Select Your Language

Notifications

webdunia
webdunia
webdunia
webdunia

ಮಹಾತ್ಮ ಗಾಂಧೀಜಿಗಿಲ್ಲಿ ನಿತ್ಯವೂ ಆರತಿ-ಅರ್ಚನೆ

ಮಹಾತ್ಮ ಗಾಂಧೀಜಿಗಿಲ್ಲಿ ನಿತ್ಯವೂ ಆರತಿ-ಅರ್ಚನೆ
ಅವಿನಾಶ್
ದೇವರನ್ನು ನೋಡಿದವರಿಲ್ಲ. ಅವನು ಹೇಗಿರುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕಾಗಿ ಕಲ್ಪನಾರೂಪ ನೀಡಿಕೊಂಡ ಮಾನವ, ಆ ಕಾಣದ ದೇವರ ಪ್ರತಿಮೆ ಮಾಡಿ ಭಕ್ತಿಯನ್ನು ತೋರ್ಪಡಿಸಿ ಭಯಾತಂಕಗಳನ್ನು ಹೋಗಲಾಡಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ಒಂದಷ್ಟು ಉದಾರವಾಗಿ ಯೋಚಿಸಿದರೆ, ಪ್ರತಿಯೊಬ್ಬ ಮಾನವ ಜೀವಿಯೂ ದೈವಾಂಶಸಂಭೂತ. ಇದು ಬಹುತೇಕ ಎಲ್ಲ ಧರ್ಮಗಳ ತಿರುಳು ಕೂಡ ಹೌದು.

WD
ಇಂತಿರಲು, ಕೇವಲ ಓಟಿಗಾಗಿಯೇ ಗಾಂಧಿ ಹೆಸರನ್ನು ಬಳಸಿಕೊಳ್ಳುತ್ತಿರುವವರನ್ನು ನೋಡುತ್ತಿದ್ದೇವೆ, ಕೇಳುತ್ತಲೇ ಇದ್ದೇವೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಪ್ರಧಾನ ಪಾತ್ರ ವಹಿಸಿದ್ದಾರೆ ಅಂತ ನಾವೆಲ್ಲ ಓದಿದ, ಕೇಳಿದ ಮತ್ತು ಸತ್ಯ, ಅಹಿಂಸೆ, ತ್ಯಾಗಗಳ ಪ್ರತೀಕವಾಗಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅಕ್ಷರಶಃ ಪೂಜಿಸುವವರ ಬಗ್ಗೆ ಕೇಳಿರುವುದು ಅಪರೂಪ. ಹೌದು. ಅಂಥದ್ದೊಂದು ತಾಣವನ್ನು ಇಲ್ಲಿ ಪರಿಚಯಿಸಲಾಗುತ್ತಿದೆ.

ಕರ್ನಾಟಕ ಕರಾವಳಿಯ ಕೇಂದ್ರ ಭಾಗವಾಗಿರುವ ಮಂಗಳೂರಿನ ಕಂಕನಾಡಿ ಸಮೀಪ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರವಿದೆ. ಇದು ಇರುವುದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-48ರ ಪಕ್ಕ. ಗಾಂಧೀಜಿಗಾಗಿ ಕಟ್ಟಿಸಲಾದ ಆಲಯವೊಂದು ಇಲ್ಲಿ ನಮ್ಮನ್ನು ಆಕರ್ಷಿಸುತ್ತದೆ... ಇಲ್ಲಿ ಗಾಂಧೀಜಿಗೆ ದಿನಂಪ್ರತಿ ಅರ್ಚನೆ, ಆರತಿ ನಡೆಯುತ್ತಲೇ ಇರುತ್ತದೆ. ಬ್ರಹ್ಮಶ್ರೀ ನಾರಾಯಣಗುರುಗಳ ಗುಡಿಯ ಪಕ್ಕದಲ್ಲಿರುವ ಗಾಂಧೀಜಿಗೂ ಎರಡು ಹೊತ್ತು 2 ಬಾಳೆಹಣ್ಣು, ಒಂದು ಕುಡ್ತೆ ಹಾಲು ಮತ್ತು ಅಕ್ಕಿಯನ್ನು ನೈವೇದ್ಯವಾಗಿ ಅರ್ಪಣೆ ಮಾಡಲಾಗುತ್ತದೆ.
webdunia
WD

ಇಲ್ಲಿ ಮಹಾತ್ಮ ಗಾಂಧೀಜಿ ಅವರು ಕೈಯಲ್ಲೊಂದು ಪುಸ್ತಕ ಹಿಡಿದು ಓದುತ್ತಿರುವ ಭಂಗಿಯಲ್ಲಿ ವಿರಾಜಮಾನರಾಗಿದ್ದಾರೆ. ಈ ಗುಡಿಯನ್ನು ನಿರ್ಮಿಸಿ ಗಾಂಧೀಜಿಯನ್ನು ಪ್ರತಿಷ್ಠಾಪಿಸಿದ್ದು 1948ರ ಡಿಸೆಂಬರ್ 12ರಂದು. ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2ರಂದು ಈ ಕ್ಷೇತ್ರದ ಎಲ್ಲ ದೇವರಿಗೂ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಮಾತ್ರವಲ್ಲ ಬ್ರಹ್ಮ, ಗಣಪತಿ ವಿಗ್ರಹಗಳನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಬಲಿ ಮೆರವಣಿಗೆಯನ್ನೂ ಮಾಡಲಾಗುತ್ತದೆ.

webdunia
WD
ಗರಡಿ ಬಗ್ಗೆ ಒಂದು ಮಾತು. ಬ್ರಹ್ಮ ಬೈದರ್ಕಳ ಗರಡಿ ಎಂಬುದು ತುಳುನಾಡಿನ ವೀರ ಸೋದರರೂ ಕಾರಣಿಕ ಪುರುಷರೂ ಆಗಿರುವ ಕೋಟಿ-ಚೆನ್ನಯ ಅವರಿಗೆ ಸಂಬಂಧಿಸಿದ್ದು. ತುಳುನಾಡಿನಲ್ಲಿ ಕೋಟಿ-ಚೆನ್ನಯರ ಪರಾಕ್ರಮ, ತ್ಯಾಗ-ಬಲಿದಾನ, ಕಾರಣಿಕಗಳು ಜನಜನಿತ. ಅವರ ಕಾರಣಿಕ ಶಕ್ತಿಯಿಂದಾಗಿಯೇ ಜನರು ಇಂದಿಗೂ ಈ ವೀರ ಸೋದರರನ್ನು ಗುಡಿ ಕಟ್ಟಿ ಆರಾಧಿಸುತ್ತಾರೆ. ಇವರಿಬ್ಬರೂ ದೇವರ ಅವತಾರ ಎಂದು ಪೂಜಿಸಲ್ಪಡುತ್ತಿದ್ದಾರೆ. 1874ರ ಮಾರ್ಚ್ 4ರಂದು ಈ ಗರಡಿ ಕ್ಷೇತ್ರವನ್ನು ನಿರ್ಮಿಸಲಾಯಿತು ಎಂದು ದಾಖಲೆಗಳು ವಿವರಿಸುತ್ತವೆ. ಈ ಗರಡಿಯ ಅಧಿದೈವ ಕೊಡಮಣಿತ್ತಾಯ. ಕೋಟಿ-ಚೆನ್ನಯ ಮತ್ತು ಅವರ ಸಹೋದರಿ ಮಾಯಂದಾಳ್ ವಿಗ್ರಹಗಳಿಗೂ ಇಲ್ಲಿ ಪೂಜೆ ಸಲ್ಲುತ್ತದೆ. ಇಷ್ಟು ಮಾತ್ರವಲ್ಲದೆ ಈ ಕ್ಷೇತ್ರದ ಆವರಣದಲ್ಲಿ ಆನಂದಭೈರವ, ಸುಬ್ರಹ್ಮಣ್ಯ, ಗಣಪತಿ, ಬ್ರಹ್ಮಶ್ರೀ ನಾರಾಯಣಗುರು ಮತ್ತು ಬಾಲಪರಮೇಶ್ವರಿ ವಿಗ್ರಹಗಳಿಗೂ ಪೂಜೆ ಸಲ್ಲುತ್ತದೆ.

ಈ ಕ್ಷೇತ್ರದ ವ್ಯವಸ್ಥಾಪಕರಾಗಿದ್ದ ಸೋಮಪ್ಪ ಪಂಡಿತ್ ಅವರು ಕಟ್ಟಾ ಗಾಂಧೀವಾದಿ ಮತ್ತು ಅಧ್ಯಕ್ಷ ನರಸಪ್ಪ ಸಾಲಿಯಾನ್ ಕೂಡ ಗಾಂಧೀಜಿಯವರ ಕಟ್ಟಾ ಅನುಯಾಯಿ. ಇವರಿಬ್ಬರು ಕಂಡ ಕನಸಿನ ಫಲವಾಗಿ, ಶಾಂತಿ ಮತ್ತು ಅಹಿಂಸೆಯ ದ್ಯೋತಕವಾಗಿ ಗಾಂಧೀಜಿಗಾಗಿ ಈ ಗುಡಿಯನ್ನು ಕಟ್ಟಿಸಲಾಗಿದ್ದು, ಗಾಂಧಿ ವಿಗ್ರಹವನ್ನು ವೆಂಕಪ್ಪ ಸಾಲಿಯಾನ್ ಎಂಬವರು ಉದಾರವಾಗಿ ಕೊಡುಗೆ ನೀಡಿದ್ದರು.
webdunia
WD

ಈ ಕ್ಷೇತ್ರ ಸಂದರ್ಶನಕ್ಕೆ ಬಂದವರು ಶಾಂತಿ, ಸೌಹಾರ್ದತೆ ಮತ್ತು ಅಹಿಂಸೆಯನ್ನೇ ಅಸ್ತ್ರವಾಗಿಸಿಕೊಂಡ ರಾಷ್ಟ್ರಪಿತನಿಗೂ ವಂದನೆ ಸಲ್ಲಿಸಲು ಮರೆಯುವುದಿಲ್ಲ. ಈ ವಿಶೇಷತೆಯೊಂದಿಗೆ ಈ ಕ್ಷೇತ್ರವು ಆಕರ್ಷಣೆಯೊಂದಿಗೆ ಕುತೂಹಲದ ಕೇಂದ್ರವಾಗಿದೆ.

ಹೀಗಾಗಿ, ನೀವೊಮ್ಮೆ ಮಂಗಳೂರಿಗೆ ಭೇಟಿ ನೀಡಿದಾಗ, ನಗರದ ಕೇಂದ್ರಭಾಗದಿಂದ 3 ಕಿ.ಮೀ. ದೂರದಲ್ಲಿರುವ ಈ ಕ್ಷೇತ್ರವನ್ನು ನೋಡಲು ಮರೆಯದಿರಿ.

ಚಿತ್ರ ಮತ್ತು ವೀಡಿಯೋ: ಇಮೇಜ್ ಸ್ಟುಡಿಯೋ, ಮಂಗಳೂರು

Share this Story:

Follow Webdunia kannada