Select Your Language

Notifications

webdunia
webdunia
webdunia
webdunia

ಸಿನಿಕತನ ಬಿಡಿ, ಶ್ರೇಷ್ಠರು ನಾವೆಂದು ಹೆಮ್ಮೆ ಪಡಿ

ಸಿನಿಕತನ ಬಿಡಿ, ಶ್ರೇಷ್ಠರು ನಾವೆಂದು ಹೆಮ್ಮೆ ಪಡಿ
ಚಂದ್ರಾವತಿ ಬಡ್ಡಡ್ಕ
ND
ಅದು ಮಕ್ಕಳ ದಿನವಿರಬಹುದು, ಮಹಿಳಾ ದಿನಾಚರಣೆ ಇರಬಹುದು ಅಥವಾ ಇನ್ಯಾವುದೇ ವಿಶೇಷ ದಿನವಿರಲಿ. ಚಿಂದಿ ಆಯುವ ಮಕ್ಕಳ ಚಿತ್ರ ಇಲ್ಲವೇ, ಹೊರೆಹೊತ್ತ ಕಾರ್ಮಿಕ ಮಹಿಳೆಯ ಚಿತ್ರಗಳು ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತವೆ. "ಇಂದು ಬಾಲಕಾರ್ಮಿಕರ ದಿನ. ಇಂತಹ ಊರಿನ ಇಂತಹ ಸ್ಥಳದಲ್ಲಿ ಚಿಂದಿ ಆಯುವ ಹುಡುಗ" ಎಂದೋ, "ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಮಹಿಳಾ ಕಾರ್ಮಿಕಳೊಬ್ಬಳು ತಲೆಹೊರೆ ಹೊತ್ತೊಯ್ಯುತ್ತಿರುವುದು" ಎಂಬ ಶೀರ್ಷಿಕೆಯೊಂದಿಗೆ ಚಿತ್ರಗಳು ಪ್ರಕಟಗೊಂಡಿರುತ್ತವೆ. ಇಂತಹ ದಿನಗಳಲ್ಲಿ ಮಾಸ್ಟರ್ ಕಿಶನ್ ಅಥವಾ ಇನ್ಯಾವುದೋ ಶೌರ್ಯ ಪ್ರಶಸ್ತಿ ಪಡೆದ ಮಕ್ಕಳ ಚಿತ್ರಗಳಾ ಅಥವಾ, ಕಿರಣ್ ಬೇಡಿ, ಕಲ್ಪನಾ ಚಾವ್ಲಾ, ಗಂಗೂಬಾಯಿ ಹಾನಗಲ್ ಇವರಂಥ ಮಹಿಳೆಯರ ಚಿತ್ರಗಳು "ಇಂದು ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ನಮ್ಮ ನಾಡಿನ ಹೆಮ್ಮೆಯ ಮಹಿಳೆಯರು" ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾಗಬಾರದೇ? ಇಂತಹ ಸಿನಿಕತನ ನಮಗ್ಯಾಕೆ?

ಭಾರತ ಸಮಸ್ಯೆಮುಕ್ತ ಎಂಬುದು ಇಲ್ಲಿ ನನ್ನ ವಾದವಲ್ಲ. ಹಾಗಂತ ಭಾರತ ಸಂಪೂರ್ಣ ಸಮಸ್ಯೆಯಿಂದಲೇ ತುಂಬಿದೆ ಎಂಬುದನ್ನು ಒಪ್ಪಿಕೊಳ್ಳಲೂ ತಯಾರಿಲ್ಲ. ಸಮಸ್ಯೆಗಳನ್ನೇ, 'ಇಲ್ಲ'ಗಳನ್ನೇ ಎತ್ತಿ ಆಡುತ್ತಿರುವ ಈ ಸಂದರ್ಭದಲ್ಲಿ ಮೂಡಿರುವ ಕೆಲವು ಪ್ರಶ್ನೆಗಳನ್ನು, ಅನಿಸಿಕೆಗಳನ್ನು ಇಲ್ಲಿ ಮಂಡಿಸುತ್ತಿದ್ದೇನೆ.
  ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ?      

ನಮ್ಮ ರಾಷ್ಟ್ರ ಸ್ವಾತಂತ್ರ್ಯ ಗಳಿಸಿ 61 ವರ್ಷಗಳಾಗುತ್ತಿವೆ. ಈ ಹೊತ್ತಿನಲ್ಲಿ ನಾವೊಮ್ಮೆ ಹಿಂತಿರುಗಿ ನೋಡೋಣ. 1947ರಲ್ಲಿ ಅಥವಾ ಅದಕ್ಕೂ ಹಿಂದೆ ಇದ್ದಂತೆಯೇ ನಾವಿದ್ದೇವೆಯಾ? ನಮ್ಮಲ್ಲಿ ಒಂದಿಷ್ಟೂ ಸುಧಾರಣೆಯಾಗಿಲ್ಲವೆ? ಒಂದುಕಾಲದ ಬ್ರಿಟಿಷರ ವಸಾಹತು ಇಂದು ಜಗತ್ತಿನಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿರುವುದರ ಹಿಂದೆ ಯಾವುದೇ ಅಥವಾ ಯಾರದ್ದೇ ಶ್ರಮವಿಲ್ಲವೆ?

ಹೇಳಿ. ನಾವು ಯಾವ ವಿಚಾರದಲ್ಲಿ ಜಗತ್ತಿನ ಪ್ರಮುಖ ರಾಷ್ಟ್ರಗಳಿಗಿಂತ ಹಿಂದಿದ್ದೇವೆ? ಒಳಿತು ಮತ್ತು, ಅಫ್‌ಕೋರ್ಸ್ ಕೆಡುಕುಗಳಲ್ಲೂ ನಾವು ಸರಿಸಮವಾಗೇ ಮುಂದುವರಿದಿದ್ದೇವೆ. ಒಂದು ಕಾಲದಲ್ಲಿ ಭಾರತವನ್ನು ದೂರವಿರಿಸಿದ್ದ ಅಮೆರಿಕಾದಂತಹ ಅಮೆರಿಕಾವೇ ನಮ್ಮ ಸ್ನೇಹಕ್ಕಾಗಿ ಕೈ ಚಾಚಿದೆ. ಭಾರತದ ಅಭಿವೃದ್ಧಿಯ ವೇಗ ಅದರೊಳಗೆ ಪುಕುಪುಕು ಭೀತಿ ಹುಟ್ಟಿಸಿದೆ.

ನಾವು, ಲಭ್ಯವಿರುವ ಇತಿಹಾಸವನ್ನು ನಂಬುವುದೇ ಆದಲ್ಲಿ; ರಾಜಮಹಾರಾಜರ ಆಡಳಿತ, ದುರಾಡಳಿತ ಕಂಡ ರಾಷ್ಟ್ರ ನಮ್ಮದು. ವಿವಿಧ ರೀತಿಯ, ಮನಸ್ಥಿತಿಯ ರಾಜರು ನಮ್ಮ ಹಿರಿಯರನ್ನು ಆಳಿದ್ದಾರೆ. ಅಗಾಧ ಸಂಪತ್ತು ಹೊಂದಿದ್ದ ಭಾರತಕ್ಕೆ ವ್ಯಾಪಾರದ ಉದ್ದೇಶದಿಂದ ಬಂದವರು ಇಲ್ಲೇ ಠಿಕಾಣಿ ಹೂಡಿದರು. ಈಸ್ಟ್ ಇಂಡಿಯಾ ಕಂಪೆನಿ ಹುಟ್ಟುಹಾಕಿದರು. ಈ ಕಂಪೆನಿ ಭಾರತದ ಮೇಲೆ ಸವಾರಿ ಮಾಡಿತು. ಅವರ ಬಳಿ ಆಧುನಿಕ, ತಾಂತ್ರಿಕತೆ, ವಸ್ತುಗಳು, ಹತ್ಯಾರುಗಳಿದ್ದವು. ಇಲ್ಲಿದ್ದ ರಾಜರುಗಳು ತಮ್ಮೊಳಗೆ ಕಚ್ಚಾಡುವಲ್ಲೇ ನಿರತರಾಗಿದ್ದರು. ಇಲ್ಲವೇ ಬ್ರಿಟಿಷರ ಭಯಕ್ಕೋ ಇಲ್ಲ ಆಮಿಷಕ್ಕೋ ಒಳಗಾಗಿದ್ದರು. ಹಾಗಾಗಿ ಹಲವಾರು ದಶಕಗಳ ಕಾಲ ಅವರು ಆಡಿದ್ದೇ ಆಟವಾಗಿತ್ತು.

(ಇಲ್ಲಿ ನನಗೊಂದು ಘಟನೆ ನೆನಪಾಗುತ್ತಿದೆ. ಈ ಹಿಂದೆ ನಾನೊಮ್ಮೆ ಕೆಎಎಸ್ ಪರೀಕ್ಷೆ(ಮುಖ್ಯ)ಗೆ ತಯಾರಿ ನಡೆಸುತ್ತಿದ್ದ ವೇಳೆ ಬೆಂಗಳೂರಿನ ಕೋಚಿಂಗ್ ಸೆಂಟರ್ ಒಂದರಲ್ಲಿ ಕೋಚಿಂಗ್ ಪಡೆಯುತ್ತಿದ್ದೆ. ಆ ವೇಳೆ ಇತಿಹಾಸದ ಪಾಠ ಮಾಡುತ್ತಿದ್ದ ಉಪನ್ಯಾಸಕರು ನಮ್ಮ ಮುಂದೆ ಒಂದು ಪ್ರಶ್ನೆ ಇಟ್ಟಿದ್ದರು. "ಭಾರತೀಯರೆಲ್ಲ ಒಟ್ಟು ಸೇರಿ ಕಾದಾಡುವುದು ಬಿಡಿ, ಉಗುಳುತ್ತಿದ್ದರೂ ಆ ಉಗುಳಿನ ಹೊಳೆಯಲ್ಲಿ ಬ್ರಿಟಿಷರು ಕೊಚ್ಚಿ ಹೋಗುತ್ತಿದ್ದರು. ಆದರೆ ಭಾರತೀಯರು ಯಾಕೆ ಒಂದಾಗಿಲ್ಲ?" - ಇದು ಅವರ ಪ್ರಶ್ನೆಯಾಗಿತ್ತು. ಅದಕ್ಕೆ ತಟಕ್ಕನೆ ಉತ್ತರಿಸಿದ ನನ್ನ ಸಹ ಅಭ್ಯರ್ಥಿಯೊಬ್ಬ, "ಅವರವರೇ ಪರಸ್ಪರ ಉಗುಳಿಕೊಂಡು ಎಲ್ಲ ಉಗುಳು ಮುಗಿಸಿಕೊಂಡಿದ್ದರು" ಆ ಸಂದರ್ಭದಲ್ಲಿ ಎಲ್ಲರೂ ಗೊಳ್ಳನೆ ನಕ್ಕರೂ, ಇದು ವಾಸ್ತವಕ್ಕೆ ಎಷ್ಟೊಂದು ಹತ್ತಿರವಾಗಿದೆ!)

ಇಂದು ನಡೆಯುತ್ತಿರುವುದಾದರೂ ಏನು? ನಾವು ನಮಗೆ ಲಭಿಸಿದ ಸ್ವಾತಂತ್ರ್ಯ, ಆ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳುತ್ತಿದ್ದೇವೆ? ಯಾವುದೇ ಏಳಿಗೆಯನ್ನು ನಾವು ಬಡಪೆಟ್ಟಿಗೆ ಒಪ್ಪಿಕೊಳ್ಳುತ್ತೇವಾ? ಎಷ್ಟೊಂದು ವಿಘ್ನಗಳು, ತೊಡಕುಗಳು, ಅಡ್ಡಿಗಳು! ಉತ್ತಮ ಕಾರ್ಯಕ್ಕೆ ಸಂಘಟಿತರಾಗಲು ನಮ್ಮ ಮನಸ್ಸು ಒಪ್ಪಿಕೊಳ್ಳುವುದಿಲ್ಲ. ಅಲ್ಲಿ 'ಅಚ್ಚಾ' ಮನೋಭಾವಕ್ಕಿಂತ, 'ಕಚ್ಚಾ' ಮನೋಭಾವವೇ ಪ್ರಭಾವ ಬೀರುತ್ತದೆ. ಅದೇ ನಕಾರಾತ್ಮಕ ವಿಚಾರವಾದಲ್ಲಿ? ಬಹುಬೇಗ ನಮ್ಮ ಮನಸ್ಸು ಪ್ರಭಾವಿತವಾಗುತ್ತದೆ. ಎಲ್ಲದರಲ್ಲೂ, ಹುಳುಕು ಹುಡುಕದಿದ್ದರೆ ಹೇಗೆ? ತಂತ್ರ ಕುತಂತ್ರಗಳನ್ನು ಬಳಸಿ, ತಣ್ಣಗಿನ ಕ್ರೌರ್ಯ ಮೆರೆಯುತ್ತಾ 'ಸಾಧನೆಗಾಗಿ' ಮೀಸೆಯಡಿ ನಗುಬೀರುತ್ತೇವೆ. 'ಮೊಸರು ತಿಂದು ಮೇಕೆಯ ಬಾಯಿಗೆ ಕೈ ಒರೆಸುವ' ಪಂಗಡದವರು ನಾವು.
webdunia
WD


ಅಭಿವೃದ್ಧಿ, ತಂತ್ರಜ್ಞಾನ, ವಿಜ್ಞಾನ, ಆರ್ಥಿಕತೆ, ಉದ್ಯಮ ಅಥವಾ ಇನ್ಯಾವುದೇ ಅಭಿವೃದ್ಧಿಗೆ ಮೂಲ ಶಿಕ್ಷಣ. ಈ ಕ್ಷೇತ್ರದಲ್ಲಿ ನಿಬ್ಬೆರಗಾಗುವಷ್ಟು ಬೃಹತ್ ಯಶಸ್ಸು ಸಾಧಿಸಿಲ್ಲವೇ ನಾವು? ಸ್ವಾತಂತ್ರ್ಯಪೂರ್ವದ ಮತ್ತು ಸ್ವಾತಂತ್ರ್ಯದ ಆರಂಭದ ಸ್ಥಿತಿಗತಿಗಳಿಗೆ ಹೋಲಿಸಿ ನೋಡಿದರೆ ಅಗಾಧವಾದ ವ್ಯತ್ಯಾಸವಿಲ್ಲವೇ? ನಮ್ಮಲ್ಲಿನ ಸಂಪರ್ಕ ಕ್ರಾಂತಿ ಅದ್ಭುತವಾದ ಬೆಳವಣಿಗೆಯಲ್ಲವೇ? ಭೌಗೋಳಿಕವಾಗಿ ಇಷ್ಟು ದೊಡ್ಡ, ಇಷ್ಟೊಂದು ಜನಸಂಖ್ಯೆ ಇರುವ ರಾಷ್ಟ್ರದಲ್ಲಿ ಎಲ್ಲರಿಗೂ ಒಂದು ಹಂತದ ತನಕ ಶಿಕ್ಷಣ ಕೈಗೆಟಕುತ್ತಿಲ್ಲವೇ? ಹೌದು. ನಮಗೆ ನಮ್ಮ ಮಕ್ಕಳು ಇಂಜಿನಿಯರ್ ಮತ್ತು ವೈದ್ಯರೇ ಆಗಬೇಕು. ಪ್ರಸ್ತುತವಂತೂ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗೋದೇ ಗುರಿ. ಇದು ಬಿಟ್ಟರೆ ಮೂಲ ವಿಜ್ಞಾನ ಅಥವಾ ಇತರ ಡಿಸಿಪ್ಲೀನ್‌ಗಳಲ್ಲಿ ನಮ್ಮಮಕ್ಕಳು ಹೋಗುವುದು ನಮಗೆ ಬೇಕಿಲ್ಲ. ಇರುವ ಅವಕಾಶವನ್ನು ಉತ್ತಮವಾಗಿ ಚೆನ್ನಾಗಿ ಬಳಸಿಕೊಳ್ಳುವುದು 'ಘನತೆಗೆ' ಕಮ್ಮಿ. ಬದಲಿಗೆ ನಿಲುಕದಿರುವತ್ತ ಕೈ ಚಾಚುತ್ತಾ ಇಲ್ಲಗಳ ಪಟ್ಟಿ ಮಾಡುತ್ತೇವೆ. ಇಲ್ಲದಿರುವುದನ್ನು ಖಂಡಿಸುವ ವೇಳೆಗೆ ಇರುವುದನ್ನು ಮರೆಯುತ್ತೇವೆ. ಯಾಕೆ?

ಉದಾಹರಣೆ ನೋಡೋಣ. ನಾವೊಂದು ಸಂಸ್ಥೆಗೆ ಉದ್ಯೋಗ ಯಾಚಿಸಿ ಅರ್ಜಿ ಹಾಕುತ್ತೇವೆ. ಶತಾಯಗತಾಯ ಕೆಲಸ ಗಿಟ್ಟಿಸುವುದು ನಮ್ಮ ಏಕೈಕ ಗುರಿಯಾಗಿರುತ್ತದೆ. ಸಾಧ್ಯವಿರುವ ಎಲ್ಲಾ ಪ್ರಭಾವಗಳನ್ನೂ ಬೀರುತ್ತೇವೆ. ಆ ಸಂದರ್ಭದಲ್ಲಿ ನಾವು ಯಾವುದಕ್ಕೂ ಸಿದ್ಧರಿರುತ್ತೇವೆ. ಬಳಿಕ, ಒಂದು ಹಂತಕ್ಕೆ ಬಂದೆವೆಂದಾದರೆ ಎಲ್ಲದರಲ್ಲೂ, ಎಲ್ಲರಲ್ಲೂ ಐಬು ಕಾಣಬರುತ್ತದೆ. ಸಂಸ್ಥೆಯ ನೀತಿ ನಡಾವಳಿಗಳು ನಮಗೆ ಇಷ್ಟವಾಗುವುದಿಲ್ಲ. ನಮ್ಮೊಳಗಿನ ಕ್ರಾಂತಿಕಾರಿ ಜಾಗೃತಗೊಳ್ಳುತ್ತಾನೆ. ಹತ್ತಿದ ಏಣಿಯನ್ನು ಒದೆಯಲು ಆರಂಭಿಸುತ್ತೇವೆ. ಹಕ್ಕುಗಳನ್ನು ಪ್ರಶ್ನಿಸುತ್ತೇವೆ. ಕರ್ತವ್ಯಗಳನ್ನು ಮರೆಯುತ್ತೇವೆ. ಸಂಸ್ಥೆ ಮತ್ತು ನಮ್ಮೊಳಗಿನ ಸಂಬಂಧ ಪರಸ್ಪರ ಕೊಡುಕೊಳ್ಳುವಿಕೆಯದೆಂಬುದು ನಮಗೆ ಅರ್ಥವಾಗುವುದಿಲ್ಲ. ನಾವ್ಯಾಕೆ ಋಣಾತ್ಮಕ ಮನೋಭಾವ ಬಿಟ್ಟು ಧನಾತ್ಮಕ ಮನೋಭಾವ ರೂಪಿಸಿಕೊಳ್ಳುವುದಿಲ್ಲ?

ಸ್ವಾತಂತ್ರ್ಯಾ ನಂತರದ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಅವಲೋಕಿಸಿ. ಯಾರಿಗೆ ಕಮ್ಮಿ ಇದೆ ಭಾರತ. ಯಾರೂ ಸುಲಭದಲ್ಲಿ ನಮ್ಮ ತಂಟೆಗೆ ಬರದಂತೆ ನಾವು ಆಗೀಗ ನಮ್ಮ ಸಾಮರ್ಥ್ಯವನ್ನು ತೋರಿಸುತ್ತಲೇ ಇದ್ದೇವೆ. ಯಾರಮೇಲೂ ದಂಡೆತ್ತಿ ಹೋಗಲು ಶಾಂತಿಪ್ರಿಯ ಭಾರತ ಬಯಸದಿದ್ದರೂ, ನಮ್ಮ ತಂಟೆಗೆ ಯಾರೇ ಬಂದರೂ ಢಮಾರ್ ಮಾಡಿಬಿಡುವ ಸಾಮರ್ಥ್ಯ ನಮಗಿದೆ.

ನಮ್ಮ ಸ್ವತಂತ್ರ ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತದೆ ಎಂದು ಬೊಬ್ಬೆ ಹೊಡೆಯುತ್ತೇವೆ. ಇದರಲ್ಲಿ ನಾವು 74ರ ಸ್ಥಾನದಲ್ಲಿದ್ದೇವೆ ಎಂಬುದಾಗಿ ಅಂತಾರಾಷ್ಟ್ರೀಯ ಸಂಸ್ಥೆ ಟ್ರಾನ್ಸ್ಫರೆನ್ಸಿ ಇಂಟರ್‌ನ್ಯಾಶನಲ್ ನಡೆಸಿದ ಸಮೀಕ್ಷೆ ಹೇಳಿದೆ. ಮೊನ್ನೆ ಲೋಕಸಭೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮಂಡಿಸಿದ್ದ ವಿಶ್ವಾಸಮತ ಗೊತ್ತುವಳಿಯ ವೇಳೆ, ನಾವೆಲ್ಲ ದೂರದರ್ಶನದ ಪರದೆಯನ್ನು ವೀಕ್ಷಿಸುತ್ತಾ ಇರುವಾಗಲೇ, ಇದ್ದಕ್ಕಿದ್ದಂತೆ ಹಣದ ಕಟ್ಟುಗಳನ್ನು ಸಂಸದರು ಝಳಪಿಸಲಾರಂಭಿಸದರು. ಒಂದು ಕ್ಷಣ ಏನಾಯಿತೆಂದು ತಿಳಿಯದೇ ಕಣ್ಣು ಪಿಳಿಪಿಳಿ ಮಾಡುತ್ತ ನೋಡುತ್ತಿರಬೇಕಿದ್ದರೆ, ಇದು ವಿಶ್ವಾಸಮತ ಗೊತ್ತುವಳಿ ಪರವಾಗಿ ಮತಚಲಾಯಿಸಲು ಬಿಜೆಪಿ ಸಂಸದರಿಗೆ ನೀಡಿದ್ದ ಆಮಿಷದ ಹಣ ಒಂದು ಕೋಟಿ ರೂಪಾಯಿ ಎಂಬುದು ತಿಳಿಯಿತು. ಯುಪಿಎ ಮೈತ್ರಿಕೂಟದ ಕುದುರೆ ವ್ಯಾಪಾರದ ಆರೋಪಕ್ಕೆ ಪುರಾವೆ ಕೇಳಿದ್ದಕ್ಕೆ ಪ್ರತಿಯಾಗಿ ಈ ರೀತಿಯಲ್ಲಿ ಸಾಕ್ಷ್ಯ ಒದಗಿಸಿದ್ದಂತೆ. ಆ ಒಂದು ಕ್ಷಣದಲ್ಲೇ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಕರಾಳ ಇತಿಹಾಸ ದಾಖಲಾಯಿತು.

ಒನ್ಸ್ ಎಗೇನ್, ಇದಕ್ಕೆಯಾರು ಕಾರಣ. ನಾವು ಎಂತಹವರಿಗೆ ಮತಹಾಕುತ್ತೇವೆ? ನಮಗೆ ನೆನಪಿನ ಶಕ್ತಿ ಕಮ್ಮಿ. ಆಡಳಿತದಲ್ಲಿದ್ದಾಗ ಮಾಡಿರುವ ಅನಾಚಾರ ದುರಾಚಾರಗಳನ್ನು ಬಹುಬೇಗ ಮರೆಯುತ್ತೇವೆ. ಬಿಡಿ. ಹೆಸರಿನ ಮುಂದೆ ಪದವಿಗಳನ್ನು ಪೇರಿಸಿಕೊಂಡಿರುವ ನಾವು ನಮ್ಮ ಪರಮೋಚ್ಚ ಹಕ್ಕನ್ನು ಚಲಾಯಿಸುತ್ತೇವೆಯೇ? ಚುನಾವಣೆ ವೇಳೆ ಮತದಾನಕ್ಕೆ ನಾವು ನಿಷ್ಠೆಯಿಂದ ತೆರಳುತ್ತೇವಾ? ಮತದಾನದಿಂದ ವಿಮುಖರಾಗುತ್ತಿರುವುದು, ಅನಕ್ಷರಸ್ಥರು, ಹಳ್ಳಿಗರು ಅಥವಾ ದೇಶದ ಬೆನ್ನೆಲುಬು ರೈತರಲ್ಲ. ಇತ್ತೀಚಿನ ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಮತದಾನದ ಶೇಕಡಾವಾರು ಇತರ ಪ್ರದೇಶಗಳಿಗೆ ಹೋಲಿಸಿದರೆ ಕಡಿಮೆ. ಆದರೆ, ಚುನಾಯಿತರ ಅಯೋಗ್ಯತೆಯನ್ನು ಮಾತ್ರ ತುಂಬ ಚೆನ್ನಾಗಿ, ರಸವತ್ತಾಗಿ ಬಣ್ಣಿಸುತ್ತೇವೆ! ಮತ್ತೆ ನಮ್ಮ ಸ್ವಾತಂತ್ರ್ಯ ದಮನಕ್ಕೀಡಾಗಿದೆ ಎಂದು ಸೇರಿಸಲೂ ಮರೆಯುವುದಿಲ್ಲ.

ಬೇಡ. ನಮ್ಮ ಯಾವುದೇ ಕೆಲಸ ಸುಲಭವಾಗಿ ನೆರವೇರುತ್ತದೆ ಎಂದಾದರೆ ನೇರದಾರಿ ಬಿಟ್ಟು ಅಡ್ಡದಾರಿ ಹಿಡಿಯಲು ಮುಂದಾಗುತ್ತೇವೆ. ಯಾವುದಾದರೂ ಒಂದು ಪರವಾನಗಿಯೋ ಅಥವಾ ಇನ್ನಾವುದೋ ಕೆಲಸ ಆಗಬೇಕೆಂದಿದ್ದರೆ, ಹೇಗೆ ಪ್ರಭಾವ ಬೀರಬಹುದು, ಯಾವುದೇ ಕಷ್ಟವಿಲ್ಲದೆ ಇಲ್ಲದೆ ನಮ್ಮ ಕೆಲಸವನ್ನು ಹೇಗೆ ಮಾಡಿಕೊಳ್ಳೋಣ ಎಂಬ ಆಲೋಚನೆಯೇ ವಿಜೃಂಭಿಸುತ್ತದೆ. ನ್ಯಾಯಯುತ ದಾರಿಯಲ್ಲಿ ಸಾಗುವ ವ್ಯವಧಾನ - ತಾಳ್ಮೆ ನಮಗಿರುವುದಿಲ್ಲ. ಅಷ್ಟಲ್ಲದೆ, ನಮ್ಮ ಈ ಸಾಹಸವನ್ನು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ ಕೂಡ. ಮತ್ತು ಈ ಮೂಲಕ ಇತರರನ್ನು ಈ ದಾರಿಗಿಳಿಯುವಂತೆ ಪರೋಕ್ಷ ಪ್ರಚೋದನೆ ನೀಡುತ್ತೇವೆ. ಕೆಲಸ ಮಾಡಿ ಕೊಡಬೇಕಿರುವವರೂ ಇಂತಹ 'ಫಾಸ್ಟ್ ಟ್ರಾಕ್‌'ಗಳಿಗೆ ಒಗ್ಗಿಕೊಂಡಿರುವ ಕಾರಣ, ಯಾವುದೇ 'ಪ್ರಭಾವ' ಇಲ್ಲದೆ ನ್ಯಾಯೋಚಿತ ಹಾದಿಯಲ್ಲಿ ಸಾಗಿದವರ ಕೆಲಸವನ್ನು ಅಡಿಗೆ ಹಾಕಿ ಕುಳಿತುಕೊಳ್ಳುತ್ತಾರೆ. ಆದರೆ, ಭ್ರಷ್ಟಾಚಾರದ ಹೆಮ್ಮರ ಬೆಳೆಯಲು ನೀರೆರೆಯುವ ನಾವು, ಟೀಕೆ ಮಾಡುವ ರಭಸದಲ್ಲಿ ಇದನ್ನೆಲ್ಲ ಮರೆತುಬಿಡುತ್ತೇವೆ. ಇಷ್ಟಕ್ಕೂ ನಮಗೆ ನಮ್ಮ ಕೆಲಸ ಸುಸುತ್ರವಾಗಿ ಸರಾಗವಾಗಿ ಆದರೆ ಸಾಕು ತಾನೆ?

ಭಯೋತ್ಪಾದನೆ ವಿಶ್ವ ಎದುರಿಸುತ್ತಿರುವ ಪಿಡುಗು. ಪ್ರಭಾವಶಾಲಿ ಭಾರತವೂ ಇದರಿಂದ ಹೊರತಾಗಿಲ್ಲ. ಸ್ವತಂತ್ರ ಭಾರತದ ಉದಾರವಾದಿ ಕಾನೂನು, 'ಭಾವನೆಗಳಿಗೆ ಲಭಿಸುವ' ಗೌರವ, ಮಾನವೀಯತೆ ಇಂತಹವುಗಳನ್ನು ಮಟ್ಟಹಾಕಲು ಅಡ್ಡಿಯಾಗುತ್ತದೆ. ಇದರಿಂದಾಗೇ, ಸಂಸತ್ ಭವನದ ಮೇಲೆ ದಾಳಿಮಾಡಿರುವ ಅಫ್ಜಲ್‌ಗುರುವಿನಂತಹವರ ವಿರುದ್ಧ ಕ್ರಮಕೈಗೊಳ್ಳಲೂ ಕಾನೂನು ತೊಡಕು ಅಡ್ಡಿಯಾಗುತ್ತದೆ.

ಭಾರತದಂತಹ ಅತಿ ವಿಶಾಲವಾದ, ಜಾತ್ಯತೀತ, ಪ್ರಜಾತಂತ್ರದ ನೆಲೆಗಟ್ಟಿನ, ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರದಲ್ಲಿ ಯೋಜನೆಯೊಂದು ರಾತ್ರಿಬೆಳಗಾಗುವುದರೊಳಗೆ ಅನುಷ್ಠಾನ ಆಗಬೇಕೆಂದರೆ ಕಷ್ಟಸಾಧ್ಯ. ಚಿಕ್ಕಪುಟ್ಟ ರಾಷ್ಟ್ರಗಳಲ್ಲಿ ನಮ್ಮಲ್ಲಿರುವಂತಹ ಅಡ್ಡಿ ಆತಂಕಗಳು ಇರುವುದಿಲ್ಲ. ಸರಕಾರ ಒಂದು ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ. ವಿರೋಧ ಪಕ್ಷಗಳು(ಅವುಗಳ ಹೆಸರಿನಂತೆ!) ವಿರೋಧಿಸುತ್ತವೆ. (ಇಲ್ಲವಾದರೆ ಎನ್‌ಜಿಒಗಳು ವಿರೋಧಿಸುತ್ತವೆ) ಕಾರ್ಯಕ್ರಮ ನನೆಗುದಿಗೆ ಬೀಳುತ್ತದೆ. (ಕಾನೂನು ನಿರ್ಮಾಪಕರ ಭತ್ಯೆ ಅಥವಾ ಇತರ ಸವಲುತ್ತುಗಳು ಮಾತ್ರ ಇದಕ್ಕೆ ಅಪವಾದ) ಬಳಿಕ ವಿರೋಧ ಪಕ್ಷವಾಗಿದ್ದವರು ಅಧಿಕಾರಕ್ಕೆ ಬರುತ್ತಾರೆ. ಆ ಕಾರ್ಯಕ್ರಮಕ್ಕೆ ಬೇರೆಹೆಸರಿಟ್ಟೋ ಇಲ್ಲ ಒಂದಿಷ್ಟು ಬದಲಾವಣೆಯೊಂದಿಗೆ ಆ ಕಾರ್ಯಕ್ರಮವನ್ನು ಜಾರಿಗೆ ತರಲು ಪ್ರಯತ್ನಿಸುತ್ತಾರೆ. ಆಗ, ಈ ಹಿಂದೆ ಅಧಿಕಾರದಲ್ಲಿದ್ದು, ಪ್ರಸ್ತುತ ವಿರೋಧ ಪಕ್ಷಗಳ ಸ್ಥಾನದಲ್ಲಿರುವವರು ವಿರೋಧಿಸುತ್ತಾರೆ. ಏನಿಲ್ಲವಾದರೆ ಒಂದೆರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಾದರೂ ಸಲ್ಲಿಸಲ್ಪಡುತ್ತವೆ. ಪ್ರಕರಣ ನ್ಯಾಯಾಲಯಕ್ಕೆ ತೆರಳುತ್ತದೆ. ತನಿಖೆಗೆ ಸಮಿತಿಯ ನೇಮಕವಾಗುತ್ತದೆ. ಸಮಿತಿಯು ವರದಿ ಸಲ್ಲಿಕೆಗೆ ಸಮಯಾವಕಾಶ ಕೋರುತ್ತದೆ. ಇವುಗಳನ್ನೆಲ್ಲ ಸಂಭಾಳಿಸಿಕೊಂಡು ಒಂದು ಕಾರ್ಯ ಅನುಷ್ಠಾನಕ್ಕೆ ಬರಬೇಕಾದರೆ ಅದಕ್ಕೆ ಅದರದ್ದೇ ಆದ ಸಮಯ ಹಿಡಿಯುವುದಿಲ್ಲವೇ?

webdunia
WD
ಜನರಿಂದ ತುಂಬಿಹೋಗಿರುವ, ಪ್ರಸ್ತುತ 110 ಕೋಟಿ ದಾಟಿರುವ ಜನಸಂಖ್ಯೆಯ ಈ ನಮ್ಮ ಬೃಹತ್ ನಾಡಿನಲ್ಲಿ ವಿಶ್ವಮಟ್ಟದ ಕ್ರೀಡಾಕೂಟ ಒಲಿಂಪಿಕ್ಸ್‌ನಲ್ಲಿ ಒಂದೇ ಒಂದು ಚಿನ್ನ ಪಡೆಯುವ ಯೋಗ್ಯತೆ ಇಲ್ಲ ಎಂದು ನಮ್ಮನ್ನು ನಾವೇ ಹಳಿದುಕೊಳ್ಳುತ್ತಿದ್ದೆವು. ಹೇ... ಭಾರತಕ್ಕೆ ಪದಕ, ಚಿನ್ನ - ನಿಮಗೆಲ್ಲೂ ಭ್ರಾಂತು ಎಂಬ ಹೀಗಳಿಕೆಯ ಮಾತುಗಳು ಕೇಳಿಬರುತ್ತಿದ್ದೆವು.

ಆದರೆ, ಆಗಸ್ಟ್ 11ರ ಸೋಮವಾರದಂದು ಏನಾಯಿತು? ಅಭಿನವ್ ಬಿಂದ್ರಾ ರೂಪದಲ್ಲಿ ಭಾರತಕ್ಕೆ ಚಿನ್ನ ಬರಲಿಲ್ಲವೇ? 10 ಮೀಟರ್ ಏರ್ ರೈಫಲ್ ಶೂಟಿಂಗ್‌ನ ವೈಯಕ್ತಿಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು 108 ವರ್ಷಗಳ ಚಿನ್ನದ ಪದಕದ ಬರ ನೀಗಲಿಲ್ಲವೇ? ಒಡನೆಯೇ 'ಮೇರಾ ಭಾರತ್ ಮಹಾನ್' ಎಂಬ ಎಸ್ಎಂಎಸ್‌ಗಳು ಹರಿದಾಡಲಿಲ್ಲವೇ? ವ್ಯವಸ್ಥೆ ಯಾವುದೇ ರೀತಿಯಲ್ಲಿ ಗಬ್ಬೆದ್ದು ಹೋದರೂ, ಪ್ರತಿಭೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದು ಇದಕ್ಕೆ ಸಾಕ್ಷಿ. ಸೋಮವಾರ ಅಭಿನವ್ ಫೈನಲ್ ಪ್ರವೇಶಿಸುವ ತನಕವೂ ಅವರು ಹೆಸರು ಅಷ್ಟೊಂದು ಕೇಳಿಬರುತ್ತಿರಲಿಲ್ಲ. ರಾಜವರ್ಧನ್ ರಾಥೋಡ್ ಮತ್ತು ಸಾನಿಯಾ ಹೆಸರುಗಳ ನಡುವೆ ಮರೆಯಾಗಿತ್ತು. ಅಭಿವೃದ್ಧಿ, ಯಶಸ್ಸು, ಸಾಧನೆಗಳಿಗೆ ತಾಳ್ಮೆ - ವ್ಯವಧಾನಗಳು ಬೇಕೆಂಬ ಮೂಲ ಅಂಶವನ್ನೇ ಮರೆತುಬಿಡುತ್ತೇವೆ ನಾವು!

ಮೂಲಸೌಕರ್ಯಗಳ ಬಗ್ಗೆ ಮಾತನಾಡುತ್ತಾ ವಿದೇಶಗಳಲ್ಲಿರುವ ಸವಲತ್ತುಗಳನ್ನು ಬೆಟ್ಟು ಮಾಡುತ್ತೇವೆ. ಒಂದಿಪ್ಪತ್ತು ವರ್ಷಗಳ ಹಿಂದೆ ಸಾರಿಗೆ ಸೌಲಭ್ಯವೇ ಇಲ್ಲದಂತಹ ಊರುಗಳೂ ಇಂದು ರಸ್ತೆ, ವಿದ್ಯುತ್, ನೀರು ಮುಂತಾದ ಸೌಲಭ್ಯಗಳನ್ನು ಖಂಡಿತಾ ಪಡೆದಿವೆ. ಆದರೆ ಸರಕಾರದ ಆಸ್ತಿ ಎಂದರೆ ಅದನ್ನು ನಾವು ಜೋಪಾನ ಮಾಡುತ್ತೇವಾ? ಬೀದಿ ದೀಪಕಂಡರೆ ಕಲ್ಲುಹೊಡೆಯುತ್ತೇವೆ.

ಈಗ್ಗೆ ಎರಡ್ಮೂರು ವರ್ಷಗಳ ಹಿಂದೆ ನಾನು ಮಂಗಳೂರಿನ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಒಂದು ದಿನ ಆಫೀಸಿಗೆ ಹೋಗುತ್ತಿರಬೇಕಿದ್ದರೆ ಮುಂಜಾನೆ ಸುಮಾರು 9 ಗಂಟೆಯ ಹೊತ್ತಿಗೆ ಕೂಳೂರು ಎಂಬಲ್ಲಿಂದ ಉರ್ವಾಸ್ಟೋರ್ ತನಕ ಎಲ್ಲ ಬೀದಿದೀಪಗಳು ಉರಿಯುತ್ತಿತ್ತು. ಛೇ ಎಷ್ಟೊಂದು ವಿದ್ಯುತ್ ಪೋಲಾಗುತ್ತಿದೆ ಎಂದೆನಿಸಿದ ನಾನು ಮೆಸ್ಕಾಂಗೆ ಪೋನ್ ಮಾಡಿ ಈಗಲೂ ಬೀದಿದೀಪಗಳು ಉರಿಯುತ್ತಿವೆ ಎಂಬ ದೂರು ಕೊಟ್ಟೆ. ಅಲ್ಲಿಂದ ಬಂದ ಉತ್ತರ ಕೇಳಿ ದಂಗಾಗಿ ಹೋದೆ. "ಬೀದಿ ದೀಪ ಕಾರ್ಪೋರೇಶನ್‌ಗೆ ಸಂಬಂಧ ಪಟ್ಟದ್ದು, ನೀವು 'ಬೇಕಿದ್ದರೆ' ಅಲ್ಲಿಗೆ ಪೋನ್ ಮಾಡಿ, ನಮಗೂ ಅದಕ್ಕೂ ಸಂಬಂಧವಿಲ್ಲ!" ನಗರಪಾಲಿಕೆಗೆ ಪೋನ್‌ಮಾಡಿದರೆ, ಅದು ನಮ್ಮ ವಿಭಾಗವಲ್ಲ ಇನ್ನೊಂದು ವಿಭಾಗ ಎಂಬ ಉತ್ತರ ಬಂತು. ಯಾಕೆ ನಿಮಗೆ ಈ ವಿಷಯವನ್ನು ಸಂವಹಿಸಲು ಆಗುವುದಿಲ್ಲವೇ ಎಂಬ ಪ್ರಶ್ನೆಗೆ ಉಡಾಫೆಯ ಉತ್ತರ. ಇಂತಹವರಲ್ಲಿ ಯಾವಾಗ ಈ ಪ್ರಜ್ಞೆ ಹುಟ್ಟಿಕೊಳ್ಳುತ್ತದೆ?

ಬಸ್‌ನಿಲ್ದಾಣ, ರೈಲು ನಿಲ್ದಾಣಗಳಲ್ಲಿ ಛೀ....ಛೀ.. ಎಷ್ಟೊಂದು ಗಲೀಜು ಎಂದು ಮೂಗು ಮುರಿಯುತ್ತ ನಮ್ಮ ಮಕ್ಕಳನ್ನು ಅಲ್ಲೇ ಉಚ್ಚೆಹೊಯ್ಯಲು ಬಿಡುತ್ತೇವೆ. ಅಯ್ಯಯ್ಯೋ ವಾಸನೆಯೇ ಅನ್ನುತ್ತಾ ಅಲ್ಲೇ ಪಿಚಕ್ಕನೆ ಉಗುಳಿ ಆ ಗಲೀಜಿಗೆ ನಮ್ಮದೂ ಕಿರುಕಾಣಿಕೆ ಸಲ್ಲಿಸಿ, 'ಸಾರ್ವಜನಿಕರಿಗೆ' ನಾಗರಿಕ ಪ್ರಜ್ಞೆಯೇ ಇಲ್ಲ ಎಂಬ ಬೇಸರ ವ್ಯಕ್ತಪಡಿಸುತ್ತೇವೆ. ಬದಲಾವಣೆ ಆಕಾಶದಿಂದ ಇಳಿದು ಬರಬೇಕು ಎಂದು ಬಯಸುವ ನಾವು, ಇದು ನಮ್ಮಿಂದಲೇ ಯಾಕೆ ಆರಂಭವಾಗಬಾರದು ಎಂಬ ರೀತಿಯ ಚಿಂತನೆಗೆ ನಮ್ಮನ್ನು ಹಚ್ಚಿಕೊಳ್ಳುವುದಿಲ್ಲ.
  ಉಡಾಫೆ ಅಥವಾ ಉದ್ಧಟತನ ನಿರ್ಭಿಡೆಯಾ? ಸ್ವೇಚ್ಚೆಯೇ ಸ್ವಾತಂತ್ರ್ಯವಾ      

ಇನ್ನೂ ಕೆಲವೆಡೆ ವೈಯಕ್ತಿಕ ಸ್ವಾತಂತ್ರ್ಯ ಹರಣದ ಬೊಬ್ಬೆಗಳು ಕೇಳುತ್ತಿವೆ. ಉಡಾಫೆ ಅಥವಾ ಉದ್ಧಟತನದ ವರ್ತನೆಯನ್ನು ನಿರ್ಬಿಢೆ ಅಥವಾ ಸುಧಾರಣೆ ಎಂದುಕೊಳ್ಳುತ್ತೇವೆ. ನಾವು ಸಾಗುತ್ತಿರುವ ಹಾದಿ ಸೂಕ್ತವಾದುದೇ ಎಂಬತ್ತ ಗಮನ ಹರಿಸದೆ, ಸ್ವೇಚ್ಛೆಯಿಂದ ವರ್ತಿಸುತ್ತಾ, ಇತರರ ತೇಜೋವಧೆ ಮಾಡುತ್ತಾ, ಬಾಯಿಗೆ ಬಂದಂತೆ ಅರುಹುತ್ತಾ ನಮ್ಮ ತಲೆಮೇಲೆಯೇ ಚಪ್ಪಡಿ ಎಳೆದುಕೊಳ್ಳುತ್ತಾ, ನಮಗಿರುವ ನೈಜ ಸ್ವಾತಂತ್ರ್ಯವನ್ನು ನಾವೇ ತುಳಿದುಕೊಳ್ಳುತ್ತೇವೆ. ಸ್ವೇಚ್ಚಾಚಾರ ಅಥವಾ ಉದ್ಧಟತನಗಳು ಕ್ರಾಂತಿಯಾಗುತ್ತದಾ? ಇಲ್ಲ ಇದುವೇ ಸ್ವಾತಂತ್ರ್ಯವೇ? ತಮ್ಮ ದೌರ್ಬಲ್ಯಗಳನ್ನು ಮುಚ್ಚಿಡುತ್ತೇವೆ. ಇದನ್ನು ಮರೆಮಾಚಲು ದಬ್ಬಾಳಿಕೆ, ಶೋಷಣೆ ಮುಂತಾದ ಶಬ್ದಗಳ ಮೂಲಕ ನಮ್ಮ ಮಾತನ್ನು ಅಲಂಕರಿಸುತ್ತೇವೆ. ನಮ್ಮ ಮೇಲೆ ಸ್ವಯಂಮರುಕ ಸೂಚಿಸಿಕೊಳ್ಳುತ್ತಾ ಇತರರಿಂದ 'ಅಯ್ಯೋ ಪಾಪ' ಗಿಟ್ಟಿಸುವ ಪ್ರಯತ್ನ ಮಾಡುತ್ತೇವೆ.

"No man looses his freedom except through his own weakness" ತನ್ನದೇ ದೌರ್ಬಲ್ಯದ ಹೊರತಾಗಿ ಯಾವುದೇ ವ್ಯಕ್ತಿ ತನ್ನ ಸ್ವಾತಂತ್ರ್ಯ ಕಳೆದುಕೊಳ್ಳುವುದಿಲ್ಲ - ಇದು ರಾಷ್ಟ್ರಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ನಾಯಕರ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಮಹಾತ್ಮ ಗಾಂಧೀಜಿಯವರು ಹೇಳಿರುವ ಮಾತು.

Share this Story:

Follow Webdunia kannada