಯ ಸ್ವಾತಂತ್ರ್ಯ ಹೋರಾಟಗಾರನ ಸಿಂಧೂರವರ್ಣದ ರಕ್ತಸಿಕ್ತ ಪುಟಗಳೆ.

ಅದರಲ್ಲಿಯೂ 1919ರ ಏಪ್ರಿಲ್ 13ರಂದು ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ದುರಂತವನ್ನೊಮ್ಮೆ ನೆನೆದರೆ ಸಾಕು ಮೈಜುಮ್ಮೆನ್ನುತ್ತದೆ. ನಮ್ಮ ಹಿರಿಯರು ಮಾಡಿದ ತ್ಯಾಗಕ್ಕೆ ನಮ್ಮ ಕಣ್ಣಲ್ಲಿ ನೀರು ಬರುವುದಿಲ್ಲ, ಬದಲಾಗಿ ರಕ್ತ ಸುರಿಯಲಾರಂಭಿಸುತ್ತದೆ. ಕಾರಣ, ಪಂಜಾಬಿನ ಗವರ್ನರ್ ಆಗಿದ್ದ ಬ್ರಿಟಿಷ್ ಸೇನಾಧಿಕಾರಿ ಜನರಲ್ ಡಯರ್ ತನ್ನ ಕುತಂತ್ರದಿಂದ ಅಮೃತಸರ ಸಮೀಪದ ಜಲಿಯನ್‌ವಾಲಾ ಭಾಗ್‌ನಲ್ಲಿ ಯಾವುದೇ ಮುನ್ಸೂಚನೆ ನೀಡದೆ ಗುಂಡಿನ ದಾಳಿ ನಡೆಸಿ 389 ಜನರನ್ನು ಹತ್ಯೆಗೈದಿದ್ದ.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅಭೂತಪೂರ್ವ ಮೈಲಿಗಲ್ಲಾಗಿ ದಾಖಲಾಗಿರುವ ಜಲಿಯನ್ ವಾಲಾಬಾಗ್ ಹತ್ಯಾಕಾಂಡ, ಬ್ರಿಟಿಷರ ಹತಾಶ ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿತ್ತು. ಭಾರತದಲ್ಲಿ ಹಿಂದೆಂದೂ ಆಗದಂತಹ ಈ ನರಮೇಧವು ಇತಿಹಾಸದ ಪುಟಗಳಲ್ಲಿ ಕಪ್ಪು ಚುಕ್ಕೆಯಾಗಿಯೇ ಉಳಿಯಿತು.

1919ರಲ್ಲಿ 'ರೌಲತ್ ಕಾಯ್ದೆ' ಎನ್ನುವ ನೂತನ ಕಾಯ್ದೆಯೊಂದನ್ನು ಬ್ರಿಟಿಷ ಸರಕಾರ ಜಾರಿಗೆ ತಂದಿತು. ದೇಶದ ಯಾವುದೇ ಪ್ರಜೆಯನ್ನಾದರೂ ಸರಿ, ನ್ಯಾಯಾಲಯದ ಅಪ್ಪಣೆ ಪಡೆಯದೆ ಸರಕಾರ ನೇರವಾಗಿ ಜೈಲಿಗೆ ದೂಡುವಂತಹ ಕಠಿಣ ಕ್ರಮವೇ ಈ ಕಾಯ್ದೆಯ ತಿರುಳು. ಈ ಕಾಯ್ದೆಯನ್ನು ವಿರೋಧಿಸಿ, ಇಂತಹ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಸಲುವಾಗಿಯೇ ಪಂಜಾಬಿನ ಇಬ್ಬರು ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರರಾದ ಸತ್ಯಪಾಲ್ ಮತ್ತು ಸೈಫುದ್ದಿನ್ ಕಿಚ್ಲೌ ಅಮೃತಸರದ ಬಳಿ ಇರುವ ಜಲಿಯನ್ ವಾಲಾಬಾಗ್‌ನ ಆಯಕಟ್ಟಿನ ಪ್ರದೇಶವೊಂದರಲ್ಲಿ ಬೃಹತ್ ಸಮಾರಂಭವೊಂದನ್ನು ಹಮ್ಮಿಕೊಂಡಿದ್ದರು.

ಆದರೆ, ಮುಂದೆ ಇಲ್ಲಿ ದೇಶದ ಇತಿಹಾಸದಲ್ಲಿ ಬಹುದೊಡ್ಡ ಕಪ್ಪುಚುಕ್ಕೆಯಾಗಿ ಉಳಿಯಲಿರುವ ಘಟನೆಯೊಂದು ಜರುಗಲಿದೆ ಎಂಬುದು ಯಾವ ಭಾರತೀಯನಿಗೂ ಅರಿವಿರಲಿಲ್ಲ. ಬ್ರಿಟಿಷ್ ಅಧಿಕಾರಿಗಳಾದರೂ ಅಷ್ಟೆ, ಯಾವುದೇ ಮುನ್ಸೂಚನೆ ನೀಡದೆ ಹೊರಹೋಗುವ ಎಲ್ಲ ಮಾರ್ಗಗಳನ್ನು ಮುಚ್ಚಿ, ಜನರಲ್ ಡಯರ್ ನೇತೃತ್ವದಲ್ಲಿ 50 ಜನರ ಗುಂಪೊಂದು ಏಕಾಏಕಿ ನೆರೆದಿದ್ದ ಜನತೆಯ ಮೇಲೆ ಗುಂಡಿನ ಸುರಿ ಮಳೆಗೈಯ್ಯಲಾರಂಭಿಸಿತು. ದಿಕ್ಕೇ ತೋಚದಂತಹ ಸ್ಥಿತಿಯಲ್ಲಿದ್ದ ಭಾರತೀಯರು ಅನಿವಾರ್ಯವಾಗಿ ಗುಂಡಿಗೆ ಎದೆಯೊಡ್ಡಬೇಕಾಯಿತು. ಎಷ್ಟೋ ಜನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅಲ್ಲಿಯೆ ಇದ್ದ ಹಾಳು ಬಾವಿಗೆ ಹಾರಿದರು. ಆದರೂ ನಿರ್ದಯಿ ಬ್ರಿಟಿಷರು ಒಂದಿನಿತು ಕರುಣೆ ತೋರಿಸದೆ ಮನಬಂದಂತೆ ಗುಂಡು ಹಾರಿಸುವ ಮೂಲಕ 389 ಜನರ ಪ್ರಾಣ ತೆಗೆದರಲ್ಲದೆ, ದುರ್ಘಟನೆಯಲ್ಲಿ 1,516 ಜನ ಗಾಯಗೊಳ್ಳುವಂತೆ ಮಾಡಿದರು. ಆದರೆ, ಅನಧಿಕೃತ ಮೂಲಗಳ ಪ್ರಕಾರ ಈ ಘಟನೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನರು ತಮ್ಮ ಪ್ರಾಣವನ್ನು ತೆತ್ತಿದ್ದಾರೆ.

ಡಯರ್‌ನ ಈ ಕುತಂತ್ರಕ್ಕೆ ಇಡಿ ಭಾರತವೇ ಬೆಚ್ಚಿ ಬಿದ್ದಿತಲ್ಲದೆ, ಬ್ರಿಟಿಷರ ಈ ದುಷ್ಕೃತ್ಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ರಾಷ್ಟ್ರಗಳು ತೀವ್ರವಾಗಿ ಖಂಡಿಸಿದವು. ಸ್ವತ ಬ್ರಿಟಿಷ್ ಪತ್ರಿಕೆಗಳೇ ದುರ್ಘಟನೆಯನ್ನು ಖಂಡಿಸಿ, ಡಯರ್ ಹೊಂದಿದ್ದ ಹತಾಶ ಮನೋಭಾವನೆಯನ್ನು ಒತ್ತಿ ಹೇಳಿದ್ದವು.

ಭಾರತಕ್ಕೆ ಪ್ರಥಮ ನೊಬೆಲ್ ಪ್ರಶಸ್ತಿ ತಂದುಕೊಟ್ಟು, ಭಾರತದ ಕೀರ್ತಿ ಪತಾಕೆಯನ್ನು ದಿಗಂತದೆತ್ತರಕ್ಕೆ ಏರಿಸಿದ್ದ ಕವಿ ರವೀಂದ್ರನಾಥ್ ಠಾಗೋರರು ಈ ದುರ್ಘಟನೆಯಿಂದ ಮನನೊಂದು ಬ್ರಿಟಿಷರು ನೀಡಿದ್ದ ಪ್ರತಿಷ್ಠಿತ ನೈಟ್‌ಹುಡ್ ಪದವಿಯನ್ನು ಮರಳಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಜಲಿಯನ್ ವಾಲಾಬಾಗ್ ಘಟನೆ ತನ್ನದೇ ಆದ ವಿಶಿಷ್ಟ, ಕರಾಳ ಛಾಯೆಯ ಸ್ಥಾನ ಪಡೆದಿದೆ. ಭಾರತೀಯರನ್ನು ಮೋಸದಿಂದ ಒಂದು ಗೋಡೆಯ ಮಧ್ಯೆ ಹಾಕಿ ಅವರೆಲ್ಲರನ್ನು ಗುಂಡಿಕ್ಕಿ ಹತ್ಯೆಗೈಯ್ಯುವಂತೆ ಮಾಡಿದ ಬ್ರಿಟಿಷ್ ಸೇನಾಧಿಕಾರಿ ಜನರಲ್ ಡಯರ್‌ನ ಕುತಂತ್ರಕ್ಕೆ ಯಾವ ಭಾರತೀಯ ಪ್ರಜೆಯೂ ಸೊಲ್ಲೆತ್ತದೆ, ಗುಂಡಿನ ನಳಿಕೆಗೆ ಎದೆಯೊಡ್ಡಿ ಸಂತೋಷದಿಂದಲೇ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ತ್ಯಾಗಮಾಡಿದ್ದು ಭಾರತದ ಪಾಲಿಗೆ ಹೆಮ್ಮೆಯ ಘಟನೆ ಎಂದು ಹೇಳಬಹುದು.

Share this Story:

Follow Webdunia kannada